ನಮ್ಮಲ್ಲಿ ಅನೇಕ ಬ್ಯಾಂಕ್ ಗ್ರಾಹಕರು ಈಗಾಗಲೇ ಇರುವ ಬ್ಯಾಂಕ್ ಖಾತೆ ಮುಚ್ಚಿ ಇನ್ನೊಂದು ಬ್ಯಾಂಕಿನಲ್ಲಿ ಖಾತೆ ಹೊಸ ತೆರೆಯಲು ಯೋಚಿಸುತ್ತಿರುತ್ತಾರೆ.
ನಮ್ಮಲ್ಲಿ ಅನೇಕ ಬ್ಯಾಂಕ್ ಗ್ರಾಹಕರು ಈಗಾಗಲೇ ಇರುವ ಬ್ಯಾಂಕ್ ಖಾತೆ ಮುಚ್ಚಿ ಇನ್ನೊಂದು ಬ್ಯಾಂಕಿನಲ್ಲಿ ಖಾತೆ ಹೊಸ ತೆರೆಯಲು ಯೋಚಿಸುತ್ತಿರುತ್ತಾರೆ. ಯಾವುದೇ ಬ್ಯಾಂಕ್ ಖಾತೆಯನ್ನು ಮುಚ್ಚುವ ನಿರ್ಧಾರ ಮಾಡುವ ಮುನ್ನ ಖಾತೆ ಬದಲಾವಣೆ ನಿಜವಾಗಿ ಲಾಭ ತರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ಇದರ ಬಗ್ಗೆ ಸರಿಯಾದ ಮಾಹಿತಿ ಕಲೆ ಹಾಕಿಕೊಂಡು ಪರಶೀಲನೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಬೇಕಾಗುತ್ತದೆ. ನಿಮಗೆ ಲಾಭ ಎಂದೆನಿಸಿದರೆ ಮಾತ್ರ ಖಾತೆ ಬದಲಾವಣೆ ಮಾಡುಕೊಳ್ಳುವುದು ಉತ್ತಮ.
ಬ್ಯಾಂಕ್ ಖಾತೆ ಬದಲಾವಣೆಯೇ ನಿಮ್ಮ ನಿರ್ಧಾರವಾಗಿದ್ದರೆ ಬ್ಯಾಂಕ್ ಖಾತೆಯನ್ನು ಮುಚ್ಚುವುದು ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ..
ಆಟೋಮೆಟೆಡ್ ಪೇಮೆಂಟ್ಗಳನ್ನು ನಿಲ್ಲಿಸಿ
ಬ್ಯಾಂಕ್ ಖಾತೆ ಬದಲಾವಣೆ ಮಾಡುವ ಮುನ್ನ ವಿವಿಧ ಸಂಗತಿಗಳಿಗೆ ಸಂಬಂಧಿಸಿ ಬ್ಯಾಂಕ್ ಗೆ ನಿಮ್ಮಿಂದ ಸ್ವಯಂಚಾಲಿತವಾಗಿ ಹಣ ಪಾವತಿಯಾಗುತ್ತಿದ್ದರೆ ಮೊದಲು ಅದನ್ನು ನಿಲ್ಲಿಸಲು ಹಳೆ ಬ್ಯಾಂಕ್ ಗೆ ಅರ್ಜಿ ಸಲ್ಲಿಸಿ. ನಿಮ್ಮಿಂದ ಅಥವಾ ನಿಮಗೆ ಸಲ್ಲಿಕೆಯಾಗಬೇಕಿರುವ ಯಾವುದೆ ರೀತಿಯ ಹಣವನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ. ವಿಶೇಷವಾಗಿ ಸ್ವಯಂ ನವೀಕರಣ, ಮತ್ತು ತ್ರೈಮಾಸಿಕ, ವಾರ್ಷಿಕ ಅಥವಾ ದ್ವೈ ವಾರ್ಷಿಕ ವಿಮಾ ಪಾವತಿಗಳಿದ್ದರೆ ಖಚಿತಪಡಿಸಿ ಅವುಗಳನ್ನು ನಿಲ್ಲಿಸಿ.
ಖಾತೆಯ ವಿವರ ಪಡೆದುಕೊಳ್ಳಿ
ಖಾತೆಯ ಬಗೆಗಿನ ಸಂಪೂರ್ಣ ವಿವರವನ್ನು ಪಡೆಯಲು ಯಾವ ಕಾರಣಕ್ಕೂ ಮರೆಯಬೇಡಿ. ನಿಮ್ಮ ಉಳಿತಾಯ ಖಾತೆಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಭದ್ರವಾಗಿ, ಸುರಕ್ಷಿತವಾಗಿ ಇಟ್ಟುಕೊಳ್ಳಿ. ಸಂದರ್ಭ ಒದಗಿ ಬಂದಾಗ ಈ ಮಾಹಿತಿಗಳೆಲ್ಲ ಬೇಕಾಗಬಹುದು. ಅಗತ್ಯವಿದ್ದರೆ ಒಂದು ಸಾಫ್ಟ್ ಕಾಪಿ ಇಲ್ಲವೇ ಪ್ರಿಂಟ್ ಔಟ್ ತಡೆಗೆದಿಟ್ಟುಕೊಳ್ಳಿ.
