ಬೆಂಗಳೂರು, ಫೆಬ್ರವರಿ 08: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚೊಚ್ಚಲ ಬಜೆಟ್ ಮಂಡಿಸಿದ ಆರೋಗ್ಯ ಭಾಗ್ಯ ಯೋಜನೆಗಳನ್ನು ಇನ್ನಷ್ಟು ವಿಸ್ತರಿಸಿದ್ದಾರೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ(ಫೆಬ್ರವರಿ 08)ದಂದು 2019-20ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ರಾಮನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಕುಮಾರಸ್ವಾಮಿ ಅವರು ಚೊಚ್ಚಲ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಈ ಬಾರಿ ಇನ್ನಷ್ಟು ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸುವುದಾಗಿ ಹೇಳಿದರು.
ಮುಖ್ಯವಾಗಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಆಯುಷ್ಮಾನ್ ಭಾರತ್ ಯೋಜನೆಗೆ ಪೂರಕವಾಗಿ ಆರೋಗ್ಯ ಕರ್ನಾಟಕ ಯೋಜನೆಯನ್ನು ರೂಪಿಸಲಾಗಿದ್ದು, ಇದಕ್ಕಾಗಿ 950 ಕೋಟಿ ರು ಅನುದಾನ ನೀಡಲಾಗುತ್ತಿದೆ. ಕೇಂದ್ರದಿಂದ ಇದಕ್ಕಾಗಿ ಕೇವಲ 409 ಕೋಟಿ ರು ಸಿಗಲಿದೆ ಎಂದು ಕುಮಾರಸ್ವಾಮಿ ಘೋಷಿಸಿದರು.
2018-19ನೇ ಸಾಲಿನ ಬಜೆಟ್‌ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 9,317 ಕೋಟಿ ರೂ. ಅನುದಾನ ನೀಡಲಾಗಿತ್ತು. ಮಿಕ್ಕಂತೆ ಈ ಬಾರಿ ಬಜೆಟ್ ನಲ್ಲಿ ಆರೋಗ್ಯ ಇಲಾಖೆ ಏನೆಲ್ಲ ಸಿಕ್ಕಿದೆ ಮುಂದೆ ಓದಿ...
ಕ್ಯಾನ್ಸರ್ ಆಸ್ಪತ್ರೆಗಳ ಸ್ಥಾಪನೆ
* ಬೆಳಗಾವಿ, ಕಲಬುರಗಿ, ಮೈಸೂರಿನಲ್ಲಿ ಹೃದ್ರೋಗ, ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ
* ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ 60 ಕೋಟಿ ರು ಗಳ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ಆರಂಭ
* ಕಿದ್ವಾಯಿ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯಲ್ಲಿ ಬೋನ್ ಮ್ಯಾರೋ ಘಟಕ ಸ್ಥಾಪನೆ
* ಕಿದ್ವಾಯಿ ಆಸ್ಪತ್ರೆ ಆವರಣದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ 100 ಕೋಟಿ ರು ವೆಚ್ಚದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ
* ಹುಬ್ಬಳ್ಳಿಯಲ್ಲಿ ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಗೆ ತೃತೀಯ ಹಂತದ ಕ್ಯಾನ್ಸರ್ ಕೇಂದ್ರಕ್ಕೆ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರದಿಂದ 4.5 ಕೋಟಿ ರು ಗಳ ಸಹಾಯಧನ.
* ಹಾಸನ, ಕೊಪ್ಪಳ, ಚಾಮರಾಜನಗರದಲ್ಲಿ 450 ಹಾಸಿಗೆಯ ಹೊಸ ಆಸ್ಪತ್ರೆ ನಿರ್ಮಾಣ
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು
* ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು 50 ಕೋಟಿ ರು ಅನುದಾನ.
* ರಾಮನಗರದಲ್ಲಿ 40 ಕೋಟಿ ವೆಚ್ಚದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
* ಮಂಡ್ಯ ವೈದ್ಯಕೀಯ ಕಾಲೇಜು ಮೇಲ್ದರ್ಜೆಗೇರಿಸಲು 13 ಕೋಟಿ ಅನುದಾನ
* ದೊಡ್ಡಬಳ್ಳಾಪುರ ತಾಲೂಕಿನ ಆಸ್ಪತ್ರೆಯನ್ನು 250 ಹಾಸಿಗೆಗಳ ಬೆಂಗಳೂರು ಗ್ರಾಮಾಂತರ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು 10 ಕೋಟಿ ರು ಅನುದಾನ
* ವಿಜಯಪುರ ಜಿಲ್ಲೆಯಲ್ಲಿ 40 ಕೋಟಿ ರು ವೆಚ್ಚದಲ್ಲಿ 100 ಹಾಸಿಗೆಗಳ ಸೌಲಭ್ಯವುಳ್ಳ ಸಂಜಯಗಾಂಧಿ ಟ್ರಾಮಾ ಹಾಗೂ ಅಸ್ಥಿ ಚಿಕಿತ್ಸಾ ಸಂಸ್ಥೆ ಆರಂಭ.
ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ
* ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಹಾಗೂ ಹಾಸ್ಟೆಲ್ ಕಟ್ಟಡಕ್ಕೆ 150 ಕೋಟಿ ರು ಅನುದಾನ.
* ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ 100 ಕೋಟಿ ರು ಅನುದಾನ.
* ಹೈದರಾಬಾದ್- ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ 150 ಕೋಟಿ ರುಗಳ ವೆಚ್ಚದಲ್ಲಿ ಕಲಬುರಗಿಯ ಶ್ರೀಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆಯ 300 ಹಾಸಿಗೆ ಸಾಮರ್ಥ್ಯದ ಪ್ರತ್ಯೇಕ ಆಸ್ಪತ್ರೆ ಸ್ಥಾಪನೆ.
* ಎಸ್. ಡಿ. ಎಸ್. ಟಿ.ಬಿ ಸಂಸ್ಥೆಯ ಆವರಣದಲ್ಲಿ 40 ಕೋಟಿ ರುಗಳ ನ್ಯಾಷನಲ್ ಆಫ್ ವೈರಾಲಜಿ ಹಾಗೂ ಕೆಮಿಕಲ್, ಬಯಲಾಜಿಕಲ್, ರೇಡಿಯೇಷನ್, ನ್ಯೂಕ್ಲಿಯರ್ ನ್ಯಾಚುರಲ್ ಡಿಸಾಸ್ಟರ್ ಕೇಂದ್ರ ನಿರ್ಮಾಣ.
ಮಂಗನ ಕಾಯಿಲೆ ಸಂಶೋಧನಾ ಘಟಕ
* ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ 5 ಕೋಟಿ ರುಗಳ ವೆಚ್ಚದಲ್ಲಿ ಮಂಗನ ಕಾಯಿಲೆಯ ಸಂಶೋಧನಾ ಮತ್ತು ಚಿಕಿತ್ಸಾ ಘಟಕ ಆರಂಭ.
* ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸೂಕ್ತ ಆರೈಕೆಗಾಗಿ 49 ತಾಲೂಕು ಆಸ್ಪತ್ರೆಗಳಲ್ಲಿ ಪೌಷ್ಟಿಕ ಪುನಶ್ಚೇತನ ಕೇಂದ್ರಗಳ ಸ್ಥಾಪನೆಗೆ 1 ಕೋಟಿ ರು ಅನುದಾನ.
* ಮಂಗಳೂರು, ತುಮಕೂರು, ಬಿಜಾಪುರ, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಚಿಕ್ಕಮಗಳೂರು, ಹಾವೇರಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಒಟ್ಟು 10 ಜಿಲ್ಲೆಗಳಲ್ಲಿ 10 ಕೋಟಿ ರು ವೆಚ್ಚದಲ್ಲಿ ಡಿಜಿಟಲ್ ಸ್ತನ ರೇಖನ ವ್ಯವಸ್ಥೆ(Mammogram) ಹಾಗೂ Papsmear scanning ವ್ಯವಸ್ಥೆ ಆರಂಭಿಸಲು ಕ್ರಮ.
* 11 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ 2 ಕೋಟಿ ರು ವೆಚ್ಚದಲ್ಲಿ ಡಿಎನ್ ಬಿ ಕೇಂದ್ರ ಆರಂಭ.
* ರಕ್ತ ಸಂಗ್ರಹ, ಶೇಖರಣೆ ಮತ್ತು ವಿತರಣೆಗಾಗಿ ನಾಲ್ಕು ವಿಭಾಗೀಯ ಮಾದರಿ ರಕ್ತನಿಧಿ ಕೇಂದ್ರಗಳ ಸ್ಥಾಪನೆಗೆ 10 ಕೋಟಿ ರು ಅನುದಾನ.


Click it and Unblock the Notifications