ಬೆಂಗಳೂರು, ಅ. 20: ಸರ್ಕಾರಿ ಸ್ವಾಮ್ಯದ ಲೈಫ್ ಇನ್ಶೂರೆನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಸೇರಿದಂತೆ ದೇಶಿಯ ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಇನ್ಫೋಸಿಸ್ ನೆಚ್ಚಿನ ಸಂಸ್ಥೆಯಾಗಿ ಮೂಡಿಬಂದಿದೆ.
ಇನ್ಫೋಸಿಸ್ ಸಂಸ್ಥೆಯಲ್ಲಿ ಎಲ್ ಐಸಿ ಶೇ. 4.45 ಷೇರು ಹೊಂದಿದ್ದು ಅದರ ಒಟ್ಟು ಮೌಲ್ಯ 1,400 ಕೋಟಿ ರೂಪಾಯಿಗಳಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಜುಲೈ-ಸಪ್ಟೆಂಬರ್ ತ್ರೈಮಾಸಿಕದ ಅಂತ್ಯಕ್ಕೆ ಎಲ್ ಐಸಿ ತಾನು ಹೊಂದಿರುವ ಷೇರಿನ ಮಾಹಿತಿ ನೀಡಿದೆ. ಆದರೆ ಯಾವ ದಿನಾಂಕದಂದು ಈ ಪ್ರಮಾಣದ ಷೇರು ಖರೀದಿಸಿದ್ದೆ ಎಂದು ಎಲ್ ಐಸಿ ತಿಳಿಸಿಲ್ಲ.[ಹಬ್ಬದ ವೇಳೆ ಸಕತ್ ರಿಟರ್ನ್ಸ್ ನೀಡುವ ಷೇರುಗಳು]

ಇನ್ಫೋಸಿಸ್ ಸಿಒಇ ಆಗಿ ಕಳೆದ ಆಗಸ್ಟ್ ನಲ್ಲಿ ವಿಶಾಲ್ ಸಿಕ್ಕಾ ಅಧಿಕಾರ ವಹಿಸಿಕೊಂಡ ಮೇಲೆ ಕಾರ್ಯಚಟುವಟಿಕೆಯಲ್ಲಿ ಬದಲಾವಣೆಗಳಾಗಿವೆ. ಷೇರು ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಭುತ್ವ ಸಾಧಿಸಿರುವ ಲೈಫ್ ಇನ್ಶೂರೆನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಹಿಂದಿನ ತ್ರೈಮಾಸಿಕ ಅಂದೆ ಜನವರಿ-ಮಾರ್ಚ್ ಅವಧಿಯಲ್ಲಿ ಶೇ.3.25ರಷ್ಟು ಇನ್ಫೋಸಿಸ್ ಷೇರು ಖರೀದಿಸಿದ್ದರೆ ಈಗ ಅದು ಶೇ. 4.45 ರಷ್ಟಕ್ಕೆ ಏರಿದೆ ಎಂದು ತಿಳಿಸಿದೆ. ಸಪ್ಟೆಂಬರ್ 30 ಕ್ಕೆ ಕೊನೆಗೊಂಡ ತ್ರೈಮಾಸಿಕದ ಅಂತ್ಯಕ್ಕೆ ಎಲ್ ಐಸಿ ಈ ಲೆಕ್ಕ ನೀಡಿದೆ.
