ಆನ್ಲೈನ್ ವೆಬ್ಸೈಟ್ ಗಳ ಮೂಲಕ ಸುಮಾರು 7 ಲಕ್ಷ ಜನರಿಗೆ ಬರೊಬ್ಬರಿ ರೂ. 3,700 ಕೋಟಿ ವಂಚನೆ ಮಾಡಿದ್ದ ಕಂಪನಿಯ ಬೃಹತ್ ಜಾಲವನ್ನು ಉತ್ತರ ಪ್ರದೇಶ ವಿಶೇಷ ಪೊಲೀಸ್ ಕಾರ್ಯಪಡೆ ಭೇದಿಸಿದೆ.
ಆನ್ಲೈನ್ ವೆಬ್ಸೈಟ್ ಗಳ ಮೂಲಕ ಸುಮಾರು 7 ಲಕ್ಷ ಜನರಿಗೆ ಬರೊಬ್ಬರಿ ರೂ. 3,700 ಕೋಟಿ ವಂಚನೆ ಮಾಡಿದ್ದ ಕಂಪನಿಯ ಬೃಹತ್ ಜಾಲವನ್ನು ಉತ್ತರ ಪ್ರದೇಶ ವಿಶೇಷ ಪೊಲೀಸ್ ಕಾರ್ಯಪಡೆ ಭೇದಿಸಿದೆ.
ಉತ್ತರ ಪ್ರದೇಶದ ನೊಯ್ಡಾದ ಸೆಕ್ಟರ್-63ರಲ್ಲಿ ಎಬ್ಲೇಜ್ ಇನ್ಫೋ ಸೊಲ್ಯೂಷನ್ ಲಿಮಿಟೆಡ್(Ablaze Info Solutions Limited) ಸಂಸ್ಥೆ ಸ್ಥಾಪಿಸಿ, ಆ ಮೂಲಕ ಆನ್ ಲೈನ್ ನಲ್ಲಿ 7 ಲಕ್ಷ ಜನರಿಗೆ ರೂ. 3,700 ಕೋಟಿ ವಂಚನೆ ಮಾಡಿದ್ದ ಮೂವರು ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸ್ ವಿಶೇಷ ಕಾರ್ಯಪಡೆ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ದೇಶದಲ್ಲೇ ಪ್ರಥಮ ಬಾರಿ ಇಂತಹ ಹಗರಣ ನಡೆದಿದೆ ಎನ್ನಲಾಗಿದ್ದು, ಹಾಲಿವುಡ್ ಚಿತ್ರದಂತೆ ಕಂಡುಬರುತ್ತದೆ. ವಂಚಕರು ಗ್ರಾಹಕರಿಗೆ ಮೋಸದ ಜಾಲಕ್ಕೆ ಬೀಳಿಸಿರುವ ರೋಚಕ ಅಂಶಗಳನ್ನು ಇಲ್ಲಿ ನೀಡಲಾಗಿದೆ.
500 ಕೋಟಿ ಹಣ ವಶ
ಪ್ರಸ್ತುತ ಈ ಕಂಪನಿಯ ಬ್ಯಾಂಕ್ ಖಾತೆಯಲ್ಲಿ ರೂ. 500 ಕೋಟಿ ಹಣವಿದ್ದು, ಈ ಬ್ಯಾಂಕ್ ಖಾತೆಯನ್ನು ವಶಪಡಿಸಿಕೊಂಡಿದ್ದೇವೆ ಎಂದು ವಿಶೇಷ ಕಾರ್ಯ ಪಡೆಯ ಎಎಸ್‍ಪಿ ಅಮಿತ್ ಪಾಠಕ್ ತಿಳಿಸಿದ್ದಾರೆ. ಈ ಕಂಪನಿ ಡಿಜಿಟಲ್ ಮಾರ್ಕೆಟಿಂಗ್ ಸೊಲ್ಯೂಷನ್ ನೀಡುವುದಾಗಿ ಜನರನ್ನು ನಂಬಿಸಿ 7 ಲಕ್ಷ ಮಂದಿಗೆ ಮೋಸ ಮಾಡಿದೆ.
