ಎಟಿಎಂ ಯಂತ್ರ ಮತ್ತು ಬ್ಯಾಂಕುಗಳಿಂದ ನಗದು ಹಣ ಪಡೆಯಲು ವಿಧಿಸಿದ್ದ ಮಿತಿಯನ್ನು ಕೇಂದ್ರ ಸರ್ಕಾರ ಭಾನುವಾರ ರಾತ್ರಿಯಿಂದ ಸಡಿಲಿಸಿ ಅದರ ಪ್ರಮಾಣವನ್ನು ಹೆಚ್ಚಿಸಿದೆ.
ಈಗಾಗಲೇ ದೇಶದಾದ್ಯಂತ ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆ ನಿಷೇಧಿಸಿ ಒಂದು ವಾರ ಕಳೆದಿದೆ. ಇದು ದೇಶದ ಅರ್ಥವ್ಯವಸ್ಥೆಯಲ್ಲಿ ಒಂದು ಮಹಾ ಆರ್ಥಿಕ ಕ್ರಾಂತಿಗೆ ಮುನ್ನುಡಿ ಬರೆದಿದೆ.
ಕೇಂದ್ರ ಸರ್ಕಾರ ಕಪ್ಪುಹಣ, ಖೋಟಾ ನೋಟು, ಭ್ರಷ್ಟಾಚಾರ, ಭಯೋತ್ಪಾದನೆ ತಡೆಗೆ ದಿಟ್ಟ ನಡೆ ಇಟ್ಟಿರುವ ಹಿನ್ನೆಲೆಯಲ್ಲಿ ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆ ನಿರ್ಬಂಧಿಸಲಾಗಿದೆ. ನೋಟು ನಿಷೇಧದಿಂದ ದೇಶದ ಮೇಲಾಗುವ ಪರಿಣಾಮಗಳೇನು?
ಹೀಗಾಗಿ ಜನಸಾಮಾನ್ಯರು ದಿನನಿತ್ಯದ ಅಗತ್ಯಕ್ಕೆ ಬೇಕಾಗುವಷ್ಟು ನಗದು ಹಣ ಸಿಗದೆ ಆಕ್ರೋಶಕ್ಕೆ ಒಳಗಾಗುತ್ತಿದ್ದಾರೆ. ಈ ನಡುವೆ ಎಟಿಎಂ ಯಂತ್ರ ಮತ್ತು ಬ್ಯಾಂಕುಗಳಿಂದ ನಗದು ಹಣ ಪಡೆಯಲು ವಿಧಿಸಿದ್ದ ಮಿತಿಯನ್ನು ಕೇಂದ್ರ ಸರ್ಕಾರ ಭಾನುವಾರ ರಾತ್ರಿಯಿಂದ ಸಡಿಲಿಸಿ ಅದರ ಪ್ರಮಾಣವನ್ನು ಹೆಚ್ಚಿಸಿದೆ. ಇನ್ನುಮುಂದೆ ಸಾರ್ವಜನಿಕರು ಹೆಚ್ಚಿನ ನಗದನ್ನು ಎಟಿಎಂ ಹಾಗೂ ಬ್ಯಾಂಕುಗಳ ಮೂಲಕ ಪಡೆಯಬಹುದು.
1. ಕೇಂದ್ರ ಸರ್ಕಾರ ನಿರ್ಧಾರ
ಸಾರ್ವಜನಿಕರಿಗೆ ಕಳೆದ ಐದಾರು ದಿನಗಳಿಂದ ಆಗುತ್ತಿರುವ ತೊಂದರೆಗಳನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ರೂ. 500, 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಸಭೆ ಸೇರಿದ ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳು ಎಟಿಎಂ ಮತ್ತು ಬ್ಯಾಂಕು ಶಾಖೆಗಳಲ್ಲಿ ಸಿಗುತ್ತಿರುವ ನಗದು ಪ್ರಮಾಣವನ್ನು ಹೆಚ್ಚಿಸುವ ಮುಖ್ಯ ನಿರ್ಧಾರ ಕೈಗೊಳ್ಳಲಾಯಿತು.
