ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಯ ಮೂರನೇ ಹಂತದ 27 ಸ್ಮಾರ್ಟ್ ಸಿಟಿಗಳನ್ನು ಮಂಗಳವಾರ ಪ್ರಕಟಿಸಿದ್ದು, ರಾಜ್ಯದ 4 ನಗರಗಳಿಗೆ ಈ ಸ್ಮಾರ್ಟ್ ಸಿಟಿ ಭಾಗ್ಯ ಲಭಿಸಿದೆ.
ಕರ್ನಾಟಕ ರಾಜ್ಯದ ಮಂಗಳೂರು, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ನಗರಗಳು ಸ್ಥಾನ ಪಡೆದಿವೆ ಎಂದು ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ವೆಂಕಯ್ಯ ನಾಯ್ಡು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1. 27 ನಗರಗಳ ಆಯ್ಕೆ
12 ರಾಜ್ಯಗಳ 63 ನಗರಗಳ ಪಟ್ಟಿಯಲ್ಲಿ 27 ನಗರಗಳನ್ನು ಆಯ್ಕೆ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯ 3 ಹಂತಗಳಲ್ಲಿ ಈವರೆಗೆ 60 ನಗರಗಳು ಸ್ಥಾನ ಪಡೆದಂತಾಗಿದೆ. ಮೊದಲ ಹಂತದಲ್ಲಿ 20, 2ನೇ ಹಂತದಲ್ಲಿ 13 ಮತ್ತು ಈಗ 3ನೇ ಹಂತದಲ್ಲಿ 27 ನಗರಗಳನ್ನು ಆಯ್ಕೆ ಮಾಡಲಾಗಿದೆ.
2. ಬೆಂಗಳೂರಿಗಿಲ್ಲ ಭಾಗ್ಯ
3ನೇ ಹಂತದ ಈ ಪಟ್ಟಿಯಲ್ಲಿ ಬೆಂಗಳೂರು ಕೂಡ ಸ್ಪರ್ಧೆಯಲ್ಲಿ ಇತ್ತು. ಆದರೆ 3ನೇ ಹಂತದ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಆಯ್ಕೆಯಾಗುವಲ್ಲಿ ಬೆಂಗಳೂರು ವಿಫಲವಾಯಿತು. ಮುಂದಿನ ಹಂತಗಳಲ್ಲಿ ಇದೂ ಸ್ಮಾರ್ಟ್ ಆಗುವ ನಿರೀಕ್ಷೆ ಇದೆ.
3. ರಾಜ್ಯದ 6 ನಗರಗಳಿಗೆ ಸ್ಮಾರ್ಟ್‌ಸಿಟಿ ಭಾಗ್ಯ
ಹಿಂದಿನ ಮೊದಲ ಹಂತದ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಬೆಳಗಾವಿ, ದಾವಣಗೆರೆ ಆಯ್ಕೆಯಾಗಿದ್ದವು. ಈಗ ಮೂರನೇ ಹಂತದಲ್ಲಿ 4 ನಗರಗಳು ಆಯ್ಕೆಯಾಗಿದ್ದು, ಒಟ್ಟು 6 ನಗರಗಳಿಗೆ ಸ್ಮಾರ್ಟ್‌ಸಿಟಿ ಭಾಗ್ಯ ಸಿಕ್ಕಂತಾಗಿದೆ.
4. ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆ
ಸಂಸದರ ಆದರ್ಶ ಗ್ರಾಮ ಯಹೋಜನೆಯಂತೆಯೇ ಸ್ಮಾರ್ಟ್ ಸಿಟಿ ಯೋಜನೆಯು ಪ್ರಧಾನಿ ನರೇಂದ್ರ ಮೋದಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಎಂದೇ ಬಿಂಬಿಸಲಾಗಿದೆ. 2022ರೊಳಗೆ ದೇಶದ 100 ನಗರಗಳನ್ನು ಸಕಲ ಸೌಲಭ್ಯಗಳನ್ನು ಹೊಂದಿರುವ ಸುಭದ್ರ, ಸುಸ್ಥಿರ ಸಿಟಿಗಳನ್ನಾಗಿ ಪರಿವರ್ತಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
5. ಅನುಷ್ಠಾನ/ಅನುದಾನ ಹೇಗೆ?
ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ ನಗರಗಳು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಂದ ಅನುದಾನ ಪಡೆಯಲಿವೆ.
