ಏಪ್ರಿಲ್ 1, 2017ರ ನಂತರ ನಗದು ರೂಪದಲ್ಲಿ ರೂ. 3 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಪಡೆದವರು ಭಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ.
ಏಪ್ರಿಲ್ 1, 2017ರ ನಂತರ ನಗದು ರೂಪದಲ್ಲಿ ರೂ. 3 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಪಡೆದವರು ಭಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ.
ಕೇಂದ್ರ ಸರ್ಕಾರ ಕಪ್ಪುಹಣ, ಖೋಟಾನೋಟು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದು, ರೂ. 3 ಲಕ್ಷ ಹಾಗೂ ಅದಕ್ಕಿಂತ ಹೆಚ್ಚು ನಗದು ಹಣ ಸ್ವೀಕರಿಸಿದವರು ಅಷ್ಟೇ ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ತಿಳಿಸಿದ್ದಾರೆ.
100% ದಂಡ
2017-18ನೇ ಸಾಲಿನ ಬಜೆಟ್‌ನಲ್ಲಿ ರೂ. 3 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ನಗದು ವಹಿವಾಟನ್ನು ನಿರ್ಬಂಧಿಸುವ ಪ್ರಸ್ತಾವವನ್ನು ಮಾಡಲಾಗಿದೆ. ಉದಾಹರಣೆಗೆ ವ್ಯಕ್ತಿಯೊಬ್ಬ ರೂ. 4 ಲಕ್ಷ ಮೊತ್ತದ ನಗದು ವ್ಯವಹಾರ ನಡೆಸಿದರೆ, ರೂ. 4 ಲಕ್ಷದಷ್ಟೇ ದಂಡವನ್ನು ವಿಧಿಸಲಾಗುವುದು. ಅದೇ ರೀತಿ ರೂ. 50 ಲಕ್ಷ ನಗದು ವ್ಯವಹಾರ ಮಾಡಿದರೆ ರೂ. 50 ಲಕ್ಷ ದಂಡ ಭರಿಸಬೇಕಾಗುತ್ತದೆ ಎಂದು ಹಸ್ಮುಖ್ ಅಧಿಯಾ ಹೇಳಿದ್ದಾರೆ.
ದೊಡ್ಡ ಮೊತ್ತದ ನಗದು ವ್ಯವಹಾರ ಇನ್ನಿಲ್ಲ
ಜನರು ಹೆಚ್ಚು ಮೊತ್ತದ ನಗದು ವ್ಯವಹಾರ ನಡೆಸುವುದನ್ನು ನಿಯಂತ್ರಿಸುವುದಕ್ಕಾಗಿ ಈ ತೀರ್ಮಾನಕ್ಕೆ ಬರಲಾಗಿದೆ. ಮುಂದಿನ ದಿನಗಳಲ್ಲಿ ಕಪ್ಪು ಹಣ ಸೃಷ್ಟಿಯಾಗದಂತೆ ತಡೆಯಲು ಸರ್ಕಾರ ಬಯಸಿದ್ದು, ದೊಡ್ಡ ಮೊತ್ತದ ಎಲ್ಲ ನಗದು ವಹಿವಾಟುಗಳ ಮೇಲೆ ಸರ್ಕಾರ ನಿಗಾ ಇರಿಸಲಿದೆ. ಜತೆಗೆ ನಗದು ಹಣದ ಮೂಲಕ ಮಾಡಲಾಗುವ ದುಂದು ವೆಚ್ಚಗಳನ್ನು ನಿಯಂತ್ರಿಸಲಿದೆ.
ದುಂದುವೆಚ್ಚ ಮಾಡುವಂತಿಲ್ಲ
ಲೆಕ್ಕಕ್ಕೆ ಸಿಗದಷ್ಟು ಭಾರಿ ಪ್ರಮಾಣದಲ್ಲಿ ಅಘೋಷಿತ ಸಂಪತ್ತು ಹೊಂದಿರುವ ಜನರು ಪ್ರವಾಸ, ಕಾರು, ಐಷಾರಾಮಿ ವಸ್ತುಗಳು ಮತ್ತು ಆಭರಣಗಳಂತಹ ದುಬಾರಿ ವಸ್ತುಗಳನ್ನು ಖರೀದಿಸಿ ಹಣ ಖರ್ಚು ಮಾಡುತ್ತಾರೆ. ಹೀಗಾಗಿ ಸರ್ಕಾರ ರೂಪಿಸಿರುವ ಹೊಸ ನಿಯಮಗಳು ಇದಕ್ಕೆ ಕಡಿವಾಣ ಹಾಕಲಿದೆ.
ನಗದು ಬಳಕೆಗೆ ಕಡಿವಾಣ
ದೇಶದಲ್ಲಿ ನಗದು ಹಣದ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರೂ. 50 ಸಾವಿರಕ್ಕಿಂತಲೂ ಹೆಚ್ಚಿನ ಮೊತ್ತದ ನಗದು ವಹಿವಾಟಿಗೆ ತೆರಿಗೆ ವಿಧಿಸುವಂತೆ ಹಾಗೂ ನಗದು ಮೂಲಕ ನಡೆಸುವ ವ್ಯವಹಾರಕ್ಕೆ ಮಿತಿ ನಿಗದಿಪಡಿಸುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಮುಖ್ಯಮಂತ್ರಿಗಳ ಸಮಿತಿಯು ಬಜೆಟ್‌ಗೆ ಮೊದಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಸೆಕ್ಷನ್ 269ST ನಿಯಮ ಏನು?
ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2017-18ನೇ ಸಾಲಿನ ಬಜೆಟ್‌ನಲ್ಲಿ ಆದಾಯ ತೆರಿಗೆ ಕಾಯ್ದೆಗೆ ಸೆಕ್ಷನ್ 269ST ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಇದರ ಕಾಯಿದೆ ಪ್ರಕಾರ ದಿನವೊಂದರಲ್ಲಿ ಯಾವುದೇ ವ್ಯಕ್ತಿ ಇನ್ನೊಬ್ಬರಿಂದ ಒಂದು ಬಾರಿ ರೂ. 3 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ನಗದು ಹಣ ಪಡೆಯುವಂತಿಲ್ಲ. ಈ ನಿರ್ಬಂಧ ಸರ್ಕಾರ, ಬ್ಯಾಂಕ್‌ಗಳು, ಅಂಚೆ ಕಚೇರಿ ಅಥವಾ ಸಹಕಾರ ಬ್ಯಾಂಕುಗಳಿಗೆ ಅನ್ವಯವಾಗುವುದಿಲ್ಲ.
ಪ್ಯಾನ್ ಕಾರ್ಡ್ ಕಡ್ಡಾಯ
ಇನ್ನು ಮುಂದೆಯೂ ರೂ. 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ನಗದು ವ್ಯವಹಾರಕ್ಕೆ ಪ್ಯಾನ್ ಕಾರ್ಡ್ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸುವ ನಿಯಮ ಜಾರಿಯಲ್ಲಿರಲಿದೆ ಎಂದು ಹಸ್ಮುಖ್ ಅಧಿಯಾ ಹೇಳಿದ್ದಾರೆ.


Click it and Unblock the Notifications