2. ಆರ್ಬಿಐ ಭರವಸೆ
ಈಗಾಗಲೇ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದು, ಹಲವು ಅನಾಹುತಗಳು ಸಂಭವಿಸಿವೆ. ಈ ಹಿನ್ನಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕು ಜನರಲ್ಲಿ ವಿಶ್ವಾಸ ಮೂಡಿಸಿದೆ.
ಬ್ಯಾಂಕುಗಳಲ್ಲಿ ಸಾಕಷ್ಟು ನಗದು ಹಣ ಸಂಗ್ರಹ ಆಗಿರುವುದರಿಂದ ಗ್ರಾಹಕರು ಆತಂಕಪಡಬೇಕಾಗಿಲ್ಲ. ಹಣ ಪಡೆಯಲು ಮತ್ತು ಡಿಪಾಸಿಟ್ ಇಡಲು ಪದೇ ಪದೇ ಬ್ಯಾಂಕುಗಳಿಗೆ ಹೋಗಿ ತೊಂದರೆ ಅನುಭವಿಸಬಾರದು ಎಂದು ಸಾರ್ವಜನಿಕರಲ್ಲಿ ಎಂದು ಮನವಿ ಮಾಡಿದೆ.
3. ವಿತ್ ಡ್ರಾ ಮಿತಿ ಹೆಚ್ಚಳ
ಇನ್ನು ಮುಂದೆ ಸಾರ್ವಜನಿಕರು ಹೆಚ್ಚಿನ ನಗದನ್ನು ಎಟಿಎಂ ಹಾಗೂ ಬ್ಯಾಂಕುಗಳ ಮೂಲಕ ವಿತ್ ಡ್ರಾ ಮಾಡಿಕೊಳ್ಳಬಹುದು.
- ಒಂದು ದಿನಕ್ಕೆ ಎಟಿಎಂನಿಂದ 2,500 ರೂ.ಗಳನ್ನು ವಿತ್ ಡ್ರಾ ಮಾಡಿಕೊಳ್ಳಬಹುದು. ಈ ಹಿಂದೆ ಇದರ ಮಿತಿ 2000 ರೂ. ಆಗಿತ್ತು.
- ಒಂದು ದಿನಕ್ಕೆ ರೂ. 4,500ರವೆರೆಗೆ ಹಳೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಈ ಹಿಂದೆ ಇದರ ಮಿತಿ ರೂ. 4000 ಆಗಿತ್ತು.
4. ಒಂದು ವಾರದ ಮಿತಿ ಏರಿಕೆ
- ಒಂದು ವಾರಕ್ಕೆ ಬ್ಯಾಂಕು ಶಾಖೆಗಳಿಂದ ಹಣ ಹಿಂಪಡೆಯುವ ಮಿತಿಯನ್ನು ರೂ. 20,000 ದಿಂದ 24,000 ರೂ.ಗಳಿಗೆ ಹೆಚ್ಚಿಸಲಾಗಿದೆ.
- ಒಂದು ದಿನಕ್ಕೆ ನಗದು ಹಣ ರೂ. 10,000 ಹಿಂಪಡೆಯಲು ಇದ್ದ ಗರಿಷ್ಠ ಮಿತಿ ರದ್ದುಗೊಳಿಸಲಾಗಿದ್ದು, ಒಂದೇ ಬಾರಿಗೆ ರೂ. 24,000 ಹಿಂಪಡೆಯಬಹುದು.
5. ಪ್ರತ್ಯೇಕ ಸಾಲು
ಈಗಾಗಲೇ ಹಿರಿಯ ನಾಗರಿಕರು, ಮಹಿಳೆಯರು ಮತ್ತು ಅಂಗವಿಕಲರು ತುಂಬಾ ತೊಂದರೆ ಅನುಭವಿಸಿದ್ದು, ಸಾಲಿನಲ್ಲಿ ನಿಲ್ಲುವಷ್ಟು ಚೈತನ್ಯ ಅವರಲ್ಲಿ ಇಲ್ಲ. ಹೀಗಾಗಿ ಬ್ಯಾಂಕು ಶಾಖೆಗಳಲ್ಲಿ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಪ್ರತ್ಯೇಕ ಸಾಲಿನಲ್ಲಿ ನಿಂತು ಹಣ ಹಿಂಪಡೆಯಲು ಹಾಗೂ ನಗದು ಜಮಾ ಮಾಡಲು ಅವಕಾಶ ಕಲ್ಪಿಸಲಾಗಿದೆ.