ಪೋಂಜಿ ಸ್ಕೀಮ್
ಎಬ್ಲೇಜ್ ಇನ್ಫೋ ಸೊಲ್ಯೂಷನ್ ಲಿಮಿಟೆಡ್ ಕಂಪನಿ ಪೋಂಜಿ ಸ್ಕೀಮ್ (ಬಡ್ಡಿಯ ಆಸೆ ತೋರಿಸಿ ಅಪಾರ ಹಣ ಸಂಗ್ರಹಿಸುವ ಜಾಲ) ಅಡಿಯಲ್ಲಿ ಆನ್ಲೈನ್ ವ್ಯವಹಾರಗಳನ್ನು ಮಾಡಿತ್ತು. ಅಲ್ಲದೇ ಪೋಂಜಿ ಸ್ಕೀಮ್ ಮೂಲಕ ಆನ್ಲೈನ್ ವ್ಯವಹಾರ ಮಾಡಿ ಮೋಸ ಮಾಡುತ್ತಿರುವ ಜಾಲ ಪತ್ತೆಯಾಗಿರುವುದು ಇದೇ ಮೊದಲು ಎನ್ನಲಾಗಿದೆ.
ಗ್ರಾಹಕರನ್ನು ಬಲೆಗೆ ಬೀಳಿಸಿದ್ದು ಹೇಗೆ?
ಈ ಬೃಹತ್ ವಂಚನಾ ಜಾಲದ ವಂಚಕರು ಕಂಪನಿಗಳಿಗೆ ಸಾಮಾಜಿಕ ತಾಣಗಳಲ್ಲಿ ಹೆಚ್ಚಿನ ಲೈಕ್ ಗಳಿಸುವುದು ಹೇಗೆ? ಎಂಬುದರ ಬಗ್ಗೆ ಆಸೆ ಹುಟ್ಟಿಸಿ ಹಣ ಲಪಟಾಯಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಮಾಲೀಕ ಅಭಿನವ್ ಮಿತ್ತಲ್ ಮತ್ತು ಆತನ ಗೆಳೆಯರಾದ ಶ್ರೀಧರ್ ಮತ್ತು ಮಹೇಶ್ ಎಂಬವರನ್ನು ಬಂಧಿಸಲಾಗಿದೆ.
ಪ್ರತೀ ಕ್ಲಿಕ್ ಗೆ ರೂ. 5
2015 ಆಗಸ್ಟ್ ನಲ್ಲಿ ಪೋರ್ಟಲ್ ಆರಂಭಿಸಿದ್ದ ವಂಚಕರು ಈ ಸಂಸ್ಥೆ ಮೂಲಕ ಟ್ರೇಡ್ ಡಾಟ್ ಬಿಜ್ ಪೋರ್ಟಲ್ ಸ್ಥಾಪಿಸಿಕೊಂಡಿದ್ದರು. ಅದರ ಮೂಲಕ ಪ್ರತೀ ಕ್ಲಿಕ್ ಗೆ ರೂ. 5 ನೀಡುವುದಾಗಿ ಹೇಳಿ ಗ್ರಾಹಕರನ್ನು ಬಲೆಗೆ ಬೀಳಿಸುತ್ತಿದ್ದರು.
ಸದಸ್ಯತ್ವ ಮೊತ್ತ ರೂ. 5,750 ನಿಂದ 57,500
ಪ್ರತಿ ಕ್ಲಿಕ್ ಮೇಲೆ 5 ರೂಪಾಯಿ ಗಳಿಸಿ ಯೋಜನೆಗೆ ಸದಸ್ಯರಾಗಲು ಕನಿಷ್ಠ ರೂ. 5,750 ನಿಂದ 57,500 ರೂಪಾಯಿ ನೀಡಬೇಕೆಂದು ವಂಚಕರು ಗ್ರಾಹಕರನ್ನು ಸೆಳೆಯುತ್ತಿದ್ದರು.