ಏಪ್ರಿಲ್-ಜೂನ್ ಅವಧಿಯಲ್ಲಿ ಇನ್ಫೋಸೀಸ್‌ನ ಶೇ. 3.71 ಷೇರು ಎಲ್ ಐಸಿ ಬಳಿ ಇತ್ತು. ಆದರೆ ಅದು ನಿರಂತರವಾಗಿ ಹೆಚ್ಚುತ್ತಲೇ ಬಂದಿದ್ದು ಸರ್ಕಾರಿ ಸ್ವಾಮ್ಯದ ಕಂಪನಿ ತನ್ನ ಬಂಡವಾಳ ಪ್ರಮಾಣವನ್ನು ಸಹ ಹೆಚ್ಚಿಸಿಕೊಂಡಿದೆ.[ಪ್ರಾಪರ್ಟಿ ಕೊಳ್ಳುವ ಮೊದಲು ಈ 8 ದಾಖಲೆ ಪರಿಶೀಲಿಸಿ]
ಆದರೆ ಎಲ್ ಐಸಿ ಐಟಿ ಉದ್ಯಮದ ಷೇರು ಖರೀದಿಗೆ ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ. ಕಳೆದ ವರ್ಷದಿಂದ ಈ ರೀತಿಯ ಧೋರಣೆ ಅನುಸರಿಸುತ್ತಿರುವುದು ದಾಖಲೆಗಳಿಂದ ಸ್ಪಷ್ಟವಾಗುತ್ತದೆ. ಕೇವಲ ಇನ್ಫೋಸಿಸ್ ಷೇರು ಖರೀದಿ ಮೇಲೆ ಗುರಿ ಇರಿಸಿಕೊಂಡಂತೆ ಕಾಣುತ್ತಿದೆ.
ಸದ್ಯದ ಮಾರುಕಟ್ಟೆ ಮೌಲ್ಯದ ಪ್ರಕಾರ ಇನ್ಫೋಸಿಸ್ ಷೇರುಗಳು ಉತ್ತಮ ಹಂತದಲ್ಲಿದ್ದು ಎಲ್ ಐಸಿ ಬಳಿ ಇರುವ 1,400 ಕೋಟಿ ರೂ. ಮೌಲ್ಯದ ಷೇರುಗಳು ಪ್ರತಿದಿನ ತಮ್ಮ ಬೆಲೆ ಹೆಚ್ಚಿಸಿಕೊಳ್ಳುತ್ತಲೇ ಇವೆ. ಹೊರಗಿನಿಂದ ಬಂದವರು ಎಂದೇ ಕರೆಸಿಕೊಂಡಿರುವ ಸಿಕ್ಕಾ ಅಧಿಕಾರ ವಹಿಸಿಕೊಂಡ ಮೇಲೂ, ಜರ್ಮನಿ ಮೂಲದ ಕಂಪನಿಯೊಂದನ್ನೂ ಖರೀದಿಸಿದ ನಂತರವೂ ಕಂಪನಿ ಉತ್ತಮ ವಹಿವಾಟು ನಡೆಸುತ್ತಿದೆ.
ಇನ್ಫೋಸೀಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ನಾಲ್ಕು ವರ್ಷದ ಕೆಳಗೆ ಅಧಿಕಾರ ತೊರೆದಾಗ ಕಂಪನಿ ಕೊಂಚ ಹಿನ್ನಡೆ ಅನುಭವಿಸಿತ್ತು. ಆದರೆ ಮೂರ್ತಿ ಮತ್ತೆ ಆಡಳಿತಕ್ಕೆ ಮರಳಿದ ನಂತರ ಸಂಸ್ಥೆ ಅಭಿವೃದ್ಧಿ ಪಥದಲ್ಲೇ ಸಾಗಿತು. ಎಲ್‌ಐಸಿ ಹೊರತುಪಡಿಸಿದರೆ ದೇಶಿಯ ಬಂಡವಾಳ ಹೂಡಿಕೆದಾರರಿಗೂ ಇನ್ಫೋಸಿಸ್ ನೆಚ್ಚಿನ ಸಂಸ್ಥೆಯಾಗಿ ಮೂಡಿಬಂದಿದೆ.
ದೇಶಿಯ ಬಂಡವವಾಳದಾರರ ಶೇ. 14.08 ರಷ್ಟು ಹಣ ಬೆಂಗಳೂರು ಮೂಲದ ಐಟಿ ಕಂಪನಿ ಸೇರಿದೆ. ಅದರಂತೆ ವಿದೇಶಿ ಹೂಡಿಕೆದಾರರು ಸಹ ಆಸಕ್ತಿ ತೋರಿಸಿದ್ದು ಕಳೆದ ಅವಧಿಯಲ್ಲಿ ಶೇ.41.58 ರಷ್ಟು ಹಣ ಹೂಡಿದ್ದವರು ಕೊನೆಗೊಂಡ ತ್ರೈಮಾಸಿಕದಲ್ಲಿ 42.67 ಹೂಡಿಕೆ ಮಾಡಿದ್ದಾರೆ.


Click it and Unblock the Notifications