6. ನಿಮ್ಮ ಗಮನಕ್ಕೆ
ದೇಶದ ಪ್ರಮುಖ ಆಸ್ಪತ್ರೆಗಳಲ್ಲಿ ಮೊಬೈಲ್/ನೆಟ್ ಬ್ಯಾಂಕಿಂಗ್ ವಾಹನಗಳ ಸೌಲಭ್ಯ ಕಲ್ಪಿಸಲು ಬ್ಯಾಂಕುಗಳಿಗೆ ಈಗಾಗಲೇ ಸೂಚನೆ ನೀಡಲಾಗಿರುವುದನ್ನು ಸಾರ್ವಜನಿಕರು ಗಮನಿಸಬೇಕು.
ಅಲ್ಲದೆ ಕ್ರೆಡಿಟ್/ಡೆಬಿಟ್ ಕಾರ್ಡುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರಿಗೆ ನೀಡುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದ್ದು, ಕಾರ್ಡುಗಳನ್ನು ಪಡೆಯಿರಿ.
7. ಅವಧಿಯಲ್ಲಿ ವಿಸ್ತರಣೆ
ನಿವೃತ್ತರಾಗಿರುವ ಸರ್ಕಾರಿ ನೌಕರರು ಪಿಂಚಣಿ ಪಡೆಯಲು ಕೊಡಬೇಕಿರುವ ಜೀವಿತ ಪತ್ರವನ್ನು ನೀಡಲು
ಜನೆವರಿ 15ರವರೆಗೆ ಅವಧಿಯನ್ನು ವಿಸ್ತರಿಸಲಾಗಿದ್ದು, ನಿವೃತ್ತರರು ಯಾವುದೇ ತರಾತುರಿ ಮಾಡಬೇಕಾದ ಅಗತ್ಯವಿಲ್ಲ.
8. ಸಂತಸದ ಸುದ್ದಿ
ಇಷ್ಟು ದಿನ ಕೇವಲ ರೂ. 2000 ಮುಖಬೆಲೆಯ ಹೊಸ ನೋಟುಗಳನ್ನು ಪಡೆಯುತ್ತಿದ್ದಿರಿ. ಆದರೆ ಈಗ ರೂ. 500 ಮುಖಬೆಲೆಯ ಹೊಸ ನೋಟುಗಳ ಚಲಾವಣೆಯನ್ನು ಆರಂಭಿಸಲಾಗಿದೆ. ಹೀಗಾಗಿ ಚಿಲ್ಲರೆ ಪಡೆಯುವ ಸಮಸ್ಯೆ ಕೊಂಚ ಮಟ್ಟಿಗೆ ನಿಯಂತ್ರಣಕ್ಕೆ ಬರಬಹುದು.
9. ಯುಟಿಲಿಟಿ ಸೇವೆ ಮೂಲಕ ಬಿಲ್ ಪಾವತಿ
ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆ ನಿರ್ಬಂಧದಿಂದಾಗಿ ಜನರು ಬಿಲ್ ಪಾವತಿಸುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಅದಕ್ಕಾಗಿ ಬ್ಯಾಂಕುಗಳು ಬಿಲ್ಲುಗಳನ್ನು ಪಾವತಿ ಮಾಡಲು ಅನುಕೂಲವಾಗಲಿ ಎಂದು ಸಾರ್ವಜನಿಕರಿಗೆ ಆನ್ಲೈನ್ ಯುಟಿಲಿಟಿ ಬಿಲ್ ಪಾವತಿಗೆ ಅವಕಾಶ ಮಾಡಿಕೊಟ್ಟಿದೆ.
ಎಸ್ಬಿಐ, ಯೂನಿಯನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಐಸಿಐಸಿಐ, ಎಚ್ಡಿಎಫ್ಸಿ, ಎಚ್ಎಸ್ ಬಿಸಿ, ಎಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸಿಟಿ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಹೀಗೆ ಹಲವಾರು ಬ್ಯಾಂಕುಗಳು ಬಿಲ್ ಗಳನ್ನು ಪಾವತಿ ಮಾಡಲು ಯುಟಿಲಿಟಿ ಆನ್ಲೈನ್ ಸೌಲಭ್ಯವನ್ನು ಒದಗಿಸಿವೆ.
