ಅಂತರ್ಜಾಲ ಸಂಸ್ಥೆ ಯಾಹೂ ಇಂಕ್ ನ ಪ್ರಮುಖ ಅಂತರ್ಜಾಲ ವಹಿವಾಟನ್ನು ರೂ. 32,361 ಕೋಟಿಗಳಿಗೆ ಖರೀದಿಸಿರುವುದಾಗಿ ವೆರಿಝೋನ್ ಕಮ್ಯೂನಿಕೇಷನ್ಸ್ ಇಂಕ್ ತಿಳಿಸಿದೆ.
ಅನೇಕ ವರ್ಷಗಳಿಂದ ಗೂಗಲ್ ನ ಸಮಾನ ಸ್ಪರ್ಧಿಯಾಗಿ ಅಂತರ್ಜಾಲ ಬಳಕೆಗೆ ಯಾಹೂ ಪ್ರವೇಶ ದ್ವಾರವಾಗಿತ್ತು. ಈಗ ವೆರಿಝೋನ್ ನ ವಶವಾಗಿದ್ದರೂ, ಅದರಲ್ಲಿ ನಗದು, ಅಲಿಬಾಬಾ ಗ್ರೂಪ್ ಹೋಲ್ಡಿಂಗ್ಸ್ ನಲ್ಲಿನ ಷೇರುಗಳು, ಯಾಹೂ ಜಪಾನಿನಲ್ಲಿನ ಷೇರುಗಳು ಸೇರಿದಂತೆ ಕೆಲ ಸಣ್ಣ ಪುಟ್ಟ ಹೂಡಿಕೆಗಳು ಸೇರ್ಪಡೆಯಾಗಿಲ್ಲ. ಈ ಎಲ್ಲ ಸಂಪತ್ತಿನ ನಿರ್ವಹಣೆ ಯಾಹೂ ವಶದಲ್ಲಿಯೇ ಇರಲಿದೆ.
ಯಾಹೂ ಜಾಹೀರಾತು ತಂತ್ರಜ್ಞಾನ, ಮಾಹಿತಿ ಶೋಧ, ಇ-ಮೇಲ್ ಮೆಸೆಂಜರ್ ಆಸ್ತಿಗಳನ್ನು ಖರೀದಿಸುವುದರಿಂದ ವೆರಿಝೋನ್ ಎಒಎಲ್ ಅಂತರ್ಜಾಲ ವಹಿವಾಟಿಗೆ ಇನ್ನಷ್ಟು ಉತ್ತೇಜನ ದೊರೆಯಲಿದೆ.

ಇತ್ತೀಚಿನ ದಿನಗಳಲ್ಲಿ ಕಂಪನಿ ಅಂತರ್ಜಾಲ ಸಂಸ್ಥೆಗಳಾದ ಗೂಗಲ್ ಮತ್ತು ಫೆಸ್ಬುಕ್ ಜತೆಗಿನ ಸ್ಪರ್ಧೆಯಲ್ಲಿ ಹಿಂದೆ ಬಿದ್ದಿದೆ. ಇಂಟರ್ನೆಟ್ ಬಳಕೆಯು ಮೊಬೈಲ್, ಸಾಮಾಜಿಕ ಜಾಲತಾಣಗಳು ಮತ್ತು ಮೆಸೆಜಿಂಗ್ ಸೇವೆಗೆ ವರ್ಗಾವಣೆಗೊಂಡ ನಂತರ ಯಾಹೂ ಕ್ರಮೇಣ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿದೆ.
ಯಾಹೂ ಈಗ ವೆರಿಝೋನ್ ವಶವಾಗಿರುವುದರಿಂದ ವೆರಿಝೋನ್, ಎಒಎಲ್ ಮತ್ತು ಯಾಹೂ ಒಟ್ಟಾಗಿ ಮೊಬೈಲ್ ಮಾದ್ಯಮದಲ್ಲಿ ಪ್ರತಿಸ್ಪರ್ಧಿ ಸಂಸ್ಥೆಗಳಿಗೆ ಹೊಸ ಸ್ಪರ್ಧೆ ಒಡ್ಡಲಿದೆ ಎಂಬುದು ತಜ್ಞರ ಅಭಿಪ್ರಾಯ.
ಈ ಸ್ವಾಧೀನ ಪ್ರಕ್ರಿಯೆಗೆ ಯಾಹೂವಿನ ಷೇರುದಾರರು ಅನುಮೋದನೆ ನೀಡಬೇಕಾಗಿದ್ದು, 2017ರ ಮೊದಲ ತ್ರೈಮಾಸಿಕ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅಲ್ಲಿಯವರೆಗೆ ಯಾಹೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ.
ಯಾಹೂ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯಲ್ಲಿ ಮರಿಸ್ಸಾ ಮೇಯರ್ ಮುಂದುವರೆಯುವುದಾಗಿ ಹೇಳಿದ್ದಾರೆ.


Click it and Unblock the Notifications