ಮುಂಬೈ, ಅ.29: ಅರ್ಥ ವ್ಯವಸ್ಥೆಯ ಉತ್ತೇಜನ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಿರತೆ, ಹಣದುಬ್ಬರ ನಿಯಂತ್ರಣ ಮತ್ತಿತರ ಸವಾಲುಗಳನ್ನು ಮುಂದಿಟ್ಟು ಎರಡನೇ ತ್ರೈಮಾಸಿಕ ಹಣಕಾಸು ನೀತಿಯನ್ನು ನೂತನ ಗವರ್ನರ್ ರಘುರಾಮ್ ಜಿ ರಾಜನ್ ಅವರು ಮಂಗಳವಾರ ಪ್ರಕಟಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಎರಡನೇ ತ್ರೈಮಾಸಿಕ ಹಣಕಾಸು ನೀತಿಯಲ್ಲಿ ಪ್ರಕಟಿಸಿದ್ದು, ರೆಪೊ ದರವನ್ನು ಮತ್ತೊಮ್ಮೆ ಶೇ.0.25ರಷ್ಟು ಹೆಚ್ಚಿಸಿದೆ. ಆದರೆ, ನಗದು ಮೀಸಲು ಅನುಪಾತ(ಸಿಆರ್ ಆರ್)ದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ರೆಪೊ ದರವನ್ನು ಶೇ.7.50 ರಿಂದ ಶೇ.7.75ಕ್ಕೆ ಏರಿಕೆ ಮಾಡಲಾಗಿದೆ. ರೆಪೊ ದರ ಹೆಚ್ಚಳದಿಂದ ಇಎಂಐ ಮೊತ್ತ ಹೆಚ್ಚಳವಾಗಲಿದೆ. ಹೀಗಾಗಿ ಬ್ಯಾಂಕಿನಿಂದ ಪಡೆಯುವ ಗೃಹ ಹಾಗೂ ಕಾರು ಸಾಲ ಮತ್ತಷ್ಟು ದುಬಾರಿಯಾಗಲಿದೆ.
ಮೊದಲ ತ್ರೈಮಾಸಿಕದಲ್ಲಿ ರೆಪೊ ದರವನ್ನು ಶೇ.7.25ರಿಂದ ಶೇ.7.5ಕ್ಕೆ ಏರಿಕೆ ಮಾಡಲಾಗಿತ್ತು. 'ಹಣದುಬ್ಬರ ನಿಯಂತ್ರಣಕ್ಕಾಗಿ ರೆಪೊ ದರವನ್ನು ಹೆಚ್ಚಿಸಲಾಗಿದೆ ಮತ್ತು ರುಪಾಯಿ ಮೌಲ್ಯ ವೃದ್ಧಿಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ವಿತ್ತೀಯ ನಿಧಿ ಸಂಗ್ರಹದ ಮೂಲಕ ಹೆಚ್ಚಿನ ಬಂಡವಾಳ ಹೂಡಿಕೆ ಆಕರ್ಷಿಸಬೇಕಿದೆ' ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
ರುಪಾಯಿ ಅಪಮೌಲ್ಯ ತಡೆಗಟ್ಟಲು ರಾಜನ್ ತೆಗೆದುಕೊಂಡ ನಿರ್ಣಯಗಳು ಸೂಕ್ತವೇ ಆದರೂ ಸಾಮಾನ್ಯ ಜನತೆ ಇದು ಮತ್ತೊಂದು ಹೊಡೆತ ಎನ್ನಬಹುದು. ಹಬ್ಬದ ಸಾಲುಗಳಲ್ಲಿ ಇಎಂಐ ಮೂಲಕ ಸಾಲ ಸೋಲ ಮಾಡಿಯಾದರೂ ತುಪ್ಪ ತಿನ್ನುವ ಕನಸು ಹೊತ್ತವರು ಇನ್ನಷ್ಟುಕಾಲ ಸುಮ್ಮನಿರಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ
ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ
ರೆಪೋ ದರ ಕಡಿತ
ಹಣ ದುಬ್ಬರ ಕಡಿವಾಣ ಹಾಕಲು ರೆಪೋ ದರ ಏರಿಕೆ ಅಗತ್ಯವಾಗಿದೆ. ಆದರೆ, ರೆಪೋ ದರ ಏರುತ್ತಿದ್ದಂತೆ ಬ್ಯಾಂಕ್ ನಿಂದ ಪಡೆಯುವ ಸಾಲದ ಬಡ್ಡಿದರ ಏರಿಕೆಯಾಗುತ್ತದೆ. ಜನಸಾಮಾನ್ಯರಿಗೆ ಇದು ಹೊರೆಯಾಗಲಿದೆ.
