ಕೆಟ್ಟಿದ ಮೇಲೆ ಬುದ್ದಿ ಬಂತು ಅನ್ನೋ ಹಾಗೆ ಪಂಚರಾಜ್ಯಗಳ ಚುನಾಣೆಯ ಸೋಲಿನ ಬಳಿಕ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದ್ದು, ರೈತರ ಸಾಲ ಮನ್ನಾ ಮಾಡಲು ಮುಂದಾಗಿದೆ.
ಕೆಟ್ಟಿದ ಮೇಲೆ ಬುದ್ದಿ ಬಂತು ಅನ್ನೋ ಹಾಗೆ ಪಂಚರಾಜ್ಯಗಳ ಚುನಾಣೆ ಸೋಲಿನ ಬಳಿಕ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದ್ದು, ರೈತರ ಸಾಲ ಮನ್ನಾ ಮಾಡಲು ಮುಂದಾಗಿದೆ.
ಪಂಚರಾಜ್ಯಗಳಲ್ಲಿನ ಸೋಲಿಗೆ ರೈತರ ಸಮಸ್ಯೆಗಳು ಪ್ರಮುಖ ಕಾರಣ ಎಂಬುದನ್ನು ಸರ್ಕಾರ ಮನಗಂಡಿದ್ದು, 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬರಲು ರೈತರ ಸಂಪೂರ್ಣ ಸಾಲಮನ್ನಾ ಮಾಡಲು ಚಿಂತಿನೆ ನಡೆಸಿದೆ.
ರೂ. 4 ಲಕ್ಷ ಕೋಟಿ ಸಾಲಮನ್ನಾ!
ರೈತರ ಸಾಲಮನ್ನಾ ವಿಚಾರವನ್ನು ಕಡೆಗಣಿಸಿದರೆ ಉಂಟಾಗುವ ಸಮಸ್ಯೆಯನ್ನು ಅರಿತಂತಿರುವ ಕೇಂದ್ರ ಸರ್ಕಾರ ಲೋಕಸಭಾ ಚುನಾವಣೆಗೂ ಮುನ್ನ ಸಾಲಮನ್ನಾ ಘೋಷಣೆ ಮಾಡುವ ಸಾಧ್ಯತೆಯಿದೆ.
ಒಂದೊಮ್ಮೆ ಸರ್ಕಾರದಿಂದ ಈ ನಿರ್ಧಾರ ಹೊರ ಬಿದ್ದರೆ 26 ಕೋಟಿ ರೈತರ ಸುಮಾರು ರೂ. 4 ಲಕ್ಷ ಕೋಟಿ ಸಾಲಮನ್ನಾ ಆಗಲಿದೆ.
ತಂತ್ರಗಾರಿಕೆ
ಹಿಂದೆ 2008ರಲ್ಲಿ ಯುಪಿಎ ಸರ್ಕಾರ ರೈತರ ರೂ. 72 ಸಾವಿರ ಕೋಟಿ ಸಾಲಮನ್ನಾ ಮಾಡುವ ತಂತ್ರಗಾರಿಕೆ ಮೂಲಕ ಮತ್ತೊಮ್ಮೆ ಅಧಿಕಾರ ಹಿಡಿದಿತ್ತು. ಈಗ ಅದೇ ತಂತ್ರವನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಲಿದ್ದು, ಬಿಜೆಪಿ ಸೋತ ಮೂರು ರಾಜ್ಯಗಳಲ್ಲಿ ಕೂಡ ರೈತರ ಹೋರಾಟಗಳು ಹೆಚ್ಚು ನಡೆದಿವೆ.
ಋಣಮುಕ್ತ ರೈತರು
ಒಂದು ವೇಳೆ ಕೇಂದ್ರ ಸರ್ಕಾರ ರೂ. 4 ಲಕ್ಷ ಕೋಟಿ ಸಾಲಮನ್ನಾ ಮಾಡಿದರೆ, ದೇಶದ ಸುಮಾರು 26 ಕೋಟಿ ರೈತರು ಋಣಮುಕ್ತರಾಗಲಿದ್ದಾರೆ. ಪಂಚರಾಜ್ಯಗಳ ಚುನಾವಣೆ ಸೋಲಿನಿಂದ ಚೇತರಿಸಿಕೊಳ್ಳಲು ಹಾಗೂ ರೈತರ ವಿಶ್ವಾಸ ಗಳಿಸಲು ಮೋದಿ ಸರ್ಕಾರ ಈ ಪ್ಲಾನ್‌ಗೆ ಮುಂದಾಗಿದೆ.