- ಕೇಂದ್ರ ಸರ್ಕಾರ ಆಯ್ಕೆಯಾದ ನಗರಗಳಿಗೆ ಮೊದಲ ವರ್ಷ ತಲಾ ರೂ. 200 ಕೋಟಿ ಅನುದಾನ ನೀಡಲಿದೆ.
- ನಂತರದ 3 ವರ್ಷಗಳಲ್ಲಿ ಪ್ರತಿ ನಗರಕ್ಕೆ ತಲಾ ರೂ. 100 ಕೋಟಿ ನೆರವು ಸಿಗಲಿದೆ
- ಕೇಂದ್ರ ವ್ಯಯಿಸುವ ಮೊತ್ತದಷ್ಟೆ ಆಯಾ ಮಹಾನಗರ ಪಾಲಿಕೆಗಳು/ರಾಜ್ಯಗಳು ವ್ಯಯಿಸಬೇಕು
6. ಯೋಜನೆಯ ಬಜೆಟ್
3ನೇ ಹಂತದ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಗರಗಳ ಅಭಿವೃದ್ಧಿಗಾಗಿ ಒಟ್ಟಾರೆ ರೂ. 66,883 ಕೋಟಿ ರೂ. ವ್ಯಯಿಸಲಾಗುವುದು ಎಂದು ಅಂದಾಜಿಸಲಾಗಿದೆ.
7. ಸ್ಮಾರ್ಟ್ ಸಿಟಿ ಉದ್ದೇಶಗಳೇನು?
ಅತ್ಯಾಧುನಿಕ ಸ್ಪರ್ಶದೊಂದಿಗೆ ಸಮಗ್ರವಾಗಿ ಮೂಲಭೂತ ಸೌಲಭ್ಯಗಳನ್ನು ಅಳವಡಿಸುವುದು ಸ್ಮಾರ್ಟ್ ಸಿಟಿಯ ಯೋಜನೆಯ ಮೂಲ ಉದ್ದೇಶ. ಈ ನಿಟ್ಟಿನಲ್ಲಿ ಇ-ಆಡಳಿತ, ಆನ್‌ಲೈನ್ ಪ್ರಮುಖ ಪಾತ್ರ ಪಡೆಯಲಿವೆ.
* ಪರಿಣಾಮಕಾರಿ ನಗರ ಸಾರಿಗೆ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸುವುದು
* ವಿದ್ಯುತ್ ಸರಬರಾಜು ಪೂರೈಕೆ
* ಸ್ವಚ್ಛ ನೀರು, ನೈರ್ಮಲ್ಯ, ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ
* ಇ-ಆಡಳಿತ, ನಾಗರಿಕ ಸಹಭಾಗಿತ್ವ ಸಾಧಿಸುವುದು
* ಮಾಹಿತಿ ತಂತ್ರಜ್ಞಾನ (ಐಟಿ) ಸಂಪರ್ಕ
* ಉತ್ತಮ ಶಿಕ್ಷಣ, ಆರೋಗ್ಯ ಸೌಲಭ್ಯ
8. ಮಂಗಳೂರಿಗೆ 2000 ಕೋಟಿ
ಮಂಗಳೂರು ಮೇಯರ್ ಹರಿನಾಥ್ ಸ್ಮಾರ್ಟ್ ಸಿಟಿ ಯೋಜನೆಯನ್ನು ಯಶಸ್ವಿಯಾಗಿ ಸಾಧಿಸಿ ಮಂಗಳೂರನ್ನು ಸ್ಮಾರ್ಟ್ ಆಗಿ ಮಾಡಲು ಅಧಿಕಾರಿಗಳೆಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಮಂಗಳೂರು ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ನಗರದಲ್ಲಿ ಮುಂದಿನ ಐದು ವರ್ಷಗಳಲ್ಲಿ 2,000 ಕೋಟಿ ವ್ಯಯಿಸಲಿದೆ.