ಅಲ್ಲದೆ, ರೆಪೊ ದರ ಏರಿಕೆ ಆರ್ಥಿಕ ಪ್ರಗತಿಗೆ ಪೂರಕವಾಗುವುದಿಲ್ಲ. ರುಪಾಯಿ ಅಪಮೌಲ್ಯದಿಂದ ಆಗಿರುವ ಹಣದುಬ್ಬರ ತಗ್ಗಿಸಲು ರೆಪೋ ದರವನ್ನು ಆರ್ ಬಿಐ ಏರಿಕೆ ಮಾಡಿದೆ. 2ನೇ ತ್ರೈಮಾಸಿಕದಲ್ಲಿ ಶೇ 7.50 ರಿಂದ ಶೇ 7.75 ರಷ್ಟು ಏರಿಸಲಾಗಿದೆ.
ಸಿಆರ್ ಆರ್ ದರದ ಬಗ್ಗೆ
ದೈನಂದಿನ ನಗದು ಮೀಸಲು ಅನುಪಾತ(ಸಿಆರ್ ಆರ್)ದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಶೇ 99 ರಿಂದ ಶೇ 95ಕ್ಕೆ ಇಳಿಸಲಾಗಿದೆ. ಇದು ಸೆ.21, 2013ರಿಂದ ಅನ್ವಯವಾಗಲಿದೆ. ಆದರೆ, ಸಾಮಾನ್ಯ ಸಿಆರ್ ಅರ್ ಪ್ರಮಾಣದಲ್ಲಿ ಬದಲಾವಣೆ ಕಂಡು ಬಂದಿಲ್ಲ. ನಗದು ಮೀಸಲು ಅನುಪಾತ(ಸಿಆರ್ ಆರ್) ಶೇ.4ರ ಪ್ರಮಾಣದಲ್ಲೇ ಇದೆ.
ಲಿಕ್ವಿಡಿಟಿ
ಆರ್ ಬಿಐ ನೀತಿ ಪ್ರಕಟಿಸುತ್ತಿದ್ದಂತೆ ಸರ್ಕಾರಿ ಸ್ವಾಮ್ಯದ ಬಾಂಡ್ ಗಳು ಮೌಲ್ಯ ಕಳೆದುಕೊಳ್ಳುತ್ತಿದೆ. ಲಿಕ್ವಿಡಿಟಿಗೆ ಅವಕಾಶ ನೀಡಿರುವುದರಿಂದ ನೆಟ್ ಡಿಮ್ಯಾಂಡ್ ಅಂಡ ಟೈಮ್ ಲಿಯಾಬಿಲಿಟಿಸ್(NDTL) ನಂತೆ 7 ಹಾಗೂ 14 ದಿನಗಳ ಅವಧಿಯ ರೆಪೋ ದರ ಶೆ 0.25 ರಂತೆ ಬ್ಯಾಂಕ್ ಗಳು ನಿಧಿ ಪಡೆಯಬಹುದಾಗಿದೆ.
ಎಂಎಸ್ ಎಫ್ ದರ
ಮಾರ್ಜಿನಲ್ ಸ್ಟಾಡಿಂಗ್ ಫೆಸಿಲಿಟಿ(ಎಂಎಸ್ ಎಫ್) ದರವನ್ನು 25 ಮೂಲಾಂಶಗಳಷ್ಟು ಇಳಿಸಲಾಗಿದೆ. ಅಂದರೆ ಶೇ 9.0 ರಿಂದ ಶೇ 8.75ಕ್ಕೆ ಇಳಿದಿದೆ.
ಮೊದಲ ತ್ರೈಮಾಸಿಕದಲ್ಲಿ 75 ಮೂಲಾಂಶಗಳಷ್ಟು ಇಳಿಸಲಾಗಿದೆ. ಅಂದರೆ ಶೇ 10.25 ರಿಂದ ಶೇ 9.5ಕ್ಕೆ ಇಳಿಸಲಾಗಿತ್ತು.
