ಆರ್‌ಬಿಐನಿಂದ ಹೊಸ ನೋಟುಗಳ ಮುದ್ರಣ ಹಾಗೂ ಪೂರೈಕೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವ ಕಾರಣ ಬ್ಯಾಂಕು ಮತ್ತು ಎಟಿಎಂಗಳಿಂದ ಹಣ ವಿತ್ ಡ್ರಾ ಮೇಲೆ ಹೇರಲಾಗಿರುವ ಮಿತಿ ಡಿಸೆಂಬರ್ 30ರ ನಂತರವೂ ಮುಂದುವರಿಯುವ ಸಾಧ್ಯತೆ ಇದೆ.
ಆರ್‌ಬಿಐನಿಂದ ಹೊಸ ನೋಟುಗಳ ಮುದ್ರಣ ಹಾಗೂ ಪೂರೈಕೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವ ಕಾರಣ ಬ್ಯಾಂಕು ಮತ್ತು ಎಟಿಎಂಗಳಿಂದ ಹಣ ವಿತ್ ಡ್ರಾ ಮೇಲೆ ಹೇರಲಾಗಿರುವ ಮಿತಿ ಡಿಸೆಂಬರ್ 30ರ ನಂತರವೂ ಮುಂದುವರಿಯುವ ಸಾಧ್ಯತೆ ಇದೆ.
ನೋಟು ರದ್ದತಿಯಿಂದ ದೇಶದಲ್ಲಿ ಉಂಟಾಗಿದ್ದ ಆರ್ಥಿಕ ಬಿಕ್ಕಟ್ಟು ಸಮತೋಲನಕ್ಕೆ ತರಲು ಪ್ರಧಾನಿ ಮೋದಿ ಕೇಳಿದ್ದ 50 ದಿನಗಳ ಅವಧಿ ಸಮೀಪಿಸುತ್ತಿದ್ದರೂ, ಅಗತ್ಯತೆಗೆ ಅನುಗುಣವಾಗಿ ಹೊಸ ನೋಟುಗಳನ್ನು ಮುದ್ರಿಸಲು ಆರ್‌ಬಿಐನಿಂದ ಸಾಧ್ಯವಾಗಿಲ್ಲ.

ಹಳೆ 500, 1000 ನೋಟುಗಳ ನಿಷೇಧದ ನಂತರ ಜಾರಿಯಾಗಿರುವ ಒಬ್ಬ ಗ್ರಾಹಕನಿಗೆ ವಾರಕ್ಕೆ ರೂ. 24000 ಹಣ ನೀಡುವ ಮಿತಿ ಪಾಲಿಸಲು ನಗದು ಕೊರತೆ ಕಾರಣದಿಂದಾಗಿ ಹಲವು ಬ್ಯಾಂಕುಗಳಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿ ಲಭ್ಯವಿರುವ ಹಣವನ್ನು ಅವಲಂಬಿಸಿ ಹಣ ಪಾವತಿಸಲಾಗುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಗ್ರಾಹಕರಿಂದ ಬರುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದ ಸಂದರ್ಭದಲ್ಲಿ ದೊಡ್ಡ ಮೊತ್ತದ ನಗದು ಬಯಸುವ ಸಣ್ಣ ಮತ್ತು ಮಧ್ಯಮ ಉದ್ದಿಮೆ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಬೇಡಿಕೆಯನ್ನು ಪೂರೈಸಲು ಸಾಧ್ಯವೇ ಇಲ್ಲ. ಹಣದ ಹರಿವು ಹೆಚ್ಚಾಗದ ಹೊರತು ಈ ಬಿಕ್ಕಟ್ಟು ಶಮನವಾಗುವುದು ಕಷ್ಟ.
ಬ್ಯಾಂಕುಗಳಿಗೆ ಹೆಚ್ಚು ಹಣ ಪೂರೈಕೆ ಮಾಡದ ಹೊರತು, ನಗದು ಪಡೆಯುವುದರ ಮೇಲೆ ಹೇರಲಾಗಿರುವ ಮಿತಿಯನ್ನು ಸಂಪೂರ್ಣವಾಗಿ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.
ಪ್ರಸ್ತುತ ಜಾರಿಯಲ್ಲಿರುವ ಮಿತಿಗಳನ್ನು ಖಚಿತವಾಗಿ ಯಾವಾಗ ವಾಪಸ್ಸು ಪಡೆಯಲಾಗುವುದು ಎಂಬುದನ್ನು ಸರ್ಕಾರ ಅಥವಾ ಆರ್‌ಬಿಐ ಹೇಳಿಲ್ಲ. ಆದರೆ, ಇದನ್ನು ಡಿಸೆಂಬರ್ 30ರ ನಂತರ ಪುನರ್ ಪರಿಶೀಲನೆ ಮಾಡಲಾಗುವುದು ಎಂದು ಹಣಕಾಸು ಕಾರ್ಯದರ್ಶಿ ಅಶೋಕ್ ಲಾವಾಸ ಹೇಳಿದ್ದಾರೆ.



Click it and Unblock the Notifications