ವೇತನ ಪರಿಷ್ಕರಣೆಕ್ಕೆ ಸಂಬಂಧಿಸಿ ಬ್ಯಾಂಕ್ ನೌಕರರ ಒಕ್ಕೂಟ ಬುಧವಾರ ಮುಷ್ಕರ ನಡೆಸುತ್ತಿದೆ. ಆದರೆ ಖಾಸಗಿ ಬ್ಯಾಂಕ್ ಗಳ ವಹಿವಾಟಿನಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.
ಪ್ರಮುಖ ಖಾಸಗಿ ಬ್ಯಾಂಕ್ ಗಳಾದ ಎಚ್ ಡಿಎಫ್ ಸಿ ಮತ್ತು ಐಸಿಐಸಿಐ ಸೇರಿದಂತೆ ಎಲ್ಲವೂ ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ ಎಲ್ಲ ಬ್ಯಾಂಕ್ ಗಳ ಎಟಿಎಂ ಗಳು ಎಂದಿನಂತೆ ಕೆಲಸ ಮಾಡುತ್ತಿವೆ.[ಬುಧವಾರ ಬ್ಯಾಂಕ್ ಮುಷ್ಕರ, ವಹಿವಾಟು ಸ್ಥಗಿತ]
ಶೇ.23ರಷ್ಟು ವೇತನ ಪರಿಷ್ಕರಿಸಿ ಎಂದು ನೌಕರರ ಒಕ್ಕೂಟ ಬೇಡಿಕೆಯನ್ನು ಸರ್ಕಾರಿ ಅಧೀನದ ಭಾರತೀಯ ಬ್ಯಾಂಕ್ ಸಂಘ ಒಪ್ಪಿಕೊಂಡಿರಲಿಲ್ಲ. ಕೇವಲ ಶೇ.11 ವೇತನ ಪರಿಷ್ಕರಣೆ ಮಾಡುವುದಾಗಿ ಹೇಳಿತ್ತು. ಸೋಮವಾರದ ನಡೆದ ಸಂಧಾನ ಸಭೆ ವಿಫಲವಾಗಿ ನೌಕರರು ಮುಷ್ಕರಕ್ಕೆ ತೀರ್ಮಾನ ತೆಗೆದುಕೊಂಡಿದ್ದರು.
ದೇಶದಲ್ಲಿ ಒಟ್ಟು 27 ಸಾರ್ವಜನಿಕ ವಲಯದ ಬ್ಯಾಂಕ್ ಗಳಿವೆ. ಇವುಗಳ ಒಟ್ಟು ಸಿಬ್ಬಂದಿ ಸಂಖ್ಯೆ 8 ಲಕ್ಷವಿದ್ದು ದೇಶಾದ್ಯಂದ 50 ಸಾವಿರ ಶಾಖೆಗಳಿವೆ. ನವೆಂಬರ್ 2012ರ ನಂತರ ಬ್ಯಾಂಕ್ ಸಿಬ್ಬಂದಿಯ ವೇತನ ಪರಿಷ್ಕರಣೆ ಮಾಡಲಾಗಿಲ್ಲ. ನೌಕರರ ಒಕ್ಕೂಟ ಕರೆ ನೀಡಿರುವ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಖಾಸಗಿ ಬ್ಯಾಂಕ್ ಗಳು ವಹಿವಾಟು ನಿರತರಾಗಿರುವುದರಿಂದ ನಾಗರಿಕರಿಗೆ ಸದ್ಯಕ್ಕೆ ಯಾವುದೇ ತೊಂದರೆ ಆಗಿಲ್ಲ.