ಕಳೆದ ವರ್ಷ, 2023 ಅನ್ನು ವಿಶ್ವಸಂಸ್ಥೆಯು "ಅಂತರಾಷ್ಟ್ರೀಯ ರಾಗಿ ವರ್ಷ" ಎಂದು ಘೋಷಿಸಿದೆ. ಈ ನಡುವೆ ನಮ್ಮ ಧಾರವಾಡ ಜಿಲ್ಲೆಯ ಮತ್ತಿಗಟ್ಟಿ ಗ್ರಾಮದಲ್ಲಿ 15 ಮಹಿಳೆಯರು ಒಗ್ಗೂಡಿ ಸಾಂಪ್ರದಾಯಿಕ ತಳಿಯ ರಾಗಿಯನ್ನು (ಫಿಂಗರ್ ಮಿಲೇಟ್) ಪುನರುಜ್ಜೀನವಗೊಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಹೌದು, ಸ್ಥಳೀಯ ಸ್ವ-ಸಹಾಯ ಗುಂಪು (ಎಸ್‌ಎಚ್‌ಜಿ) ಶ್ರೀ ವಿನಾಯಕ ಮಹಿಳಾ ಸ್ತ್ರೀ ಶಕ್ತಿ ಸಂಘದ ಸದಸ್ಯರು ಈ ಕಾರ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಸುಮಾರು 77 ರಾಗಿ ತಳಿಯನ್ನು ಬೆಳೆಯುವಲ್ಲಿ ಈ ಮಹಿಳೆಯರನ್ನು ಯಶಸ್ವಿಯಾಗಿದ್ದಾರೆ. ಯಾವೆಲ್ಲ ತಳಿ ಇದೆ ಎಂಬ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ.....

ಯಾವೆಲ್ಲ ತಳಿಯಿದೆ ನೋಡಿ
ಈ ರಾಗಿ ಬೆಳೆಯುವುದನ್ನು ಜೂನ್ 2023 ರಲ್ಲಿ ಪ್ರಾರಂಭ ಮಾಡಲಾಗಿದೆ. ವಿವಿಧ ಪ್ರದೇಶಗಳಿಂದ ಪಡೆದ ರಾಗಿ ತಳಿಗಳು ಹಳ್ಳಿಯಲ್ಲಿ ಗುತ್ತಿಗೆ ಪಡೆದ ಜಾಗದಲ್ಲಿ ಬೆಳೆಯಲಾಗಿದೆ. ಅವುಗಳಲ್ಲಿ ಗಿಡ್ಡ ರಾಗಿ, ತೆನೆ ರಾಗಿ, ಕಲ್ಲು ರಾಗಿ, ಉಂಡೆ ರಾಗಿ, ಕೋಳಿ ಮೊಟ್ಟೆ ರಾಗಿ, ಪಿಚ್ಚ ಕಡ್ಡಿ ರಾಗಿ, ನಾಕು ರಾಗಿ ಸೇರಿವೆ.
"ನಾವೆಲ್ಲರೂ ರೈತ ಕುಟುಂಬದಿಂದ ಬಂದವರು. ಹಿಂದೆ ಶೇಂಗಾ ಬೆಳೆಯುತ್ತಿದ್ದೆವು. ಲಾಭವು ತುಂಬಾ ಹೆಚ್ಚಿಲ್ಲ, ಆದರೆ ಸಂತೋಷ ಇದೆ. ಈ ವರ್ಷ ನಾವು ರಾಗಿಯನ್ನು ಮತ್ತೆ ಪುನರುಜ್ಜೀವನಗೊಳಿಸಲು ನಿರ್ಧರಿಸಿದೆವು. ಸಾವಯವ ಕೃಷಿಕರ ಸಂಘದ ಸಹಜ ಸಮೃದ್ಧ ಬೆಂಬಲವು ಇದೆ," ಎಂದು ಸ್ವಸಹಾಯ ಸಂಘದ ಸಂಯೋಜಕ ರತ್ನ ಪ್ರಕಾಶ್ ಹೊಸಳ್ಳಿ ಡೆಕ್ಕನ್ ಹೆರಾಲ್ಡ್‌ಗೆ ಹೇಳಿದ್ದಾರೆ.
