ಬೆಂಗಳೂರು, ಫೆಬ್ರವರಿ 8: ಹೊಸ ಬೆಳೆ ವಿಮೆ ಯೋಜನೆ, ರೈತ ಸಿರಿ ಯೋಜನೆ, ಬೆಳೆ ಸಂಸ್ಕರಣಾ ಘಟಕಗಳ ಸ್ಥಾಪನೆ, ರೈತರಿಗೆ ಆರ್ಥಿಕ ನೆರವು, ಇಸ್ರೇಲ್ ಮಾದರಿ ಕೃಷಿಗೆ ಉತ್ತೇಜನ- ಇವು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಶುಕ್ರವಾರ ಬಜೆಟ್ ಮಂಡನೆ ವೇಳೆ ರೈತರಿಗೆ ಘೋಷಿಸಿದ ಪ್ರಮುಖ ಯೋಜನೆಗಳು.
ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬೆಳೆಹಾನಿಯ ಸಂಕಷ್ಟಕ್ಕೆ ಒಳಗಾದ ರೈತರ ಖಾತೆಗೆ ಪ್ರತಿ ಹೆಕ್ಟೇರ್‌ಗೆ ತಲಾ ರೂ. 10,000 ಸಹಾಯ ನೀಡಲಾಗುವುದು. ಕರಾವಳಿಯಲ್ಲಿ ಭತ್ತರ ಇಳುವರಿಯನ್ನು ಹೆಚ್ಚಿಸಲು ಅಲ್ಲಿನ ಭತ್ತ ಬೆಳೆಗಾರರಿಗೆ ನೆರವು ನೀಡಲಾಗುವುದು.
ಕೋಲಾರದಲ್ಲಿ 20 ಕೋಟಿ ವೆಚ್ಚದಲ್ಲಿ ಟೊಮೆಟೊ ಸಂಸ್ಕರಣಾ ಘಟ, ಧಾರವಾಡದಲ್ಲಿ ಮಾವು ಸಂಸ್ಕರಣಾ ಘಟಕ. ರಾಮನಗರದಲ್ಲಿ ತೋಟಗಾರಿಕಾ ಬೆಳೆಗಳ ಸಂಸ್ಕರಣೆ ಮಾಡಲಾಗುತ್ತದೆ. ಗದಗದಲ್ಲಿ ಹೆಸರುಬೇಳೆ ಸಂಸ್ಕರಣಾ ಘಟಕ ತೆರೆಯಲಾಗುವುದು.

ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಳಿಗೆ ಉತ್ತೇಜನ ನೀಡಲು 150 ಕೋಟಿ ರೂ. ಸಹಾಯ. ಶೂನ್ಯ ಬಂಡವಾಳ ಕೃಷಿಗೆ ಪ್ರೋತ್ಸಾಹ ನೀಡಲಾಗುವುದು. ನೂತನ ಕೃಷಿ ಯೋಜನೆಗೆ 40 ಕೋಟಿ ರೂ. ಮೀಸಲಿಡಲಾಗುವುದು.
ಕೃಷಿ ಹೊಂಡ ನಿರ್ಮಾಣಕ್ಕೆ 150 ಕೋಟಿ ರೂ. ಅನುದಾನ ನೀಡಲಾಗುವುದು. ಸಿರಿ ಧಾನ್ಯ ಮಾರಾಟಕ್ಕೆ ಅನುಕೂಲವಾಗಲು 10 ಕೋಟಿ ಇರಿಸಲಾಗುವುದು. ನಂದಿನಿ ಪಾರ್ಲರ್, ಹಾಪ್ ಕಾಮ್ಸ್‌ಗಳಲ್ಲಿಯೂ ಸಿರಿಧಾನ್ಯ ಮಾರಾಟ ಮಾಡಲಾಗುವುದು.
ಕೃಷಿ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಅನುದಾನ ನೀಡಲಾಗುವುದು. ಈರುಳ್ಳಿ ಆಲೂಗಡ್ಡೆ ಬೆಳೆಗೆ ಪ್ರೋತ್ಸಾಹ ಒದಗಿಸಲಾಗುವುದು.
