ಹತ್ತು ಸಾರ್ವಜನಿಕ ಬ್ಯಾಂಕ್ ಗಳನ್ನು ವಿಲೀನ ಮಾಡಿ, 4ಕ್ಕೆ ಇಳಿಸುವುದು ಪ್ರಕ್ರಿಯೆಯಲ್ಲಿದ್ದು, ಏಪ್ರಿಲ್ 1, 2020ಕ್ಕೆ ಜಾರಿಗೆ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಹೇಳಿದ್ದಾರೆ. ವಿಲೀನ ಪ್ರಕ್ರಿಯೆಗೆ ಸಂಪುಟ ಒಪ್ಪಿಗೆ ಕೊಟ್ತಿದೆ. ಈ ಬ್ಯಾಂಕ್ ಗಳ ಜತೆಗೆ ಸರ್ಕಾರ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ.
"ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ನಡೆಯುತ್ತಿದೆ. ಆಯಾ ಬ್ಯಾಂಕ್ ನ ಆಡಳಿತ ಮಂಡಳಿಯಿಂದ ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ" ಎಂದು ಅವರು ಹೇಳಿದ್ದಾರೆ. ಜಾಗತಿಕ ಮಟ್ಟದ ಬ್ಯಾಂಕ್ ಗಳ ಗಾತ್ರದಲ್ಲಿ ಭಾರತದಲ್ಲಿ ಬ್ಯಾಂಕ್ ಗಳನ್ನು ರೂಪಿಸುವುದು ಈ ವಿಲೀನ ಪ್ರಕ್ರಿಯೆಯ ಉದ್ದೇಶವಾಗಿದೆ.
ಕಳೆದ ವರ್ಷದ ಆಗಸ್ಟ್ ನಲ್ಲಿ ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ಆರಂಭವಾಯಿತು. 2017ರಲ್ಲಿ 27 ಇದ್ದ ಬ್ಯಾಂಕ್ ಗಳ ಸಂಖ್ಯೆಯನ್ನು 12ಕ್ಕೆ ಇಳಿಸಲಾಯಿತು. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳನ್ನು ಜಾಗತಿಕ ಮಟ್ಟದಲ್ಲಿನ ಬ್ಯಾಂಕ್ ಗಾತ್ರಕ್ಕೆ ಹಿಗ್ಗಿಸುವುದು ಇದರ ಉದ್ದೇಶವಾಗಿತ್ತು.

* ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಪಮ್ಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ವಿಲೀನವಾಗಲಿದೆ.
* ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್ ಜತೆಗೆ
* ಅಲಹಾಬಾದ್ ಬ್ಯಾಂಕ್ ಅನ್ನು ಇಂಡಿಯನ್ ಬ್ಯಾಂಕ್ ನೊಂದಿಗೆ
* ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಅನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜತೆ ಸೇರಿಸುವ ಪ್ರಕ್ರಿಯೆ ಇದಾಗಿದೆ.
ಕಳೆದ ವರ್ಷ ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ಎರಡೂ ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನವಾಗಿತ್ತು. ಅದಕ್ಕೂ ಮುನ್ನ ಎಸ್ ಬಿಐನ ಐದು ಸಹವರ್ತಿ ಬ್ಯಾಂಕ್ ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನ ಮಾಡಲಾಗಿತ್ತು.


Click it and Unblock the Notifications