"ನಾವು 77 ವಿವಿಧ ತಳಿಯ ರಾಗಿಗಳನ್ನು ಬೆಳೆದಿದ್ದೇವೆ. ಆದರೆ ಅವುಗಳಲ್ಲಿ ಕೆಲವು ಸೂಕ್ತವಲ್ಲದ ಹವಾಮಾನ ಮತ್ತು ಮಣ್ಣಿನ ಪರಿಸ್ಥಿತಿಗಳಿಂದ ಸಂಪೂರ್ಣವಾಗಿ ಬೆಳೆದಿಲ್ಲ," ಎಂದು ರತ್ನಾ ಸ್ಪಷ್ಟಪಡಿಸಿದ್ದಾರೆ. ನಂತರ ತಂಡವು ಬೀಜಗಳನ್ನು ಸಂಗ್ರಹಿಸಿ ಮುಂದಿನ ಹಂತಕ್ಕೆ ಸಿದ್ಧಪಡಿಸಲು ಮುಂದಾಯಿತು. ಈಗ ತಂಡವು ವಿವಿಧ ವಿಭಾಗಗಳಲ್ಲಿ ತಳಿಗಳನ್ನು ಬೆಳೆಸುತ್ತಾರೆ ಮತ್ತು ಪ್ರತಿ ತಳಿಯನ್ನು ಗುರುತಿಸಲು ಹೆಸರಿನ ಫಲಕ ಇಡುತ್ತಾರೆ.
ಸಹಜ ಸಮೃದ್ಧ ಕಾರ್ಯಕ್ರಮದ ಸಂಯೋಜಕರಾದ ಶಾಂತ್ ಕುಮಾರ್, ಈ ಮಹಿಳೆಯರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. "ನಾವು ಬೀಜಗಳು ಮತ್ತು ತಾಂತ್ರಿಕ ಬೆಂಬಲವನ್ನು ನೀಡಿದ್ದೇವೆ, ಆದರೆ ಶ್ರಮ, ಬೆವರು ಮತ್ತು ಪ್ರೀತಿ ಎಲ್ಲವೂ ಈ ಮಹಿಳೆಯರಿಗೆ ಸೇರಿದೆ," ಎಂದಿದ್ದಾರೆ.
ವಿಶೇಷವಾಗಿ ಅನಿರೀಕ್ಷಿತ ಮಳೆ ಕಾರಣದಿಂದಾಗಿ ಮಹಿಳೆಯರು ಸಾಕಷ್ಟು ಕಷ್ಟವನ್ನು ಕಂಡಿದ್ದಾರೆ. ಎಸ್‌ಎಚ್‌ಜಿ ಗುಂಪಿನ ಮತ್ತೊಬ್ಬ ಸದಸ್ಯೆ ಸರೋಜವ್ವ ಹೇಳುವಂತೆ, "ಮಳೆ ಕಣ್ಣಾಮುಚ್ಚಾಲೆ ಆಡಿದೆ. ನಮ್ಮ ಹೊಲಗಳಿಗೆ ತೀರಾ ನೀರಿನ ಅಗತ್ಯವಿತ್ತು. ಬೋರ್‌ವೆಲ್‌ನಿಂದ ನೀರು ತಂದು ಕೊಟ್ಟಿಗೆ ಗೊಬ್ಬರ, ಮಜ್ಜಿಗೆ ಬಳಸಿ ಗಿಡಗಳನ್ನು ಆರೈಕೆ ಮಾಡಿದ್ದೇವೆ. ನಮ್ಮ ಪ್ರಯತ್ನಗಳ ಮೂಲಕ ನಾವು ನಮ್ಮ ಸಾಂಪ್ರದಾಯಿಕ ರಾಗಿ ತಳಿಗಳನ್ನು ಸಂರಕ್ಷಿಸಿದ್ದೇವೆ."


Click it and Unblock the Notifications