ಪೇಟಿಎಂ, ಬಿಲ್ ಡೆಸ್ಕ್, ಸುವಿಧಾ, ಈಜಿ ಬಿಲ್ ಇಂಡಿಯಾ, ಆಕ್ಸಿಜೆನ್ ವಾಲೆಟ್ ಮುಂತಾದ ಆನ್ಲೈನ್ ಯುಟಿಲಿಟಿ ಸೇವೆ ಮೂಲಕ ಬಿಲ್ ಪಾವತಿ ಮಾಡಬಹುದು.
10. ಬ್ಯಾಂಕು, ಪೋಸ್ಟ್ ಆಫೀಸ್ ಗಳಿಗೆ ರಜೆ ಇಲ್ಲ
ಆರ್ಬಿಐ ಪ್ರಕಟಿಸಿರುವ ರಜೆ ಪಟ್ಟಿಯ ಪ್ರಕಾರ ಮುಂಬೈ, ಹೈದರಾಬಾದ್, ಕೊಲ್ಕತ್ತಾ ಸೇರಿದಂತೆ ದೇಶದ ಹಲವು ಪ್ರಮುಖ ನಗರಗಳಲ್ಲಿ ಬ್ಯಾಂಕು ಮತ್ತು ಅಂಚೆ ಕಚೇರಿಗಳಿಗೆ ನವೆಂಬರ್ 14ರಂದು ರಜೆ ಘೋಷಿಸಲಾಗಿದೆ. ಆದರೆ ಕರ್ನಾಟಕದಲ್ಲಿ ನವೆಂಬರ್ 14ರಂದು ರಜೆ ಇರುವುದಿಲ್ಲ. ಎಂದಿನಂತೆಯೇ ಬ್ಯಾಂಕು ಮತ್ತು ಅಂಚೆ ಕಚೇರಿಗಳು ಕಾರ್ಯನಿರ್ವಹಿಸಲಿವೆ.
11. ಸಾರ್ವಜನಿಕರಲ್ಲಿ ಮನವಿ
ಈಗಾಗಲೇ ಸಾರ್ವಜನಿಕ ವಲದಲ್ಲಿ ಪರ ವಿರೋಧದ ವಾದಗಳು ವ್ಯಕ್ತವಾಗಿವೆ. ಪೂರ್ವತಯಾರಿ ಮಾಡಿಕೊಳ್ಳದೆ 500 ಮತ್ತು 1000 ಮುಖಬೆಲೆಯ ನೋಟು ನಿಷೇಧ ಮಾಡಿರುವುದು ಆತುರದ ನಿರ್ಧಾರವಾಗಿದೆ. ಇದರಿಂದ ಜನಸಾಮಾನ್ಯರಿಗೆ ತುಂಬಾ ತೋದರೆ ಉಂಟಾಗಿದೆ ಎಂಬ ಆಕ್ರೋಶದ ನುಡಿಗಳು ಕೇಳಿ ಬರುತ್ತಿವೆ. ಕಪ್ಪುಹಣ, ಖೋಟಾ ನೋಟು, ಭಯೋತ್ಪಾದನೆ ತಡೆ ಮುಂತಾದ ದೇಶದ ಹಿತದೃಷ್ಟಿಯಿಂದಾಗಿ ನಾವು ನಮಗೆ ಉಂಟಾಗಬಹುದಾದ ತಾತ್ಕಾಲಿಕ ಸಮಸ್ಯೆಗಳನ್ನು ಎದುರಿಸಿ ದೇಶಕ್ಕಾಗಿ ಅಲ್ಪ ತ್ಯಾಗಕ್ಕೆ ಮುಂದಾಗಬೇಕು. ಡಿಸೆಂಬರ್ 30ರವರೆಗೆ ಕಾಲಾವಕಾಶ ಇರುವುದರಿಂದ ಯಾರೂ ಸಹ ತರಾತುರಿ ಮಾಡಬೇಕಾದ ಅಗತ್ಯ ಇರುವುದಿಲ್ಲ. ನಮ್ಮೆಲ್ಲರ ತಾಳ್ಮೆ, ಸಹನೆ, ತ್ಯಾಗವೇ ದೇಶಕ್ಕೆ ಹಿತರಕ್ಷೆ.


Click it and Unblock the Notifications