15ನೇ ಹಣಕಾಸಿನ ಆಯೋಗದಿಂದ ಭಾನುವಾರದಂದು ಅಧ್ಯಕ್ಷರು ಮತ್ತು ಸದಸ್ಯರು ಆಯೋಗದ 2021- 22ರಿಂದ 2025- 26ರ ತನಕದ ಅವಧಿಗೆ ವರದಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದರು. ಎನ್.ಕೆ. ಸಿಂಗ್ ಅಧ್ಯಕ್ಷತೆಯಲ್ಲಿ ಹದಿನೈದನೇ ಹಣಕಾಸಿನ ಆಯೋಗ ರಚನೆ ಆಗಿತ್ತು.
ನವೆಂಬರ್ 4, 2020ರಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಹಣಕಾಸು ಆಯೋಗದ ವರದಿ ನೀಡಲಾಗಿತ್ತು. ಆಯೋಗದ ಅಧ್ಯಕ್ಷರಾಗಿ ಎನ್.ಕೆ. ಸಿಂಗ್ ಇದ್ದರೆ, ಆಯೋಗದ ಸದಸ್ಯರಾಗಿ ಅಜಯ್ ನಾರಾಯಣ್ ಝಾ, ಪ್ರೊ. ಅನೂಪ್ ಸಿಂಗ್, ಡಾ. ಅಶೋಕ್ ಲಾಹಿರಿ ಮತ್ತು ಡಾ. ರಮೇಶ್ ಚಾಂದ್ ಇದ್ದಾರೆ.
ಈ ವರದಿಯಲ್ಲಿ ವಿವಿಧ ಶಿಫಾರಸುಗಳು ಒಳಗೊಂಡಿವೆ. ರಾಜ್ಯಗಳಲ್ಲಿನ ವಿದ್ಯುತ್ ವಲಯ, ನೇರ ಅನುಕೂಲ ವರ್ಗಾವಣೆ, ಘನತ್ಯಾಜ್ಯ ನಿರ್ವಹಣೆಗೆ ಹೇಗೆ ಪ್ರೋತ್ಸಾಹಧನವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬಿತ್ಯಾದಿ ಮೌಲ್ಯಮಾಪನ ಇವೆ.

ರಕ್ಷಣೆ ಮತ್ತು ಆಂತರಿಕ ಭದ್ರತೆಗೆ ಇರುವ ಹಣಕಾಸು ಲಭ್ಯತೆ ಬಗ್ಗೆ ಕೂಡ ಪರಿಶೀಲನೆ ನಡೆಸುವಂತೆ ಕೇಳಲಾಗಿತ್ತು. ಈ ವರದಿಯಲ್ಲಿ ನಾಲ್ಕು ಸಂಪುಟಗಳು ಒಳಗೊಂಡಿವೆ. ಒಂದು ಮತ್ತು ಎರಡಲ್ಲಿ ಮುಖ್ಯ ವರದಿ ಹಾಗೂ ಸಂಬಂಧಪಟ್ಟ ಅಡಕಗಳು ಒಳಗೊಂಡಿವೆ. ಇನ್ನು ಮೂರನೇ ಭಾಗ ಕೇಂದ್ರ ಸರ್ಕಾರಕ್ಕೆ ಮೀಸಲಾಗಿದ್ದು, ಪ್ರಮುಖ ಇಲಾಖೆಗಳನ್ನು ಆಳವಾಗಿ ಪರೀಕ್ಷಿಸಲಾಗಿದೆ. ನಾಲ್ಕನೇ ಸಂಪುಟ ರಾಜ್ಯಗಳಿಗೆ ಸಂಬಂಧಿಸಿದವು.
ಇವುಗಳನ್ನು ಸಂಸತ್ ನಲ್ಲಿ ಕೇಂದ್ರದಿಂದ ಮಂಡನೆ ಮಾಡಿದ ಮೇಲೆ ಸಾರ್ವಜನಿಕವಾಗಿ ಲಭ್ಯ ಆಗಲಿವೆ. ಕಳೆದ ವರ್ಷದ ವರದಿಯನ್ನು ಜನವರಿ ಕೊನೆಯಲ್ಲಿ ಸಂಸತ್ ನಲ್ಲಿ ಮಂಡಿಸಲಾಗಿತ್ತು.


Click it and Unblock the Notifications