ಆನ್‌ಲೈನ್ ಗೇಮ್ ಅಥವಾ ಮೊಬೈಲ್ ಗೇಮ್‌ನ ಚಟವು ಮಕ್ಕಳಿಗೆ ಪ್ರಸ್ತುತ ಅಧಿಕವಾಗಿದೆ. ಅದೆಷ್ಟು ಮಟ್ಟಿಗೆ ಇದೆ ಎಂದರೆ 13 ವರ್ಷದ ಬಾಲಕಿಯೊಬ್ಬಳು, ಸರಿ ಸುಮಾರು 52 ಲಕ್ಷ ರೂಪಾಯಿಯನ್ನು ಮೊಬೈಲ್ ಗೇಮ್‌ಗಾಗಿಯೇ ಖರ್ಚು ಮಾಡಿದ್ದಾಳೆ. ಹೌದು, ಚೀನಾ ದೇಶದ 13 ವರ್ಷದ ಬಾಲಕಿ ತಮ್ಮ ಕುಟುಂಬದ ಎಲ್ಲ ಉಳಿತಾಯವನ್ನು ಗೇಮ್‌ಗೆ ವೆಚ್ಚ ಮಾಡಿದ್ದಾಳೆ.
ಆನ್‌ಲೈನ್ ಗೇಮ್‌ನ ಚಟವನ್ನು ಹೊಂದಿರುವ ಈ ಬಾಲಕಿ ಮೊಬೈಲ್ ಗೇಮ್‌ಗೆ ತಮ್ಮ ಕುಟುಂಬದ ಉಳಿತಾಯ ಮೊತ್ತವಾದ 449,500 ಯುವಾನ್ (ಸರಿಸುಮಾರು 52,19,809 ರೂಪಾಯಿ) ಅನ್ನುಯ ಖರ್ಚು ಮಾಡಿದ್ದಾಳೆ. ಆಕೆ 4 ತಿಂಗಳ ಅವಧಿಯಲ್ಲಿ ಈ ಹಣವನ್ನು ಖರ್ಚು ಮಾಡಿದ್ದಾಳೆ. ಇಷ್ಟೆಲ್ಲ ಹಣವನ್ನು ಖರ್ಚು ಮಾಡಿದ ಬಳಿಕ ಉಳಿತಾಯ ಖಾತೆಯಲ್ಲಿ 0.5 ಯುವಾನ್ (ಅಂದಾಜು ರೂ 5) ಉಳಿದಿತ್ತು.

ಖಾತೆಯಲ್ಲಿ ಹಣವು ಖಾಲಿಯಾದಾಗ ಪೋಷಕರು ತಮ್ಮ ಮಗಳಿಗೆ ಪ್ರಶ್ನಿಸಿದಾಗ ತಾನು ಆನ್‌ಲೈನ್ ಮೊಬೈಲ್ ಆಪ್‌ಗೆ ಖರ್ಚು ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾಳೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, 13 ವರ್ಷದ ಬಾಲಕಿ ಶಾಲೆಯಲ್ಲಿ ಮೊಬೈಲ್ ಫೋನ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾಳೆ ಎಂದು ಶಾಲಾ ಶಿಕ್ಷಕಿ ತಿಳಿಸಿದ್ದಾರೆ. ಆಗ ಪ್ರಕರಣವು ಬೆಳಕಿಗೆ ಬಂದಿದೆ.
ನಿಮ್ಮ ಮಗಳು ಮೊಬೈಲ್ ಆಪ್‌ನ ಚಟಕ್ಕೆ ಒಳಗಾಗಿರಬಹುದು ಎಂದು ಶಿಕ್ಷಕಿ ಬಾಲಕಿಯ ಪೋಷಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ತಾಯಿಯು ತನ್ನ ಮಗಳು ಬಳಸುತ್ತಿದ್ದ ಖಾತೆಯನ್ನು ನೋಡಿದಾಗ, ಶಾಕ್ ಆಗಿದ್ದಾರೆ. ವಾಂಗ್ ಎಂಬ ಹೆಸರಿನ ತಾಯಿಯು ಖಾತೆಯಲ್ಲಿ ಬರೀ 0.5 ಯುವಾನ್ (ಅಂದಾಜು ರೂ. 5) ಉಳಿದಿರುವುದನ್ನು ನೋಡಿ ಶಾಕ್ ಆಗದೆ ಇರುತ್ತಾರೆಯೇ?.
ವೈರಲ್ ವೀಡಿಯೊದಲ್ಲಿ ತನ್ನ ಬ್ಯಾಂಕ್ ಖಾತೆಯಲ್ಲಿ ಇದ್ದ ಹಣವನ್ನು ನೋಡಿ ಆಶ್ಚರ್ಯವಾಯಿತು ಎಂದು ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯು ಹೇಳಿಕೊಂಡಿದ್ದಾರೆ. ಹಾಗೆಯೇ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಕೂಡಾ ಚೆಕ್ ಮಾಡಿದ್ದಾರೆ. ಆಗ ಮೊಬೈಲ್ ಗೇಮ್‌ಗಳಿಗೆ ಅಷ್ಟೊಂದು ಮೊತ್ತದ ಹಣವನ್ನು ಬಳಕೆ ಮಾಡಿರುವುದು ಕಂಡು ಬಂದಿದೆ.
