ಫಿಲಿಫೈನ್ಸ್ ನಲ್ಲಿ ಬಿಪಿಒ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ. 2011ರಲ್ಲಿ ಬಿಪಿಒ ಉದ್ಯಮದಿಂದ 11.6 ಬಿಲಿಯನ್ ಡಾಲರ್ ಆದಾಯ ಗಳಿಸಲಾಗಿದೆ. 640,000 ಜನರಿಗೆ ಉದ್ಯೋಗ ಸಿಕ್ಕಿದೆ.
ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಫಿಲಿಫೈನ್ಸ್ ನ ಬಿಪಿಒ ಸಮೂಹ ಹೊಸ ಜಾಬ್ ಪೋರ್ಟಲ್ ಆರಂಭಿಸಿ ಐಟಿ/ಬಿಪಿಒ ಕ್ಷೇತ್ರದಲ್ಲಿ ಸುಮಾರು 100,000 ನೇಮಕಾತಿ ಮಾಡಲು ಮುಂದಾಗಿದೆ.
‘Work Abroad. Live Here' ಎಂಬ ಧ್ಯೇಯವಾಕ್ಯದೊಂದಿಗೆ ಆರಂಭವಾಗಿರುವ ವೆಬ್ ತಾಣ ಐಟಿ/ಬಿಪಿಒ ಕ್ಷೇತ್ರದಲ್ಲಿ ಆರ್ಥಿಕ ವಿಶ್ಲೇಷಕ, ಬಿಸಿನೆಸ್ ಅನಾಲಿಸ್ಟ್, ಇಂಜಿನಿಯರ್ಸ್, ಮೆಡಿಕಲ್ ಟ್ರಾನ್ಸ್ ಸ್ಕ್ರಿಪ್ಷನಿಸ್ಟ್, ಕಾನೂನು ಸಲಹೆಗಾರರು ಹಾಗೂ ಐಟಿ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲಿದೆ.
ಐಟಿ, ಐಟಿಯೇತರ, ಕೆಪಿಒ ಅಲ್ಲದೆ ಕಸ್ಟಮರ್ ಕೇರ್ ಸಂಬಂಧಿಸಿದ ವಿವಿಧ ಹುದ್ದೆಗಳಿಗೆ ಈ ವೆಬ್ ತಾಣ ಹೆಬ್ಬಾಗಿಲಾಗಿದೆ. ಭಾರತ ಹಾಗೂ ಚೀನಾ ನಂತರ ವಾಯ್ಸ್ ಆಧಾರಿತ ಬಿಪಿಒ ಕ್ಷೇತ್ರದಲ್ಲಿ ಮೆರೆಯುತ್ತಿರುವ ಫಿಲಿಫೈನ್ಸ್ ಈಗ ಅಗ್ರಸ್ಥಾನಕ್ಕೇರಲು ಸಕಲ ಸಿದ್ಧತೆ ನಡೆಸಿದೆ. ಉತ್ತಮ ಕೌಶಲ್ಯ, ಭಾಷಾ ಶುದ್ಧತೆ, ವೃತ್ತಿಪರತೆಯುಳ್ಳ ಅಭ್ಯರ್ಥಿಗಳು ಫಿಲಿಫೈನ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚಾಗುತ್ತಿದೆ.
ಭಾರತದ ಅನೇಕ ಬಿಪಿಒ ಸಂಸ್ಥೆಗಳು ತಮ್ಮ ಕೇಂದ್ರವನ್ನು ಫಿಲಿಫೈನ್ಸ್ ನಲ್ಲೂ ತೆರೆದಿದೆ. ಸುಮಾರು 1.3 ಮಿಲಿಯನ್ ಉದ್ಯೋಗ ಅವಕಾಶ ಕಲ್ಪಿಸಿ 2016ರ ಹೊತ್ತಿಗೆ 425 ಬಿಲಿಯನ್ ಡಾಲರ್ ಆದಾಯ ಗಳಿಸುವ ಯೋಜನೆಯನ್ನು ಫಿಲಿಫೈನ್ಸ್ ಸರ್ಕಾರ ಹಾಕಿಕೊಂಡಿದೆ.ಜೊತೆಗೆ ಸ್ಥಳೀಯ ಪ್ರತಿಭೆಗಳಿಗೆ ಸೂಕ್ತ ತರಬೇತಿ ನೀಡಿ ಭಾರತ ಮೂಲದ ಸಂಸ್ಥೆಗಳಿಗೆ ಹೊಡೆತ ನೀಡುವುದು ಬಿಪಿಎಪಿಯ ಮೂಲ ಉದ್ದೇಶವಾಗಿದೆ.
ಇನ್ಫೋಸಿಸ್ ಸಂಸ್ಥೆಯ ಹೊರಗುತ್ತಿಗೆ ವಿಭಾಗದ ಮುಖ್ಯಸ್ಥ ರಿತೇಶ್ ಇದ್ನಾನಿ ರಾಜೀನಾಮೆ ಇತ್ತು ಹೊರನಡೆದ ಮೇಲೆ ಇನ್ಫೋಸಿಸ್ ಪ್ರಭೆಯನ್ನು ಕಳೆದುಕೊಂಡಿದೆ.
ತೆಲಂಗಾಣ ವಿವಾದ, ರಾಜಕೀಯ ಅಸ್ಥಿರತೆಯಿಂದ ಬಳಲುತ್ತಿರುವ ಆಂಧ್ರಪ್ರದೇಶ ರಾಜ್ಯದ ರಾಜಧಾನಿ ಹೈದರಾಬಾದ್ ತನ್ನ ಐಟಿ ಸ್ವಾಮ್ಯತೆಯನ್ನು ಕಳೆದುಕೊಂಡಿದೆ. ಐಗೇಟ್, ಟಿಸಿಎಸ್, ಇನ್ಫೋಸಿಸ್ ಹಾಗೂ ಕಾಂಗ್ನಿಜೆಂಟ್ ಕಂಪನಿಗಳು ಹೈದರಾಬಾದಿನಲ್ಲಿ ತಮ್ಮ ಸಂಸ್ಥೆ ವಿಸ್ತರಣೆ ಯೋಜನೆ ಕೈಬಿಟ್ಟ ಮೇಲೆ, ಬೆಂಗಳೂರು ಹಾಗೂ ಗುರ್ ಗಾಂವ್ ಗೆ ಸಿಗಬೇಕಿದ್ದ ಲಾಭ ಈಗ ಫಿಲಿಫೈನ್ಸ್ ಕಡೆಗೆ ಹರಿಯುವ ಲಕ್ಷಣಗಳು ಕಾಣಿಸಿದೆ.


Click it and Unblock the Notifications