ಜೇನು ಕೃಷಿ ಉತ್ತೇಜನಕ್ಕೆ 5 ಕೋಟಿ ರೂ ನೀಡಲಾಗುವುದು. ರೇಷ್ಮೆ ಕೃಷಿಕರಿಗೆ ಗೌರವ ಧನವಾಗಿ 2 ಕೋಟಿ ರೂ. ಇರಿಸಲಾಗುವುದು. ಚಾಮರಾಜನಗರ ರೇಷ್ಮೆ ಕಾರ್ಖಾನೆಯ ಪುನರುಜ್ಜೀವನಕ್ಕೆ 5 ಕೋಟಿ ರೂ. ನೀಡಲಾಗುವುದು.
ಇಸ್ರೇಲ್ ಮಾದರಿ ಕಿರು ನೀರಾವರಿ ಯೋಜನೆಗೆ 145 ಕೋಟಿ ರೂಪಾಯಿ. ಮಿಡಿ ಸೌತೆ ಬೆಳೆಗೆ 6 ಕೋಟಿ ರೂ ಪ್ರೋತ್ಸಾಹ ಧನ, ನಾಟಿ ಕೊಳಿ ಸಾಕಾಣಿಕೆಗೆ 5 ಕೋಟಿ ರೂ. ಕುರಿ ಸಾಕಾಣಿಕೆ ಪ್ರೋತ್ಸಾಹವಾಗಿ 2 ಕೋಟಿ ರೂ. ಬೀಜ ನಿಗಮಕ್ಕೆ 5 ಕೋಟಿ. ಕೃಷಿ ಪ್ರಾತ್ಯಕ್ಷಿಕೆ ಕೇಂದ್ರಕ್ಕೆ 150 ಕೋಟಿ. ರೈತ ಕಣಜ ಯೋಜನೆಗೆ 510 ಕೋಟಿ ರೂ. ಅನುದಾನ.
ಗೃಹಲಕ್ಷ್ಮಿ ಬೆಳೆ ಸಾಲ ಯೋಜನೆಯಡಿ ರೈತ ಮಹಿಳೆಯರ ಅಭರಣದ ಮೇಲೆ ಶೇ 3ರ ಬಡ್ಡಿದರದಲ್ಲಿ ಸಾಲ ಸೌಲಭ್ಯ. ಕೇರಳ ಮಾದರಿಯಲ್ಲಿ ಸಾಲ ಪರಿಹಾರ ಯೋಜನೆ.
ಹಾಲಿನ ಪ್ರೋತ್ಸಾಹ ಧನ ಐದು ರೂ.ನಿಂದ ಆರು ರೂಪಾಯಿಗೆ ಏರಿಕೆ.
ರೈತರ ಪರವಾಗಿ ನಮ್ಮ ನಡೆ ಇರುತ್ತದೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಸರ್ಕಾರದ ಆದ್ಯತೆ ಎಂದು ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.
ರೈತರ ಬೆಳೆ ಸಾಲ ಮನ್ನಾವನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದ್ದೇವೆ. ಸಾಲ ಮನ್ನಾ ಯೋಜನೆಯಡಿ ಇದುವರೆಗೂ 12 ಲಕ್ಷ ಸಾಲ ಖಾತೆಗಳಿಗೆ 5,400 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸಾಲಮನ್ನಾಕ್ಕೆ 46 ಸಾವಿರ ಕೋಟಿ ಮೀಸಲಿಡಲಾಗಿದೆ.
156 ತಾಲ್ಲೂಕಿಗಳಲ್ಲಿ ಬರವಿದೆ. ಕಳೆದ 17 ವರ್ಷಗಳಲ್ಲಿ 14 ವರ್ಷ ಬರ ಉಂಟಾಗಿದೆ. ಮಡಿಕೇರಿಯಲ್ಲಿ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾದ ನಿರಾಶ್ರಿತರಿಗೆ 840 ಮನೆಗಳನ್ನು ನಿರ್ಮಿಸಲಾಗಿದೆ. ಪರಿಹಾರ ಕಾರ್ಯಕ್ಕಾಗಿ ಕೇಂದ್ರ ಸರ್ಕಾರಕ್ಕೆ 2,000 ಕೋಟಿ ರೂ ಅನುದಾನಕ್ಕೆ ಮನವಿ ಮಾಡಲಾಗಿತ್ತು. ಆದರೆ, 969 ಕೋಟಿ ರೂ ಮಾತ್ರ ಮಂಜೂರು ಮಾಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.


Click it and Unblock the Notifications