ಎಷ್ಟು ಮೊತ್ತ ಎಲ್ಲಿ ಖರ್ಚು ಮಾಡಿದ್ದಾಳೆ?
ಆಕೆಯ ತಂದೆಯು ಪ್ರಶ್ನಿಸಿದಾಗ ಈ 13 ವರ್ಷದ ಬಾಲಕಿ ತಾನು 120,000 ಯುವಾನ್ (ಅಂದಾಜು ರೂ 13,93,000) ಗೇಮ್‌ಗಳನ್ನು ಖರೀದಿಸಲು ಖರ್ಚು ಮಾಡಿದ್ದೇನೆ ಎಂದು ಬಹಿರಂಗಪಡಿಸಿದ್ದಾಳೆ. ಇನ್ನು 210,000 ಯುವಾನ್ (ಅಂದಾಜು ರೂ 24,39,000) ಮೊತ್ತವನ್ನು ಗೇಮ್ ಅನ್ನು ಆಡುವಾಗ ಕೆಲವು ಖರೀದಿಗಾಗಿ ಬಳಕೆ ಮಾಡಿದ್ದಾಳೆ, ಮತ್ತು ಉಳಿದಂತೆ ಕನಿಷ್ಠ 10 ತನ್ನ ಸಹಪಾಠಿಗಳಿಗೆ ಆಟಗಳನ್ನು ಖರೀದಿಸಲು 100,000 ಯುವಾನ್ (ಅಂದಾಜು ರೂ 11,61,000) ಖರ್ಚು ಮಾಡಿದ್ದಾಳೆ ಎಂದು ತಿಳಿಸಿದ್ದಾರೆ.
ಬಾಲಕಿಯು ಮನೆಯಲ್ಲಿ ತನ್ನ ತಾಯಿಯ ಡೆಬಿಟ್ ಕಾರ್ಡ್ ಅನ್ನು ನೋಡಿದ್ದು, ಅದನ್ನು ತನ್ನ ಸ್ಮಾರ್ಟ್‌ಫೋನ್‌ಗೆ ಲಿಂಕ್ ಮಾಡಿಕೊಂಡಿದ್ದಾಳೆ. ಪೋಷಕರು ಇಲ್ಲದ ಸಂದರ್ಭದಲ್ಲಿ ಅಗತ್ಯ ಬಂದಾಗ ಈ ಕಾರ್ಡ್ ಅನ್ನು ಬಳಸಲು ಸಹಾಯವಾಗಲಿ ಎಂದು ಮೊದಲೇ ಡೆಬಿಟ್ ಕಾರ್ಡ್‌ನ ಪಾಸ್‌ವರ್ಡ್ ಅನ್ನು ತಿಳಿಸಿದ್ದರು.
ಇನ್ನು ಡೆಬಿಟ್ ಮಾಡಿದ ಮೊತ್ತದ ಬಗ್ಗೆ ಬರುವ ಬ್ಯಾಂಕ್‌ನ ಮಾಹಿತಿಯನ್ನು ಕೂಡಾ ಬಾಲಕಿ ಡಿಲೀಟ್ ಮಾಡಿದ್ದಾಳೆ. ನನಗೆ ಇಷ್ಟವಿರಲಿಲ್ಲ, ಭಯವು ಆಗುತ್ತಿತ್ತು, ಆದರೂ ಕೂಡಾ ನಾನು ನನ್ನ ಸಹಪಾಠಿಗಳಿಗೆ ಆಟಗಳನ್ನು ಖರೀದಿ ಮಾಡಿದೆ ಎಂದು ಬಾಲಕಿಯು ಒಪ್ಪಿಕೊಂಡಿದ್ದಾಳೆ.
"ನಾನು ಅವರಿಗೆ ಹಣವನ್ನು ನೀಡಿಲ್ಲದಿದ್ದರೆ, ಅವರು ನನಗೆ ದಿನವಿಡೀ ನನಗೆ ತೊಂದರೆ ಕೊಡುತ್ತಿದ್ದರು. ನಾನು ಶಿಕ್ಷಕರಿಗೆ ಹೇಳಿದರೆ, ಶಿಕ್ಷಕರು ನನ್ನ ಪೋಷಕರಿಗೆ ಹೇಳುತ್ತಾರೆ. ನನ್ನ ಪೋಷಕರು ನನ್ನ ಮೇಲೆ ಕೋಪಗೊಳ್ಳುತ್ತಾರೆ ಎಂದು ನಾನು ಹೆದರಿಕೊಂಡೆ," ಎಂದು ಬಾಲಕಿಯು ಹೇಳಿಕೊಂಡಿದ್ದಾರೆ.


Click it and Unblock the Notifications