
ನವದೆಹಲಿಯ Authority for Advance Rulings (AAR) ನೀಡಿರುವ ಮಾಹಿತಿ ಪ್ರಕಾರ ಭಾರತೀಯ ತೆರಿಗೆ ಕಾನೂನಿನ ಪ್ರಕಾರ ಅಮೆರಿಕದಲ್ಲಿರುವ ಸತ್ಯಂ ಹೂಡಿಕೆದಾರರು ಗಳಿಸಿರುವ ಮೊತ್ತದ ಪರಿಹಾರ ಮೇಲೆ ತೆರಿಗೆಯನ್ನು ಪಡೆಯಬೇಕಾಗುತ್ತದೆ ಎಂದು AAR ಹೇಳಿದೆ.
ಸತ್ಯಂ ರಾಜು ಫಲ: ಸುಮಾರು 14,000 ಕೋಟಿ ರು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ರಾಮಲಿಂಗ ರಾಜು ಜಾಮೀನು ಪಡೆದು ಆರಾಮವಾಗಿದ್ದಾರೆ. ಆದರೆ, ಸತ್ಯಂನಲ್ಲಿ ಹೂಡಿಕೆ ಮಾಡಿದ್ದವರು ಸಿಕ್ಕ ಪರಿಹಾರಕ್ಕೆ ತೆರಿಗೆ ಕಟ್ಟುವ ಭೀತಿ ಎದುರಿಸುತ್ತಿದ್ದಾರೆ.
ಸತ್ಯಂ ಕಂಪ್ಯೂಟರ್ಸ್ ಮಾಜಿ ಅಧ್ಯಕ್ಷ ರಾಮಲಿಂಗ ರಾಜು ದಿವಾಳಿಯಾಗಿದ್ದಾರೆಂದು ನ್ಯೂಯಾರ್ಕ್ ಕೋರ್ಟ್ 2010ರಲ್ಲಿ ಘೋಷಿಸಿತ್ತು. ತಾವೇ ಸ್ಥಾಪಿಸಿದ ಸಂಸ್ಥೆಯ ಲೆಕ್ಕಪತ್ರದಲ್ಲಿ 14ಸಾವಿರಕೋಟಿ ವಂಚನೆ ಎಸಗಿರುವುದಾಗಿ ರಾಜು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು.
ಭಾರತ ಮತ್ತು ಅಮೇರಿಕಾದಲ್ಲಿ ಅವರ ವಿರುದ್ದ ವಿಚಾರಣೆಗೆ ಆದೇಶಿಸಲಾಗಿತ್ತು. ರಾಜು ಜೊತೆ ಅವರ ಸೋದರ ಮಾವ ಮತ್ತು ಸಂಸ್ಥೆಯ ಮಾಜಿ ಹಣಕಾಸು ಮುಖ್ಯಸ್ಥ ಶ್ರೀನಿವಾಸ್ ವಿ ಅವರನ್ನು ಕೋರ್ಟ್ ದಿವಾಳಿಯೆಂದು ಘೋಷಿಸಿದೆ.
ಅಮೆರಿಕಾದಲ್ಲಿ ನಡೆಯುತ್ತಿರುವ ವಿಚಾರಣೆಗೆ ಸಂಬಂಧಿಸಿದಂತೆ ವಕೀಲರನ್ನು ನೇಮಿಸಿಕೊಳ್ಳಲು ಮತ್ತು ಕೋರ್ಟ್ ಶುಲ್ಕ ಪಾವತಿಸಲು ನಮ್ಮಿಂದ ಸಾಧ್ಯವಿಲ್ಲ ಎಂದು ಆರೋಪಿಗಳು ಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿದ್ದರು.
ವಿಚಾರಣೆಯ ಶುಲ್ಕವನ್ನು ಭರಿಸಲು ತಮ್ಮಿಂದ ಸಾಧ್ಯವಿಲ್ಲ ಎಂದಿದ್ದರು. ಇದನ್ನು ಕೋರ್ಟ್ ಒಪ್ಪಿಕೊಂಡು ಅವರನ್ನು 'ನಿರ್ಗತಿಕರು' ಎಂದು ಕೋರ್ಟ್ ಆದೇಶಿಸಿತ್ತು.
ಹೀಗಾಗಿ ಅಮೆರಿಕದಲ್ಲಿನ ಹೂಡಿಕೆದಾರರು ಸತ್ಯಂ ಸಂಸ್ಥೆಯಿಂದ ಪರಿಹಾರ ರೂಪದಲ್ಲಿ ಮಾರ್ಚ್ 31,2011ಕ್ಕೆ ಅನುಗುಣವಾಗಿ 567 ಕೋಟಿ ಬಂಡವಾಳ ವಾಪಸ್ ಪಡೆದಿದ್ದರು.ಈಗ ಈ ಮೊತ್ತಕ್ಕೆ ತೆರಿಗೆ ಕಟ್ಟಿ ಎಂದು ಭಾರತ ಸರ್ಕಾರ ದುಂಬಾಲು ಬೀಳುವ ಸಾಧ್ಯತೆ ನಿಚ್ಚಳವಾಗಿದೆ.


Click it and Unblock the Notifications