ಸಾಲಮನ್ನಾ ತಜ್ಞರು ಹೇಳುವುದೇನು?
ಸರ್ಕಾರದ ಸಾಲಮನ್ನಾ ಮಾಡುವ ನಡೆಯನ್ನು ಹಲವು ತಜ್ಞರು ವಿರೋಧಿಸಿದ್ದು, ವಿತ್ತೀಯ ಕೊರತೆಯನ್ನು ನಿಗ್ರಹಿಸುವ ಸರ್ಕಾರದ ಪ್ರಯತ್ನಕ್ಕೆ ಭಾರಿ ಹಿನ್ನಡೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ. 3.3ಕ್ಕೆ ಸೀಮಿತಗೊಳಿಸಲು ಯತ್ನಿಸುತ್ತಿದೆ. ಇದರಿಂದಾಗಿ ವಿತ್ತೀಯ ಕೊರತೆ ಸುಮಾರು ರೂ. 6.24 ಲಕ್ಷ ಕೋಟಿ ಆಗಲಿದೆ. ಆದರೆ ಈಗಾಗಲೇ ವಾಸ್ತವದಲ್ಲಿ ವಿತ್ತೀಯ ಕೊರತೆ ನಿಯಂತ್ರಿಸಲು ಸರ್ಕಾರ ಕೈಗೊಳ್ಳುತ್ತಿರುವ ಕಠಿಣ ಕ್ರಮಗಳ ಹೊರತಾಗಿಯೂ ರೂ. 6.24 ಲಕ್ಷ ಕೋಟಿ ಮಿತಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಸರ್ಕಾರವು ರೈತರ ಸಾಲ ಮನ್ನಾಗೆ ಮುಂದಾದರೆ ಆರ್ಥಿಕತೆಗೆ ಮತ್ತಷ್ಟು ಕಷ್ಟ ಎದುರಿಸಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಆರ್ಬಿಐ ಮೀಸಲು ನಿಧಿ ಬಳಸಿ ಸಾಲಮನ್ನಾ ಮಾಡಲಾಗುವುದೆ?
ಸಧ್ಯದ ಸ್ಥಿತಿಯಲ್ಲಿ ರೈತರ ಸಾಲ ಮನ್ನಾ ಮಾಡುವುದು ತುಂಬಾ ಕಷ್ಟಕರವಾಗಿದ್ದು, ಅಷ್ಟೊಂದು ಹಣ ಹೊಂದಿಸುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ ಸರ್ಕಾರವು ಆರ್ಬಿಐ ನಲ್ಲಿರುವ ಮೀಸಲು ನಿಧಿಯನ್ನು ಇದಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆಯೆಂದು ಮಾಧ್ಯಮವೊಂದು ವರದಿ ಮಾಡಿದೆ.
ಆರ್ಬಿಐನೊಂದಿಗೆ ಸರ್ಕಾರದ ಜಟಾಪಟಿ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮೀಸಲು ನಿಧಿಯಲ್ಲಿ ರೂ. 3.6 ಲಕ್ಷ ಕೋಟಿ ಬೇಕೆಂದು ಸರ್ಕಾರ ಆರ್ಬಿಐಗೆ ತಿಳಿಸಿತ್ತು. ಆದರೆ ಇದಕ್ಕೆ ಆರ್ಬಿಐ ನಿರ್ಗಮಿತ ಗವರ್ನರ್‌ಉರ್ಜಿತ್ ಪಟೇಲ್ ಒಪ್ಪಿರಲಿಲ್ಲ. ಆಪತ್ಕಾಲೀನ ಸಂದರ್ಭಗಳಲ್ಲಿ ಬಳಕೆಯಾಗಬೇಕಾದ ಈ ಹಣವನ್ನು ನೀಡಲಾಗದು ಎಂದು ಹೇಳಿದ್ದು, ಇದು ಸರ್ಕಾರ-ಆರ್ಬಿಐ ಜಟಾಪಟಿಗೆ ಕಾರಣವಾಗಿತ್ತು. ಆದರೆ ಈಗ ಸರ್ಕಾರಕ್ಕೆ ಅತ್ಯಂತ ಆಪ್ತರಾದ ಶಕ್ತಿಕಾಂತ ದಾಸ್ ಗವರ್ನರ್ ಆಗಿ ನೇಮಕವಾಗಿದ್ದು, ಆರ್ಬಿಐ ಮೀಸಲು ನಿಧಿಯ ಒಟ್ಟು ಮೊತ್ತದ ಪೈಕಿ ರೂ. 4 ಲಕ್ಷ ಕೋಟಿ ರೈತರ ಸಾಲ ಮನ್ನಾ ಮಾಡಲು ಬಳಸಿಕೊಂಡರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಮಾರ್ಚ್ ನಲ್ಲಿ ತೀರ್ಮಾನ
ರೈತರ ಸಾಲಮನ್ನಾ ಮಾಡುವ ಬಗ್ಗೆ ಮಾರ್ಚ್ ತಿಂಗಳ ಆರಂಭದಲ್ಲೇ ತೀರ್ಮಾನ ಹೊರ ಬೀಳುವ ಸಾಧ್ಯತೆ ಇದೆ. ಸಾಲ ಮನ್ನಾವನ್ನು ಹೇಗೆ ಜಾರಿ ಮಾಡಬೇಕು ಎಂಬುವುದರ ಕುರಿತು ಆರ್ಥಿಕ ತಜ್ಞರಿಂದ ಕೇಂದ್ರ ಸರ್ಕಾರ ಮಾಹಿತಿ ಪಡೆಯಲಿದೆ.
