
ಪ್ರಸ್ತುತ ಚಿನ್ನಾಭರಣಗಳ ಮೇಲೆ ಹಾಲ್‌ಮಾರ್ಕ್ ಮಾಡುವುದು ಅಗತ್ಯವಾಗಿದೆ. ಪ್ರತಿಷ್ಠಿತ ಲೋಹದ ಪರಿಶುದ್ಧತೆಯನ್ನು ಖಾತ್ರಿ ಪಡಿಸಲು ಇದು ಕಡ್ಡಾಯವಾಗಬೇಕಿದ್ದು, ಗ್ರಾಹಕ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯಲ್ಲಿರುವ ಭಾರತೀಯ ಗುಣಮಟ್ಟ ದಳ (ಬಿಐಎಸ್)ಗೆ ಹಾಲ್‌ಮಾರ್ಕ ಅಧಿಕೃತವಾಗಿ ಹಾಲ್‌ಮಾರ್ಕ್ ನೀಡುವ ಅಧಿಕಾರವಿದೆ.
ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಗ್ರಾಹಕ ವ್ಯವಹಾರಗಳ ಸಚಿವಾಲಯ ಮತ್ತು ಬಿಐಎಸ್‌ಗಳು ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್ ಪ್ರಮಾಣಪತ್ರ ನೀಡುವುದನ್ನು ಕಡ್ಡಾಯಗೊಳಿಸುವುದನ್ನು ಪರಿಗಣಿಸಬೇಕಿದೆ ಎಂದು ಸಂಸತ್ತಿನಲ್ಲಿ ಮಂಡಿಸಲಾದ ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ.
ಚಿನ್ನಾಭರಣಗಳ ಮೇಲೆ ಹಾಲ್‌ಮಾರ್ಕ್ ಕಡ್ಡಾಯಗೊಳಿಸದಿರುವುದರಿಂದ ಆಭರಣ ತಯಾರಕರು ಸಮರ್ಪಕವಾಗಿ ಭಾರತೀಯ ಆಭರಣಗಳನ್ನು ನೀಡದಿರುವುದರಿಂದ ಗ್ರಾಹಕರು ಪರಿಶುದ್ಧವಲ್ಲದ ಆಭರಣಗಳನ್ನು ಖರೀದಿಸುತ್ತಿದ್ದಾರೆ ಎಂದು ಸಿಎಜಿ ತನ್ನ ವರದಿಯಲ್ಲಿ ತಿಳಿಸಿದೆ.
ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್ ಪ್ರಮಾಣಪತ್ರ ನೀಡುವುದನ್ನು ಕಡ್ಡಾಯಗೊಳಿಸಲು ಬಿಐಎಸ್‌ನ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿಲ್ಲ ಎಂಬುದನ್ನು ವರದಿಯಲ್ಲಿ ಗಮನಕ್ಕೆ ತರಲಾಗಿದೆ.
ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್ ಮಾಡುವುದನ್ನು ಕಡ್ಡಾಯಗೊಳಿಸುವುದನ್ನು ಕಾಯ್ದೆಯನ್ನಾಗಿ ಮಾಡುವ ಪ್ರಸ್ತಾವನೆ ಗ್ರಾಹಕ ವ್ಯವಹಾರಗಳ ಸಚಿವಾಲಯದ ಬಳಿ ಇದೆ ಎಂಬ ಬಿಐಎಸ್ ಪ್ರತಿಕ್ರಿಯೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸಿಎಜಿ ಹೇಳಿದೆ.
ಬಿಐಎಸ್ ಎಲ್ಲಾ ಉತ್ಪನ್ನಗಳ ಗುಣಮಟ್ಟ ಅಳೆಯುವ ದೇಶದ ಸರ್ವೋಚ್ಚ ಸಂಸ್ಥೆಯಾಗಿದ್ದು, ಗ್ರಾಹಕರಿಗೆ ಗುಣಮಟ್ಟದ ಭರವಸೆಯನ್ನು ಕಡ್ಡಾಯಗೊಳಿಸುವ ಅಧಿಕಾರವಿದ್ದು, ಚಿನ್ನಾಭರಣಗಳಿಗೆ ಸಂಬಂಧಿಸಿದಂತೆ ಹಾಲ್ ಮಾರ್ಕ್ ಕಡ್ಡಾಯಗೊಳಿಸುವುದು ಸಾಧ್ಯವೋ ಅಥವಾ ಇಲ್ಲವೋ ಎಂದು ಅದು ಪ್ರಶ್ನಿಸಿದೆ.(ಪಿಟಿಐ)


Click it and Unblock the Notifications