ನಷ್ಟದಲ್ಲಿರುವ ಸರಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ ಎನ್ ಎಲ್) ಆಸ್ತಿ ಹಾಗೂ ಸಾಲವನ್ನು ಸ್ಪೆಷಲ್ ಪರ್ಪಸ್ ವೆಹಿಕಲ್ ಗೆ ಹಸ್ತಾಂತರಿಸಲು ನಿರ್ಧಾರ ಮಾಡಿದೆ. ಆ ಮೂಲಕ ಬಿಎಸ್ ಎನ್ ಎಲ್ ಅನ್ನು ಸಾಲ ರಹಿತ ಸಂಸ್ಥೆಯನ್ನಾಗಿ ಮಾಡಲು ಮುಂದಾಗಿದೆ.
20,210 ಕೋಟಿ ಮೌಲ್ಯಕ್ಕೆ ಎಸ್ ಪಿವಿಗೆ (ಸ್ಪೆಷಲ್ ಪರ್ಪಸ್ ವೆಹಿಕಲ್) ಭೂಮಿಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ. ಈ ಭೂಮಿಯು ದೊಡ್ಡ ನಗರಗಳ ಪ್ರಮುಖ ಸ್ಥಳಗಳಲ್ಲಿವೆ. ಅವುಗಳನ್ನು ಒಟ್ಟಾರೆಯಾಗಿ ಕಡಿಮೆ ಬೆಲೆಗೆ ಮೌಲ್ಯಮಾಪನ ಮಾಡಲಾಗಿದೆ ಎಂದು ಬಿಎಸ್ ಎನ್ ಎಲ್ ನ ನೌಕರರ ಒಕ್ಕೂಟವು ಆರೋಪ ಮಾಡಿದೆ.
ಆದರೆ, ಬಿಎಸ್ ಎನ್ ಎಲ್ ನ ಆಡಳಿತ ಮಂಡಳಿತು ಈ ಆರೋಪವನ್ನು ಅಲ್ಲಗಳೆದಿದೆ. ಈಗ ಮೌಲ್ಯಮಾಪನ ಮಾಡಿರುವುದು ಸಾಂಕೇತಿಕ ಮಾತ್ರ. ಅಂತಿಮವಾದ ಮೌಲ್ಯಮಾಪನವನ್ನು ಪ್ರಸ್ತಾವಿತ ಭೂಮಿಯ ಮಾರಾಟಕ್ಕೆ ಮುಂಚೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಎಸ್ ಪಿವಿಯಿಂದ ಭೂಮಿಯ ಮಾರಾಟ ಮಾಡಿ, ಬಿಎಸ್ ಎನ್ ಎಲ್ ನ ಅಂದಾಜು ಸಾಲ ಹದಿನೈದು ಸಾವಿರ ಕೋಟಿ ರುಪಾಯಿ ತೀರಿಸಲು ಪ್ರಸ್ತಾವ ಇದೆ. "ಭೂಮಿಯನ್ನು ಮಾರಾಟ ಮಾಡಿ ನಗದೀಕರ್ಣಕ್ಕೆ ಚಾಲನೆ ನೀಡಿ, ಬಿಎಸ್ ಎನ್ ಎಲ್ ಅನ್ನು ಸಾಲರಹಿತ ಮಾಡಲು ಮುಂದಾಗಿರುವುದು ಅಚ್ಚರಿಯಾಗಿದೆ. ಏಕೆಂದರೆ ಬಿಎಸ್ ಎನ್ ಎಲ್ ಗೆ ಸೇರಿದ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ" ಎಂದು ಬಿಎಸ್ ಎನ್ ಎಲ್ ನೌಕರರ ಒಕ್ಕೂಟದ ಕಾರ್ಯದರ್ಶಿ ಪತ್ರದಲ್ಲಿ ತಿಳಿಸಿದ್ದಾರೆ.
ನೌಕರರ ಒಕ್ಕೂಟ ಹೇಳುವ ಪ್ರಕಾರ: ಎಸ್ ಪಿವಿಗೆ ವರ್ಗಾವಣೆ ಮಾಡಲು ನಿರ್ಧರಿಸಿರುವ ಭೂಮಿಯ ಮಾರುಕಟ್ಟೆ ಮೌಲ್ಯ ಅತ್ಯಂತ ಹೆಚ್ಚಿದೆ. ಅವುಗಳನ್ನು ಬುಕ್ ವ್ಯಾಲ್ಯೂ ಎಂಬ ಹೆಸರಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಎಸ್ ಎನ್ ಎಲ್ ಅಧ್ಯಕ್ಷ ಹಾಗೂ ಎಂ.ಡಿ., ಪಿ.ಕೆ. ಪುರ್ ವರ್ ಮಾತನಾಡಿ, ಈಗ ಕೇಳಿಬರುತ್ತಿರುವ ಆರೋಪ ಸರಿಯಲ್ಲ ಹಾಗೂ ಆಧಾರರಹಿತವಾದದ್ದು. ಈಗ ಮಾಡಿರುವ ಮೌಲ್ಯಮಾಪನ ಸಾಂಕೇತಿಕವಾದದ್ದು. ಅಂತಿಮ ಮೌಲ್ಯಮಾಪನವನ್ನು ಸರಕಾರದ ನೋಂದಾಯಿತ ವ್ಯಕ್ತಿಗಳೇ ಮಾಡುತ್ತಾರೆ. ಎಸ್ ಪಿವಿ ಪ್ರಸ್ತಾವ ಕೂಡ ಬಿಎಸ್ ಎನ್ ಎಲ್ ಥರವೇ ಶೇಕಡಾ ನೂರರಷ್ಟು ಸರಕಾರದ್ದು ಎಂದು ಹೇಳಿದ್ದಾರೆ.
ಆದರೆ, ನೌಕರರ ಒಕ್ಕೂಟ ಹೇಳುವ ಪ್ರಕಾರ, ಚೆನ್ನೈ ಹಾಗೂ ಕೇರಳ ವೃತ್ತದ ಭೂಮಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಅವುಗಳ ಬೆಲೆಯನ್ನು ಸಿಕ್ಕಾಪಟ್ಟೆ ಕಡಿಮೆ ನಿಗದಿ ಮಾಡಲಾಗಿದೆ.
"ಎಸ್ ಪಿವಿಯನ್ನು ಬಿಎಸ್ ಎನ್ ಎಲ್ ಭೂಮಿ ಮಾರಾಟಕ್ಕಾಗಿ ರಚನೆ ಮಾಡಲಾಗಿದೆ. ಅದು ಎಲ್ಲ ಭೂಮಿಯನ್ನು ಕಾರ್ಪೊರೇಟ್ಸ್ ಹಾಗೂ ಕಂಪೆನಿಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತದೆ. ನಮ್ಮ ಭಯ ಏನೆಂದರ್, ಈ ಪ್ರಕ್ರಿಯೆಯಲ್ಲಿ ಬಿಎಸ್ ಎನ್ ಎಲ್ ಗೆ ದೊಡ್ಡ ಮಟ್ಟದ ನಷ್ಟ ಉಂಟಾಗುತ್ತದೆ" ಎಂದು ಒಕ್ಕೂಟದವರು ಪತ್ರದಲ್ಲಿ ಹೇಳಿದ್ದಾರೆ.


Click it and Unblock the Notifications