
ಪ್ರಸಕ್ತ ಆರ್ಥಿಕ ವರ್ಷ ಈಕ್ವಿಟಿ ಹಾಗೂ ಬಾಂಡ್ ಗಳಲ್ಲಿ ಸುಮಾರು 2.25 ಲಕ್ಷ ಕೋಟಿ ರು ಹೂಡಿಕೆ ಮಾಡಲಾಗುತ್ತದೆ. ಹೂಡಿಕೆ ಪ್ರಮಾಣ ಶೇ 10 ರಷ್ಟು ಅಧಿಕವಾಗಲಿದೆ ಎಂದು ಎಲ್ ಐಸಿ ಚೇರ್ಮನ್ ಎಸ್ ಕೆ ರಾಯ್ ಅವರು ಪಿಟಿಐಗೆ ಹೇಳಿದ್ದಾರೆ.
ದೇಶದ ಅತಿದೊಡ್ಡ ವಿಮಾ ಕಂಪನಿ ಕನಿಷ್ಠವೆಂದರೂ 2.47 ಲಕ್ಷ ಕೋಟಿ ರು ಗಳನ್ನು ಷೇರು ಹಾಗೂ ಬಾಂಡ್ ರೂಪದಲ್ಲಿ ಹೂಡಿಕೆ ಮಾಡುವುದು ದೃಢವಾಗಿದೆ. ಆದರೆ, ಈಕ್ವಿಟಿ ಮಾರುಕಟ್ಟೆ ಪ್ರವೇಶಕ್ಕೂ ಮುನ್ನ ಮಾರುಕಟ್ಟೆ ಪರಿಸ್ಥಿತಿಯನ್ನು ಅವಲೋಕಿಸಬೇಕಾಗುತ್ತದೆ. ಷೇರುಮಾರುಕಟ್ಟೆಯಲ್ಲಿ ಹೂಡಿಕೆಗೆ ಉತ್ತಮ ಅವಕಾಶಗಳಿದೆ ಎಂದು ಚೇರ್ಮನ್ ಎಸ್ ಕೆ ರಾಯ್ ತಿಳಿಸಿದರು.
ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ 15 ರಷ್ಟು ಮೊದಲ ವರ್ಷದ ಪ್ರಿಮಿಯಂನಲ್ಲಿ ಪ್ರಗತಿ ಕಾಣಲಾಗುತ್ತದೆ. 2012-13ನೇ ಸಾಲಿನಲ್ಲಿ ಮೊದಲ ಪ್ರಿಮಿಯಂ ಗಳಿಕೆಯಲ್ಲಿ ಶೇ 6.5ರಷ್ಟು ಕುಸಿತ ಕಂಡಿತ್ತು. 81,500 ಕೋಟಿ ಗಳಿಕೆ ಮೀರದೆ 76,200 ಕೋಟಿ ರು. ಗೆ ಕುಸಿದಿತ್ತು.
ಈ ಬಾರಿ ನಗರ ಪ್ರದೇಶಗಳಿಗಿಂತ ಎರಡನೇ ಹಾಗೂ ಮೂರನೇ ಶ್ರೇಣಿ ಪಟ್ಟಣಗಳು ಹಾಗೂ ಗ್ರಾಮಾಂತರ ಪ್ರದೇಶಗಳತ್ತ ಎಲ್ ಐಸಿ ಕಣ್ಣು ಹಾಕಿದೆ. ಸಣ್ಣ ಪಟ್ಟಣಗಳಲ್ಲಿ ಸುಮಾರು 300 ಕ್ಕೂ ಅಧಿಕ ಮಿನಿ ಕಚೇರಿಗಳನ್ನು ಆರಂಭಿಸಲಾಗುತ್ತದೆ.
10 ಸಾವಿರಕ್ಕೂ ಅಧಿಕ ಜನಸಂಖ್ಯೆ ಉಳ್ಳ ಪ್ರದೇಶಗಳನ್ನು ಗುರುತಿಸಿ 1700ಕ್ಕೂ ಅಧಿಕ ಕಚೇರಿಗಳನ್ನು ಡಿಸೆಂಬರ್ ಕೊನೆಯೊಳಗೆ ಆರಂಭಿಸಲಾಗುತ್ತದೆ.
IRDA ಪ್ರಮಾಣಿತ ಪೂರ್ವ ಪ್ರಮಾಣ ಪತ್ರ ಇಲ್ಲದೆ ಎರಡನೇ ಹಾಗೂ ಕೆಳ ಸ್ತರಗಳಲ್ಲಿನ ಪಟ್ಟಣಗಳಲ್ಲಿ ವಿಮೆ ಕಚೇರಿ ಆರಂಭಿಸಲು ಕಳೆದ ಬಜೆಟ್ ನಲ್ಲಿ ವಿತ್ತ ಸಚಿವ ಪಿ ಚಿದಂಬರಂ ಅನುವು ಮಾಡಿಕೊಂಡಿದ್ದನ್ನು ಎಲ್ ಐಸಿ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ.
10 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆವುಳ್ಳ ಭಾರತದ ಎಲ್ಲಾ ಪಟ್ಟಣಗಳಲ್ಲಿ ಸರ್ಕಾರಿ ಸ್ವಾಮ್ಯದ ವಿಮೆ ಕಂಪನಿ ಕಚೇರಿ ಆರಂಭಿಸುವ ಉದ್ದೇಶ 2014ರ ಮಾರ್ಚ್ 31ರ ವೇಳೆಗೆ ಈಡೇರುವ ಸಾಧ್ಯತೆಯಿದೆ.


Click it and Unblock the Notifications