ಲೋಕಸಭಾ ಚುನಾವಣಾ ಮತಗಟ್ಟೆ ಸಮೀಕ್ಷೆಗಳು ದೇಶಿ ಷೇರುಪೇಟೆ ಮೇಲೆ ಭಾರೀ ಪ್ರಭಾವವನ್ನೇ ಬೀರಿದ್ದು, ಬಿಎಸ್ಇ, ಎನ್ಎಸ್ಇಯಲ್ಲಿ ಗೂಳಿ ಅಬ್ಬರ ಜೋರಾಗಿದೆ.
ಲೋಕಸಭಾ ಚುನಾವಣಾ ಮತಗಟ್ಟೆ ಸಮೀಕ್ಷೆಗಳು ದೇಶಿ ಷೇರುಪೇಟೆ ಮೇಲೆ ಭಾರೀ ಪ್ರಭಾವವನ್ನೇ ಬೀರಿದ್ದು, ಬಿಎಸ್ಇ, ಎನ್ಎಸ್ಇಯಲ್ಲಿ ಗೂಳಿ ಅಬ್ಬರ ಜೋರಾಗಿದೆ.

ಲೋಕಸಭಾ ಚುನಾವಣೆಯ ಎನ್‌ಡಿಎ ಪರ ಮತಗಟ್ಟೆ ಸಮೀಕ್ಷೆ ಫಲಿತಾಂಶ ಮುಂಬೈ ಷೇರು ಪೇಟೆಯಲ್ಲಿ ಮಂಗಳವಾರವೂ ಮುಂದುವರಿದಿದ್ದು ಹೂಡಿಕೆದಾರರು ಭಾರೀ ಲಾಭ ಗಳಿಕೆಯ ಉತ್ಸಾಹದಲ್ಲಿದ್ದಾರೆ.
ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಸೂಚ್ಯಂಕವು 200ಕ್ಕೂ ಅಧಿಕ ಅಂಕಗಳ ಜಿಗಿತ ಸಾಧಿಸಿ 39,565.82 ಅಂಶಗಳ ಹೊಸ ದಾಖಲೆಯ ಎತ್ತರದ ಮಟ್ಟವನ್ನು ತಲುಪಿದೆ.
ನಿನ್ನೆ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕ ಗರಿಷ್ಠ ದಾಖಲೆಯ 1,421.90 ಪಾಯಿಂಟ್ ಜಿಗಿತ ಕಂಡಿತ್ತು. ಜೊತೆಗೆ ನಿಫ್ಟಿ ಸೂಚ್ಯಂಕ 421 ಪಾಯಿಂಟ್ ಏರಿಕೆಯನ್ನು ದಾಖಲಿಸಿತ್ತು.
ಇಂದು ಬೆಳಗ್ಗೆ 11.10 ರ ಸುಮಾರಿಗೆ ಸೆನ್ಸೆಕ್ಸ್ ಸೂಚ್ಯಂಕವು 105 ಪಾಯಿಂಟ್ ಮುನ್ನಡೆ ಕಾಯ್ದುಕೊಂಡು 39,459 ಅಂಕಗಳಲ್ಲೂ, ರಾಷ್ಟ್ರೀಯ ಷೇರುಪೇಟೆಯ ನಿಫ್ಟಿ ಸೂಚ್ಯಂಕ 21.55 ಅಂಗಕಳ ಏರಿಕೆಯೊಂದಿಗೆ 11,849.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಎಚ್‌ಡಿಎಫ್ಸಿ, ಬಜಾಜ್ ಫೈನಾನ್ಸ್, ಕೋಲ್ ಇಂಡಿಯಾ, ಆರ್‌ಐಎಲ್, ಬಜಾಜ ಆಟೋ, ಎಚ್‌ಯುಎಲ್, ಇಂಡಸ್ ಲ್ಯಾಂಡ್ ಬ್ಯಾಂಕ್, ಸನ್ ಫಾರ್ಮಾ, ವೇದಾಂತ, ಎಕ್ಸಿಸ್ ಬ್ಯಾಂಕ್ ಮತ್ತು ಏಶ್ಯನ್ ಪೇಂಟ್ ಷೇರುಗಳು ಶೇ.2.21ರ ಏರಿಕೆಯನ್ನು ದಾಖಲಿಸಿದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಸಲ್ಪ ಮುನ್ನಡೆ ದಾಖಲಿಸಿ ರೂ. 69.71 ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ನಿನ್ನೆಯ ದಿನದ ವಹಿವಾಟಿನ ಅಂತ್ಯಕ್ಕೆ ಎಕ್ಸಿಟ್ ಪೋಲ್ ಫಲಿತಾಂಶದಿಂದಾಗಿ ಸೆನ್ಸೆಕ್ಸ್ ಸೂಚ್ಯಂಕ 1422 ಪಾಯಿಂಟ್ ಏರಿಕೆ ಕಂಡಿದ್ದರೆ, ಡಾಲರ್ ಎದುರು ರೂಪಾಯಿ ಮೌಲ್ಯ 79 ಪೈಸೆ ಏರಿಕೆ ದಾಖಲಿಸಿತ್ತು. ಇದರಿಂದ ಹೂಡಿಕೆದಾರರು ರೂ. 5.33 ಲಕ್ಷ ಕೋಟಿ ಲಾಭ ಗಳಿಸಿದ್ದರು.


Click it and Unblock the Notifications