ಕಾಂಗ್ರೆಸ್ ಅಜೆಂಡಾ
ಕಾಂಗ್ರೆಸ್ ಪಕ್ಷ ಈಗಾಗಲೇ 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುವ ಬಗ್ಗೆ ಆಶ್ವಾಸನೆ ನೀಡಿದೆ. ಇದೀಗ ಸಾಲಮನ್ನಾ ಹೆಸರಿನಲ್ಲಿ ಅಜೆಂಡಾ ರೂಪಿಸಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಗೆ ಬಿಜೆಪಿ ಶಾಕ್ ನೀಡಿದಂತಾಗುತ್ತದೆ.
ಎಚ್.ಡಿ ಕುಮಾರಸ್ವಾಮಿ ವ್ಯಂಗ
ಕೇಂದ್ರ ಸರ್ಕಾರ ಇದೀಗ ರೈತರ ಸಾಲಮನ್ನಾ ಮಾಡಲು ಮುಂದಾಗಿದ್ದು, ಕೆಟ್ಟಮೇಲೆ ಕೇಂದ್ರಕ್ಕೆ ಬುದ್ಧಿ ಬಂದಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಸೋಲು ಕಂಡ ನಂತರ ಕೇಂದ್ರಕ್ಕೆ ಬುದ್ಧಿ ಬಂದಿದೆ. ದೇಶದಾದ್ಯಂತ ರೈತರ ಪ್ರತಿಭಟನೆಗಳ ಬಿಸಿ ತಟ್ಟಿದ ಬಳಿಕ ಸಾಲ ಮನ್ನಾ ಮಾಡಲು ಮುಂದಾಗಿದೆ. ರಾಜ್ಯ ಸರ್ಕಾರ ರೈತರ ಸಾಲ ಮನ್ನಾವನ್ನು ಲೇವಡಿ ಮಾಡಿದ ಕೇಂದ್ರಕ್ಕೆ ಈಗ ರೈತರ ಮೌಲ್ಯ ಅರ್ಥವಾಗಿದೆ ಎಂದು ವ್ಯಂಗ್ಯವಾಡಿದರು.
ರೈತರ ಪ್ರತಿಭಟನೆ ಪರಿಣಾಮ
ಕಳೆದ ಕೆಲ ದಿನಗಳಲ್ಲಿ ಕೇಂದ್ರ ಸರ್ಕಾರದ ವಿರುದ್ದ ದೇಶದಾದ್ಯಂತ ರೈತರ ಪ್ರತಿಭಟನೆಗಳು ಭಾರೀ ಕಾವು ಪಡೆದಿದ್ದವು. ಕೇಂದ್ರದ ವಿರುದ್ಧದ ತಮಿಳುನಾಡು, ಮಧ್ಯಪ್ರದೇಶ ರೈತರ ಪ್ರತಿಭಟನೆ ಜಾಗತಿಕವಾಗಿ ಸುದ್ದಿ ಆಗಿತ್ತು. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲೂ ಕೂಡ ರೈತರು ಬೀದಿಗಿಳಿದು ಹೋರಾಟ ಮಾಡಿದ್ದರು.
ಬಿಜೆಪಿ ಆಡಳಿತವಿರುವ ದೊಡ್ಡ ರಾಜ್ಯಗಳಲ್ಲಿ ರೈತರು ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಿರುವುದು ಹೆಚ್ಚಾಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ ಎನ್ನಲಲಾಗುತ್ತಿದೆ. ಇದನ್ನು ಅರಿತಿರುವ ಬಿಜೆಪಿ ಸಾಲಮನ್ನಾ ಮಾಡುವ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.


Click it and Unblock the Notifications