ರೆಪೋದರ ಆಧಾರಿಸಿ ಜುಲೈ 17ರಿಂದ ಅನ್ವಯವಾಗುವಂತೆ ಬ್ಯಾಂಕುಗಳು ಶೇ 10.25ರಂತೆ ಆರ್ ಬಿಐ ನಿಂದ ಬ್ಯಾಂಕುಗಳು ಹಣ ಪಡೆಯುತ್ತಿದ್ದವು. ಈಗ ಇದು 25ಮೂಲಾಂಶಗಳಷ್ಟು ಇಳಿಸಲಾಗಿದೆ. ಮಾರುಕಟ್ಟೆ ಅಂದಾಜು ಶೇ 0.25ರಷ್ಟಿತ್ತು.
ಹಣದುಬ್ಬರ
ಆರ್ ಬಿಐ ತ್ರೈಮಾಸಿಕ ನೀತಿ ಗಮನಿಸಿದರೆ ಆರ್ಥಿಕ ಪ್ರಗತಿ ಬಗ್ಗೆ ಹೆಚ್ಚಿನ ಗಮನ ಹರಿಸಿದಂತೆ ಕಾಣುವುದಿಲ್ಲ. ಹಣದುಬ್ಬರದ ಜತೆ ಗುದ್ದಾಡುತ್ತಿದೆ.
ಇಂಧನ ದರ ತ್ವರಿತ ಗತಿ ಏರಿಕೆ, ರುಪಾಯಿ ಅಪಮೌಲ್ಯ, ಅಂತಾರಾಷ್ಟ್ರೀಯ ಸರಕು ಸಾಮಾಗ್ರಿ ದರ ಏರಿಕೆ ಎಲ್ಲವನ್ನು ಆರ್ ಬಿಐ ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದೆ.CPI(ಗ್ರಾಹಕ ದರ ಸೂಚ್ಯಂಕ) ಎಣಿಕೆಯಂತೆ ರೀಟೇಲ್ ಮಟ್ಟದಲ್ಲಿ ಹಣದುಬ್ಬರ ನಾಲ್ಕು ವರ್ಷದಿಂದ ಏರಿಕೆ ಕಾಣುತ್ತಲೇ ಇದೆ. ಖಾರಿಫ್ ಬೆಳೆ ಕೊಯ್ಲಿನ ನಂತರ ಸಿಪಿಐ ಹಣದುಬ್ಬರದಲ್ಲಿ ಬದಲಾವಣೆ ಕಾಣಬಹುದಾಗಿದೆ ಎಂದು ಆರ್ ಬಿಐ ಭರವಸೆ ನೀಡಿದೆ.
ಬ್ಯಾಂಕಿಂಗ್ ಷೇರುಗಳು
ಆರ್ ಬಿಐ ನೀತಿ ಪ್ರಕಟಿಸುತ್ತಿದ್ದಂತೆ ಷೇರುಪೇಟೆಯಲ್ಲಿ ಬ್ಯಾಂಕ್ ಷೇರುಗಳಲ್ಲಿ ಏರಿಳಿತ ಕಂಡು ಬಂದಿದೆ. ಐಸಿಐಸಿಸಿ ಶೇ 2.56 ರಷ್ಟು ಏರಿಕೆ, ಯಸ್ ಬ್ಯಾಂಕ್ ಶೇ 2.5 ರಷ್ಟು,ಬ್ಯಾಂಕ್ ಆಫ್ ಬರೋಡಾ ಹಾಗೂ ಸಿಂಡಿಕೇಟ್ ಬ್ಯಾಂಕ್ ಶೇ 2 ರಷ್ಟು ಏರಿಕೆ ಕಂಡಿದೆ. ಬ್ಯಾಂಕುಗಳ ಷೇರುಗಳು ಸುಧಾರಣೆ ಕಂಡಿರುವುದರಿಂದ ಷೇರುಪೇಟೆ ಕೂಡಾ ಸೂಚ್ಯಂಕಗಳು ಸುಸ್ಥಿತಿಯಲ್ಲಿದೆ.


Click it and Unblock the Notifications