ಭಾರತದಲ್ಲಿ ಬಂಗಾರಕ್ಕೆ ವಿಶೇಷವಾದ ಸ್ಥಾನಮಾನವನ್ನು ನೀಡಲಾಗುತ್ತದೆ. ಯಾವುದೇ ಶುಭ ಸಂದರ್ಭದಲ್ಲೂ ಚಿನ್ನದ ಆಭರಣಗಳನ್ನು ಧರಿಸುವುದು ಆಚರಣೆಯ ಪ್ರತೀಕವಾಗಿದೆ. ಧರ್ಮಬೇಧವಿಲ್ಲದೆ ವಿವಾಹ ಸಮಾರಂಭಗಳಲ್ಲಿ ಹಳದಿ ಲೋಹಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗುತ್ತದೆ. ಹಾಗಿರುವಾಗ 2023-2024ನೇ ಕೇಂದ್ರ ಬಜೆಟ್ ಮಂಡನೆಯಾದ ಬಳಿಕ ಚಿನ್ನದ ಬೇಡಿಕೆ ಅಧಿಕವಾಗಿದೆ ಎಂದು ವರದಿಯಾಗಿದೆ.
ಹೌದು, ಭಾರತದ ಪ್ರಮುಖ ರಿಟೇಲ್ ಜ್ಯುವೆಲ್ಲರಿ ಮಳಿಗೆದಾರರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೇಂದ್ರ ಬಜೆಟ್ ಮಂಡನೆಯಾದ ಬಳಿಕ ದೇಶದಲ್ಲಿ ಚಿನ್ನದ ಆಭರಣಗಳ ಬೇಡಿಕೆಯು ಅಧಿಕವಾಗಿದೆ ಎಂದು ತಿಳಿಸಿದ್ದಾರೆ ಅದಕ್ಕೆ ಮುಖ್ಯ ಕಾರಣ ಇದು ವಿವಾಹ ಸೀಸನ್ ಆಗಿರುವುದು ಕೂಡಾ ಆದೀತು ಎಂಬುವುದು ಕೆಲವು ತಜ್ಞರ ಅಭಿಪ್ರಾಯವಾಗಿದೆ.
ಹತ್ತು ಗ್ರಾಂ ಚಿನ್ನದ ಬೆಲೆಯು ಬಜೆಟ್ ಬಳಿಕ 58,689 ರೂಪಾಯಿಗೆ ಏರಿಕೆಯಾಗಿತ್ತು. ಪ್ರಮುಖವಾಗಿ ಚಿನ್ನ ಹಾಗೂ ಬೆಳ್ಳಿ ಬಾರ್‌ಗಳ ಸುಂಕವನ್ನು ಏರಿಸಿ ಘೋಷಣೆ ಮಾಡಲಾಗಿದೆ. ಅದರ ಪರಿಣಾಮವಾಗಿ ದಿಡೀರ್ ಆಗಿ ಚಿನ್ನದ ಬೆಲೆ ಏರಿಕೆಯಾಗಿತ್ತು. ಅದಕ್ಕೂ ಮುನ್ನ ಜನವರಿ ತಿಂಗಳಿನಲ್ಲಿಯೇ ಚಿನ್ನದ ದರ ನಿರಂತರವಾಗಿ ಹೆಚ್ಚಾಗುತ್ತಿತ್ತು. ಆದರೆ ಜನವರಿಯಿಂದ ಈ ತಿಂಗಳಿಗೆ 10 ಗ್ರಾಂ ಚಿನ್ನದ ಬೆಲೆಯಲ್ಲಿ 2,346 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಈಗ ಚಿನ್ನದ ಬೇಡಿಕೆ ಅಧಿಕವಾಗಿದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ.. ಮುಂದೆ ಓದಿ....
ಚಿನ್ನದ ದರ ಕೊಂಚ ಇಳಿಕೆ
ಚಿನ್ನದ ಬೆಲೆಯ ಬೆಳವಣಿಗೆಯ ಬಗ್ಗೆ ಜೋಯ್ ಆಲುಕ್ಕಾಸ್, ಮಲಬಾರ್ ಗೋಲ್ಡ್ & ಡೈಮಂಡ್ಸ್ ಮತ್ತು ಸೆಸ್ಕೊ ಗೋಲ್ಡ್ & ಡೈಮಂಡ್ಸ್ ಮಾಹಿತಿ ನೀಡಿದೆ. ಕೇಂದ್ರ ಬಜೆಟ್‌ನಲ್ಲಿ ಚಿನ್ನ ಮೊದಲಾದವುಗಳ ತೆರಿಗೆ ಕಡಿತದ ನಿರೀಕ್ಷೆಯಿತ್ತು. ಆದರೆ ಬಜೆಟ್‌ನಲ್ಲಿ ಚಿನ್ನ ಹಾಗೂ ಬೆಳ್ಳಿಯ ಆಮದು ಸುಂಕವನ್ನು ಇಳಿಕೆ ಮಾಡಲಾಗಿಲ್ಲ. ಇದರಿಂದಾಗಿ ಗ್ರಾಹಕರು ಚಿನ್ನ ಖರೀದಿಯಿಂದ ಹಿಂಜರಿದಿದ್ದರು. ಚಿನ್ನದ ಬೆಲೆ ಹೆಚ್ಚಾದ ಕಾರಣ ಜನರ ಜೇಬಿಗೆ ಕತ್ತರಿ ಕೂಡಾ ಬಿದ್ದಿದೆ ಎಂದು ಹೇಳಿದೆ.
