ದೇಶದ ಪ್ರಮುಖ ಬಹು ಬ್ರ್ಯಾಂಡ್ ಪ್ಯಾಷನ್ ಅಂತರ್ಜಾಲ ಮಳಿಗೆಯಾದ ಜಬಾಂಗ್ ಅನ್ನು ಪ್ಲಿಪ್ಕಾರ್ಟ್ ಒಡೆತನದ ಆನ್ಲೈನ್ ಮಾರುಕಟ್ಟೆ ತಾಣ ಮಿಂತ್ರಾ ತನ್ನ ವಶಕ್ಕೆ ತೆಗೆದುಕೊಂಡಿದ್ದು, ಅಂದಾಜು ರೂ. 470 ಕೋಟಿಗಳಿಗೆ ಖರೀದಿಸಲಾಗಿದೆ.
ಮೊನ್ನೆಯಷ್ಟೆ ವೆರಿಝೋನ್ ಯಾಹೂ ಅಂತರ್ಜಾಲ ತಾಣವನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಅದರ ಹಿನ್ನೆಲೆಯಲ್ಲಿಯೇ ಇನ್ನೊಂದು ಆನ್ಲೈನ್ ಮಾರುಕಟ್ಟೆ ತಾಣವಾದ ಮಿಂತ್ರಾ ಜಬಾಂಗ್ ಅನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಅಂತರ್ಜಾಲ ಮತ್ತು ಆನ್ಲೈನ್ ಮಾರುಕಟ್ಟೆಯಲ್ಲಿ ಅನೇಕ ಬದಲಾವಣೆಗಳು ಆಗುತ್ತಿರುವುದನ್ನು ಗಮನಿಸಬಹುದಾಗಿದೆ.
ಜಬಾಂಗ್ ಸ್ವಾಧೀನದಿಂದ ಪ್ಯಾಷನ್ ಮತ್ತು ಜೀವನಶೈಲಿ ಉತ್ಪನ್ನಗಳ ಅಂತರ್ಜಾಲ ಮಾರುಕಟ್ಟೆಯಲ್ಲಿ ಪ್ಲಿಪ್ಕಾರ್ಟ್ ಸಮೂಹ ಮುಂಚೂಣಿ ಸ್ಥಾನ ಇನ್ನಷ್ಟು ಹೆಚ್ಚಲಿದೆ ಎಂಬುದು ತಜ್ಞರ ನಿರೀಕ್ಷೆಯಾಗಿದೆ.

ಬೆಂಗಳೂರು ಮೂಲದ ಇ-ಕಾಮರ್ಸ್ ಕಂಪನಿ ಪ್ಲಿಪ್ಕಾರ್ಟ್, 2014ರಲ್ಲಿ 2000 ಕೋಟಿಗಳಿಗೆ ಮಿಂತ್ರಾ ಸಂಸ್ಥೆಯನ್ನು ಖರೀದಿಸಿತ್ತು.
ಇತ್ತೀಚೆಗಂತೂ ಪ್ಯಾಷನ್ ಮತ್ತು ಜೀವನಶೈಲಿ ಉತ್ಪನ್ನಗಳು ಭಾರತದಲ್ಲಿ ತುಂಬಾ ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದು, ಎಲ್ಲರೂ ಆಕರ್ಷಿತರಾಗುತ್ತಿದ್ದು ಚಾಲಕ ಶಕ್ತಿಗಳಾಗಿ ಮಾರ್ಪಟ್ಟಿವೆ ಎಂದು ಪ್ಲಿಪ್ಕಾರ್ಟ್ ಸಹಸ್ಥಾಪಕ ಮತ್ತು ಸಿಇಓ ಬಿನ್ನಿ ಬನ್ಸಾಲ್ ಹೇಳಿದ್ದಾರೆ.
ಜಬಾಂಗ ಸ್ವಾಧೀನ ಕುರಿತು ಫ್ಯೂಚರ್ ಗ್ರೂಪ್, ಸ್ನ್ಯಾಪ್ ಡೀಲ್ ಮತ್ತು ಆದಿತ್ಯ ಬಿರ್ಲಾ ಮಾಲೀಕತ್ವದ ಅಡೊಫ್ ಸೇರಿದಂತೆ ಅನೇಕ ಸಂಸ್ಥೆಗಳು ಆಸಕ್ತಿ ತೋರಿಸಿದ್ದವು. ಆದರೆ, ಅಂತಿಮವಾಗಿ ಮಿಂತ್ರಾ ಜಬಾಂಗ್ ಅನ್ನು ಖರೀದಿಸುವುದರಲ್ಲಿ ಯಶಸ್ವಿಯಾಗಿದೆ.


Click it and Unblock the Notifications