9. ಶಿವಮೊಗ್ಗದಲ್ಲಿ ಪರಮಾನಂದ
ಕೇಂದ್ರ ನಗರಾಭಿವೃದ್ಧಿ ಸಚಿವಾಲಯದಿಂದ ಸ್ಮಾರ್ಟ್ ಸಿಟಿ ಪಟ್ಟಿ ಘೋಷಣೆಯಾಗುತ್ತಿದ್ದಂತೆಯೇ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರ ಸಂಭ್ರಮಾಚರಣೆ ಪ್ರಾರಂಭವಾಯಿತು. ಶಿವಮೊಗ್ಗ ನಗರ ಆಯ್ಕೆ ಸಾರ್ವಜನಿಕ ಸೇವೆಗಳ ಗುಣಮಟ್ಟ ಮತ್ತು ಅದರ ಡೆಲಿವರೆನ್ಸ್ ಗತಿಯನ್ನು ಸುಧಾರಿಸಲು ಸಹಕಾರಿಯಾಗಲಿದೆ ಎಂದು ಶಾಸಕ K.B. ಪ್ರಸನ್ನ ಕುಮಾರ್ ಹೇಳಿದರು.
10. ಧಾರವಾಡ-ಹುಬ್ಬಳ್ಳಿ
ಹುಬ್ಬಳಿ-ಧಾರವಾಡ ಅವಳಿ ನಗರಗಳ ವಿಶೇಷ ಉದ್ದೇಶದ ವಾಹನ (SPV)ಯೋಜನೆಯನ್ನು ಕಾರ್ಯಗತಗೊಳಿಸಲು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಉದ್ದೇಶಿಸಲಾಗಿದೆ. ಪರಿಷ್ಕೃತ ಸ್ಮಾರ್ಟ್ ಸಿಟಿ ಯೋಜನೆ ಪ್ರಕಾರ, 1,662 ಕೋಟಿ ರೂ ಅವಳಿ ನಗರಗಳ ಯೋಜನೆಯ ಅನುಷ್ಠಾನಕ್ಕೆ ಪ್ರಸ್ತಾಪಿಸಲಾಗಿದೆ.
ಜಗದೀಶ್ ಶೆಟ್ಟರ್ ಮತ್ತು ಸಂಸದ ಪ್ರಹ್ಲಾದ ಜೋಶಿಯವರ ದೀರ್ಘ ಬೇಡಿಕೆಯು ಈಗ ನೇರವೇರಿದಂತಾಗಿದೆ.
ಮೂಲಸೌಕರ್ಯ ಅಭಿವೃದ್ಧಿ ಹೆಚ್ಚಿಸಲು, ಜೀವನ ಸಾಮರ್ಥ್ಯ ಹೆಚ್ಚಿಸಲು ಮತ್ತು ನಾಗರಿಕರ ಕುಂದು ಕೊರತೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಸ್ಮಾರ್ಟ್ ಸಿಟಿ ಯೋಜನೆ ಸಹಕಾರಿಯಾಗಲಿದೆ ಸಂಸದ ಪ್ರಹ್ಲಾದ ಜೋಶಿ ಹೇಳಿದರು.
12. ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿನ ರಾಜ್ಯ, ನಗರಗಳು
ಕರ್ನಾಟಕದ: ಮಂಗಳೂರು, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ತುಮಕೂರು
ಉತ್ತರಪ್ರದೇಶ: ಆಗ್ರಾ, ಕಾನ್ಪುರ್, ವಾರಣಾಸಿ
ಮಹಾರಾಷ್ಟ್ರ: ಔರಂಗಬಾದ್, ಕಲ್ಯಾಣ್ ದೊಂಬಿವಲಿ, ನಾಗ್ಪುರ್, ನಾಸಿಕ್, ಥಾಣೆ
ಮಧ್ಯಪ್ರದೇಶ: ಗ್ವಾಲಿಯರ್, ಉಜ್ಜೈನ್
ರಾಜಸ್ಥಾನ: ಅಜ್ಮೇರ್, ಕೋಟ
ಪಂಜಾಬ್: ಅಮೃತ್ ಸರ್, ಜಲಂಧರ್
ತಮಿಳುನಾಡು: ಮದುರೈ, ಸೇಲಂ, ತಂಜಾವೂರ್ ಹಾಗೂ ವೆಲ್ಲೂರ್
ಆಂಧ್ರಪ್ರದೇಶ: ತಿರುಪತಿ
ಗುಜರಾತ್: ವೋಡೊದರಾ
ಒಡಿಶಾ: ರೂರ್ಕೆಲಾ
ನಾಗಲ್ಯಾಂಡ್: ಕೋಹಿಮಾ
ಸಿಕ್ಕಿಂ: ನಾಮ್ಚಿ


Click it and Unblock the Notifications