ಜೋಯ್ ಆಲುಕಾಸ್ ಮಾಹಿತಿ
"ಪ್ರಸ್ತುತ ದರವು ಕೊಂಚ ಇಳಿದಿದೆ. ಆಮದು ಸುಂಕ ಕಡಿತದ ಯಾವುದೇ ಲಕ್ಷಣವಿಲ್ಲ. ಆದರೂ ಗ್ರಾಹಕರ ಸಂಖ್ಯೆಯು ನಮ್ಮಲ್ಲಿ ಅಧಿಕವಾಗಿದೆ," ಎಂದು ಜೋಯ್ ಆಲುಕಾಸ್ ಗ್ರೂಪ್‌ನ ಚೇರ್‌ಮನ್ ಜೋಯ್ ಆಲುಕಾಸ್ ಮಾಹಿತಿ ನೀಡಿದ್ದಾರೆ. "ಡಾರಲ್ ಎದುರು ರೂಪಾಯಿ ಮೌಲ್ಯವು ಬಲಗೊಳ್ಳುತ್ತಿದೆ. ಅಂತಾರಾಷ್ಟ್ರೀಯ ಚಿನ್ನದ ಬೆಲೆಯು ಕೂಡಾ ಇಳಿಯುತ್ತಿದೆ. ಈ ಎರಡು ಅಂಶಗಳು ದೇಶದಲ್ಲಿ ಚಿನ್ನದ ಬೆಲೆಯನ್ನು ಅಗ್ಗಗೊಳಿಸುತ್ತದೆ. ಇದರಿಂದಾಗಿ ಚಿನ್ನದ ಮಾರಾಟವು ಹೆಚ್ಚಾಗಿಯೇ ಉಳಿಯುವ ಸಾಧ್ಯತೆಯಿದೆ," ಎಂದು ಕೂಡಾ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ
ಭಾರತದಲ್ಲಿ ಒಟ್ಟಾಗಿ ಇರುವ ಚಿನ್ನದ ಬೇಡಿಕೆ ಪೈಕಿ ದಕ್ಷಿಣ ಭಾರತದಲ್ಲಿ ಶೇಕಡ 40ರಷ್ಟಿದೆ. ಈ ಬಗ್ಗೆ ಮಾಹಿತಿ ನೀಡಿದ ಆಲೂಕಾಸ್, "ಜನವರಿಗೆ ಹೋಲಿಕೆ ಮಾಡಿದಾಗ ಫೆಬ್ರವರಿಯಲ್ಲಿ ಚಿನ್ನದ ಬೇಡಿಕೆಯು ಶೇಕಡ 15ರಷ್ಟು ಏರಿಕೆಯಾಗಿದೆ. ಸರಾಸರಿಯಾಗಿ 60,000-70,000 ರೂಪಾಯಿಗೆ ಚಿನ್ನವನ್ನು ಖರೀದಿ ಮಾಡಲಾಗಿದೆ. ಜನರು ಹಗುರವಾದ ಮತ್ತು ಮಧ್ಯಮ ಭಾರದ ಚಿನ್ನವನ್ನು ಖರೀದಿ ಮಾಡುತ್ತಿದ್ದಾರೆ," ಎಂದು ತಿಳಿಸಿದೆ. ಗುರುವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಇಳಿಕೆಯಾಗಿದೆ. ಫೆಬ್ರವರಿ 17ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಕುಗ್ಗಿದ್ದು 55858.00 ರೂಪಾಯಿ ಆಗಿದೆ. ಬೆಳ್ಳಿ ಇಳಿಕೆಯಾಗಿದ್ದು 64459.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.78ರಷ್ಟು ಕುಗ್ಗಿದ್ದು 1,820.07 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.45ರಷ್ಟು ಇಳಿಕೆಯಾಗಿದ್ದು 21.22 ಯುಎಸ್ ಡಾಲರ್ ಆಗಿದೆ.


Click it and Unblock the Notifications