ವಿಶೇಷ ಕಾರ್ಯಪಡೆಯ ದಾಳಿ
ಈ ಬೃಹತ್ ವಂಚಕ ಜಾಲದ ಕುರಿತು ಸುಳಿವು ಪಡೆದಿದ್ದ ವಿಶೇಷ ಕಾರ್ಯಪಡೆಯ ಪೊಲೀಸರು ಸಂಸ್ಥೆಯ ಕಚೇರಿ ಮೇಲೆ ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ. ಇದರಲ್ಲಿ ಸುಮಾರು ರೂ. 3,700 ಕೋಟಿ ವಂಚನೆ ಕುರಿತು ದಾಖಲೆ ಸಿಕ್ಕಿದ್ದು, ಈ ಪೈಕಿ ರೂ. 500 ಕೋಟಿ ಮೊತ್ತದ ವಿವರ ದೊರಕಿದೆ. ಅಲ್ಲದೇ ಈ ವಂಚಕ ಸಂಸ್ಥೆಗೆ ಸೇರಿದೆ ಎಲ್ಲ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಮಾಡಲಾಗಿದೆ.
ಪೋಲಿಸರಿಂದ ತಪ್ಪಿಸಿಕೊಳ್ಳಲು ಆಗಾಗ್ಗೆ ವೆಬ್ ತಾಣ ಬದಲಾವಣೆ
ಈ ವಂಚಕರ ಜಾಲ ಸೈಬರ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಆನ್ಲೈನ್ ಟ್ರೇಡಿಂಗ್ ವಿಳಾಸವನ್ನು ಪದೆಪದೆ ಬದಲಿಸುತ್ತಿದ್ದರು. ಸೋಶಿಯಲ್ ಟ್ರೇಡ್ ಡಾಟ್ ಬಿಜ್ ಎಂಬುದಾಗಿ ಆರಂಭವಾದ ಈ ಪೋರ್ಟಲ್ ಬಳಿಕ ಫ್ರೀಹಬ್ ಡಾಟ್ ಕಾಮ್, ಇಂಟ್ ಮಾರ್ಟ್ ಡಾಟ್ ಕಾಮ್, ಫೆಂಝಪ್ ಡಾಟ್ ಕಾಮ್ ಮತ್ತು 3W ಡಾಟ್ ಕಾಮ್ ಹೀಗೆ ಹಲವು ಹೆಸರುಗಳಿಗೆ ಬದಲಾಗುತ್ತಿತ್ತು.
ಗ್ರಾಹಕರ ಪೇಚಾಟ
ಈ ವಂಚಕರು ಪದೆಪದೆ ವೆಬ್ ತಾಣಗಳನ್ನು ಬದಲಿಸುತ್ತಿದ್ದರಿಂದ ಇವರ ಬಲೆಗೆ ಸಿಲುಕಿದ ಗ್ರಾಹಕರು ಹಣ ವಸೂಲಿ ಮಾಡಲಾಗದೇ ಪೇಚಾಟಕ್ಕೆ ಸಿಲುಕುತ್ತಿದ್ದರು. ತಮ್ಮ ಸಾವಿರಾರು ಹಣವನ್ನು ಕಳೆದುಕೊಂಡು ಮೋಸ ಹೋಗುತ್ತಿದ್ದರು. ಆದರೆ ವಂಚಕರಿಗೆ ಬಲೆ ಬಿಸಿದ ಪೊಲೀಸರು ಯಶಸ್ವಿಯಾಗಿದ್ದು, ಇನ್ನುಳಿದ ವಂಚಕರ ಬಂಧನಕ್ಕಾಗಿ ಕಾರ್ಯ ಮುಂದುವರೆಸಿದ್ದು, ಉಳಿದ ಭಾರಿ ಪ್ರಮಾಣದ ಹಣದ ಕುರಿತ ದಾಖಲೆಗಾಗಿ ಶೋಧ ನಡೆಸಿದ್ದಾರೆ.


Click it and Unblock the Notifications