ಹೊಸ ಖಾತೆ ತೆರೆಯಿರಿ
ನಿಮಗಿಷ್ಟವಾದ ಬ್ಯಾಂಕ್ ನಲ್ಲಿ ಹೊಸ ಖಾತೆಯನ್ನು ತೆರೆಯಿರಿ. ಆದರೆ ನಿಮಗೆ ಡೆಬಿಟ್ ಕಾರ್ಡ್, ಪಿನ್, ಚೆಕ್ ಬುಕ್ ಮತ್ತು ಸಂಬಂಧಿಸಿದ ಎಲ್ಲ ಡಾಕ್ಯುಮೆಂಟ್ಸ್ ಸಿಗುವವರೆಗೆ ಯಾವ ಕಾರಣಕ್ಕೂ ಅಷ್ಟೂ ಹಣವನ್ನು ವರ್ಗಾವಣೆ ಮಾಡಬೇಡಿ.
ಬ್ಯಾಲೆನ್ಸ್ ಪರಿಶೀಲಿಸಿ
ನಿಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೆ, ಅಗತ್ಯವಿರುವಷ್ಟು ಮೊತ್ತ ಪಾವತಿಸುವವರೆಗೂ ಖಾತೆಯನ್ನು ಮುಚ್ಚಲು ಬ್ಯಾಂಕುಗಳು ಅವಕಾಶ ನೀಡುವುದಿಲ್ಲ. ಬ್ಯಾಂಕುಗಳು ಸೂಚಿಸಿದಂತೆ ಮಿನಿಮಮ್ ಬ್ಯಾಲೆನ್ಸ್ ಇದ್ದರೆ ಮಾತ್ರ ಖಾತೆಗಳನ್ನು ಮುಚ್ಚಲು ಸಾಧ್ಯವಾಗುತ್ತದೆ.
ಆಟೋಮೆಟೆಡ್ ಪೇಮೆಂಟ್ ಆಯ್ಕೆ ಮಾಡಿ
ಹಳೆ ಖಾತೆಯನ್ನು ಮುಚ್ಚುವ ಮುನ್ನ ಹೊಸ ಖಾತೆಗೆ ಆಟೋಮೆಟೆಡ್ ಪೇಮೆಂಟ್ ವಿಧಾನವನ್ನು ಅಳವಡಿಕೆ ಮಾಡಲಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಹೊಸ ಖಾತೆಯಲ್ಲಿ ನಿಮ್ಮ ವಿದ್ಯುತ್ ಬಿಲ್ ಪಾವತಿ, ಕ್ರೆಡಿಟ್ ಕಾರ್ಡ್ ಬಿಲ್ ನಂಥವು ಮಿಸ್ ಆಗುವ ಸಾಧ್ಯತೆಯಿರುತ್ತದೆ.
ಖಾತೆ ನಂಬರ್ ನಮೂದಿಸಿ
ನಿಮ್ಮ ಹೊಸ ಖಾತೆಯ ನಂಬರ್ ಅನ್ನು ಕೆಲಸ ಮಾಡುತ್ತಿರುವ ಕಂಪನಿಗೆ ನೀಡಲು ಮರೆಯದಿರಿ. ಸುಲಭವಾಗಿ ನಿಮ್ಮ ವೇತನದ ಹಣ ಯಾವುದೇ ಗೊಂದಲವಿಲ್ಲದೆ ಖಾತೆ ಸೇರಲು ಇದು ನೆರವಾಗುತ್ತದೆ. ಉಳಿದಂತೆ ಅಗತ್ಯವಿರುವೆಡೆ ನಿಮ್ಮ ಹೊಸ ಖಾತೆ ಸಂಖ್ಯೆ ನೀಡಿ.
ಈ ಎಲ್ಲ ಮಾಹಿತಿಗಳನ್ನು ಇನ್ನೊಮ್ಮೆ ಪರಿಶೀಲಿಸಿ, ಎಲ್ಲವೂ ಸರಿಯಾಗಿದೆ ಎಂದು ದೃಢಪಟ್ಟ ನಂತರವಷ್ಟೇ ನಿಮ್ಮ ಹಳೆಯ ಬ್ಯಾಂಕ್ ಶಾಖೆಗೆ ತೆರಳಿ ನಿಮ್ ಖಾತೆಯನ್ನು ಮುಚ್ಚುವಂತೆ ತಿಳಿಸಿ.


Click it and Unblock the Notifications