ದೇಶದ ಟೆಕ್ ದೈತ್ಯ ಸಂಸ್ಥೆ ಇನ್ಫೋಸಿಸ್ ಯಾರಿಗೆ ಗೊತ್ತಿಲ್ಲ ಹೇಳಿ, ಇದರ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಹಾಗೂ ಅವರ ಪತ್ನಿ ಲೇಖಕಿ, ಲೋಕೋಪಕಾರಿ ಆಗಿರುವ ಸುಧಾಮೂರ್ತಿ ಕೂಡಾ ಅಷ್ಟೇ ಪ್ರಸಿದ್ದರು. ಈ ಸಂಸ್ಥೆ ಇಂದು 5.65 ಟ್ರಿಲಿಯನ್ ರೂಪಾಯಿಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
ಜೊತೆಗೆ ಲಕ್ಷಾಂತರ ಮಂದಿ ಈ ಸಂಸ್ಥೆಯ ಉದ್ಯೋಗಿಗಳಾಗಿದ್ದಾರೆ. ಇಷ್ಟೆಲ್ಲಾ ಇದ್ದರೂ ಬಿಲಿಯನೇರ್ ನಾರಾಯಣ ಮೂರ್ತಿಯವರ ಏಕೈಕ ಪುತ್ರ ರೋಹನ್ ಮೂರ್ತಿ ಇನ್ಫೋಸಿಸ್‌ನ ಷೇರುದಾರರಾದರೂ, ಆಡಳಿತದ ಭಾಗವಾಗಿಲ್ಲ ಎಂಬುವುದು ಅಚ್ಚರಿಯಾದರೂ ಸತ್ಯ. ಯಾಕೆ ಎಂಬ ವಿವರ ಇಲ್ಲಿದೆ ಮುಂದೆ ಓದಿ...

ರೋಹನ್ ಮೂರ್ತಿ ಇನ್ಫೋಸಿಸ್‌ನ ಕೆಲಸ ಮಾಡಲ್ಲವೇಕೆ?
ತಮ್ಮ ಸ್ವಂತ ಗುರುತನ್ನು ಹುಟ್ಟುಹಾಕಲು ಇಷ್ಟಪಡುವ ರೋಹನ್ ಮೂರ್ತಿ, ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಗಳ ಪುತ್ರನಾಗಿದ್ದಾರೆ. ಇವರ ಸಹೋದರಿ ಅಕ್ಷತಾ ಮೂರ್ತಿ, ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿಯಾಗಿದ್ದಾರೆ. ರೋಹನ್ ಮೂರ್ತಿ, ಅಧಿಕೃತವಾಗಿ ಇನ್ಫೋಸಿಸ್‌ನ ಕೋಟಿ ಕೋಟಿ ಆಸ್ತಿಯ ಒಡೆಯರು. ಆದರೆ ಎನ್‌ಆರ್ ನಾರಾಯಣ ಮೂರ್ತಿ ಅವರ ನಂತರ ಇನ್ಫೋಸಿಸ್ ಗೆ ತಂದೆಯ ಉತ್ತರಾಧಿಕಾರಿಯಾಗದೇ, ರೋಹನ್ ತನಗಾಗಿ ಸ್ವತಂತ್ರ ಮಾರ್ಗವನ್ನು ರೂಪಿಸಿಕೊಂಡಿದ್ದಾರೆ.
ಆರಂಭಿಕ ದಿನಗಳು:
ರೋಹನ್ ಮೂರ್ತಿಯವರ ಯಶಸ್ಸಿನ ಅಡಿಪಾಯವು ಚಿಕ್ಕ ವಯಸ್ಸಿನಲ್ಲಿಯೇ ಹಾಕಲ್ಪಟ್ಟಿತು ಎಂದರೆ ತಪ್ಪಾಗಲಾರದು. ಅವರು ಪೋಷಕರು ಪ್ರಸಿದ್ಧರಾಗಿದ್ದು, ಅವರ ಪೋಷಣೆಯೊಂದಿಗೆ ಮನೆಯಲ್ಲಿ ಬೆಳೆದರು. ಅಲ್ಲಿ ಅವರು ತಮ್ಮ ಜೀವನದ ಮೇಲೆ ಪ್ರಭಾವ ಬೀರಿದ ಪ್ರೋಗ್ರಾಮಿಂಗ್‌ಗಾಗಿ ತಮ್ಮಲ್ಲಿದ್ದ ಉತ್ಸಾಹವನ್ನು ಕಂಡುಹಿಡಿದರು.
ಬೆಂಗಳೂರಿನ ಬಿಷಪ್ ಕಾಟನ್ ಹುಡುಗರ ಶಾಲೆಯಲ್ಲಿ ರೋಹನ್ ಮೂರ್ತಿ, ತಮ್ಮ ಶಾಲಾ ಶಿಕ್ಷಣವನ್ನು ಪೂರೈಸಿದರು. ನಂತರ, ಅವರು ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಪಡೆದರು. ಆ ಬಳಿಕ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ತಮ್ಮ ಪಿಎಚ್‌ಡಿಯನ್ನು ವಿಶೇಷವಾಗಿ opportunistic wireless networks ನ ವಿಷಯದಲ್ಲಿ ಪೂರ್ಣಗೊಳಿಸಿದರು.
ಸ್ವಂತ ಕಂಪನಿ ಸ್ಥಾಪಿಸಿದ ರೋಹನ್:
ರೋಹನ್ ಮೂರ್ತಿ ಅವರು ಡಾಕ್ಟರೇಟ್ ಗಳಿಸಿದ ನಂತರ ತಾಂತ್ರಿಕ ಆವಿಷ್ಕಾರದ ಹಾದಿಯನ್ನು ಪ್ರಾರಂಭಿಸಿದರು. ಅವರು ಖ್ಯಾತ ಕಂಪ್ಯೂಟರ್ ವಿಜ್ಞಾನಿಗಳಾದ ಅರ್ಜುನ್ ನಾರಾಯಣ್ ಮತ್ತು ಜಾರ್ಜ್ ನೈಚಿಸ್ ಅವರೊಂದಿಗೆ 2014 ರಲ್ಲಿ ಸೊರೊಕೊವನ್ನು ಸಹ-ಸ್ಥಾಪಿಸಿದರು.
ಕೃತಕ ಬುದ್ಧಿಮತ್ತೆ ಸಂಪನ್ಮೂಲಗಳನ್ನು ಬಳಸಿಕೊಂಡು ತಂತ್ರಜ್ಞಾನದಲ್ಲಿ ಪರಿಣತಿ ಹೊಂದುವ ಮೂಲಕ ವ್ಯವಹಾರಗಳು ಡಿಜಿಟಲ್ ರೂಪಾಂತರವನ್ನು ನಿರ್ವಹಿಸುವ ವಿಧಾನವನ್ನು ಕಂಪನಿಯು ಮಾರ್ಪಡಿಸಿದೆ. ಆರಂಭದಲ್ಲಿ ರೋಹನ್ ಈ ಉದ್ಯಮದ ತಾಂತ್ರಿಕ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದರು.
ಇತ್ತೀಚಿನ ವರ್ಷಗಳಲ್ಲಿ, ಕಂಪನಿಯು ಕ್ಷಿಪ್ರವಾಗಿ ಬೃಹತ್ ವಿಸ್ತರಣೆ ಮಾಡಿದೆ. ಸೊರೊಕೊ ಈಗ ಜಾಗತಿಕವಾಗಿ 500 ಮಿಲಿಯನ್ ವೈಟ್ ಕಾಲರ್ ಉದ್ಯೋಗಿಗಳನ್ನು ಒಳಗೊಂಡಿರುವ 15 ಬಿಲಿಯನ್ ಡಾಲರ್ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವ ಭರವಸೆಯಲ್ಲಿ ಮಹತ್ವಾಕಾಂಕ್ಷೆಯ ಕಾರ್ಯತಂತ್ರಗಳನ್ನು ಮಾಡುತ್ತಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ.
ಸೊರೊಕೊ ತನ್ನ ಆದಾಯದ ಅಂಕಿಅಂಶಗಳನ್ನು ಬಹಿರಂಗ ಮಾಡದಿದ್ದರೂ, ನೆಲ್ಸನ್‌ಹಾಲ್ ವೆಂಡರ್ ಮೌಲ್ಯಮಾಪನ ಮತ್ತು ಅಸೆಸ್‌ಮೆಂಟ್ ಟೂಲ್ (NEAT) ಸೊರೊಕೊದ ಟಾಪ್- ಲೈನ್ ಆದಾಯವು 2022 ರಲ್ಲಿ 18 ಮಿಲಿಯನ್ ಡಾಲರ್ (1,48,06,75,500 ರೂಪಾಯಿ ಅಥವಾ 148 ಕೋಟಿ ರೂಪಾಯಿ) ಎಂದು ಊಹಿಸಿದೆ.
ನಾರಾಯಣ ಮೂರ್ತಿಯವರ ಮಗನಾಗಿರುವ ಕಾರಣ ರೋಹನ್, 5.55 ಟ್ರಿಲಿಯನ್ (5.55 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಇನ್ಫೋಸಿಸ್ ಕಂಪನಿಯ ಬೃಹತ್ ಪಾಲನ್ನು ಪಡೆದಿದ್ದಾರೆ. ಬ್ಯುಸಿನೆಸ್ ಟುಡೇ ಪ್ರಕಾರ, 6,08,12,892 ಷೇರುಗಳನ್ನು ಹೊಂದಿರುವ ರೋಹನ್ ಮೂರ್ತಿ ಅಥವಾ ಇನ್ಫೋಸಿಸ್‌ನ ಶೇಕಡ 1.67 ರಷ್ಟು ಲಾಭಾಂಶದ ಆದಾಯದಲ್ಲಿ 106.42 ಕೋಟಿ ರೂಪಾಯಿ ಪಡೆಯುತ್ತಾರೆ.


Click it and Unblock the Notifications