ಮುಂಬೈ, ಜನವರಿ 07: ಇಬ್ಬರು ಸ್ನೇಹಿತರು ತಮ್ಮ ಪ್ರೀತಿಯನ್ನು ಹಂಚಿಕೊಳ್ಳುವ ಮೂಲಕ ದ್ವೀಪವೊಂದನ್ನು ಖರೀದಿಸುವ ಯೋಚನೆ ಮಾಡಿದ್ದರು. ಆದರೆ, ತಮ್ಮ ಐಷಾರಾಮಿ ಕನಸಿನ ಆಸೆಯನ್ನು ಪೂರೈಸುವುದಕ್ಕೆ ಅವರ ಬಳಿ ಹಣವಿರಲಿಲ್ಲ. ಆದರೆ, ಇದಕ್ಕೊಂದು ಅವರು ಉಪಾಯವನ್ನು ಹುಡುಕಿದ್ದು, ಆ ಮೂಲಕ ಹೂಡಿಕೆಯನ್ನು ಆಹ್ವಾನಿಸಿದ್ದರು. ಪರಿಣಾಮವಾಗಿ 18,0000 ಡಾಲರ್ ಮೊತ್ತಕ್ಕೆ ಜಗತ್ತಿನ ಮೊದಲ ಕ್ರೌಡ್ ಫಂಡಿಂಗ್ ದ್ವೀಪವನ್ನು ಖರೀದಿಸಿದ್ದಾರೆ.
ಈ ದ್ವೀಪವು ಕಾಫಿ ಕೇಯ್ ಆಗಿದ್ದು, ಇದು ಕೆರಿಬಿಯನ್‌ನಲ್ಲಿದೆ. ಅಲ್ಲದೆ, ಬೆಲೀಜ್ ದೇಶದ ಕರಾವಳಿಯಿಂದ ಕೇವಲ 15 ನಿಮಿಷಗಳ ದೂರದಲ್ಲಿ ಈ ದ್ವೀಪವಿದೆ. ಈ ದ್ವೀಪವನ್ನು ಪರಿಚಯಿಸಿರುವ ಇಬ್ಬರು ವ್ಯಕ್ತಿಗಳೆಂದರೆ ಮಾರ್ಷಲ್ ಮೇಯರ್ ಹಾಗೂ ಗರೆಥ್ ಜಾನ್ಸನ್. ಇವರು ಲೆಟಸ್ ಬೈ ಆನ್ ಐಲ್ಯಾಂಡ್ ಕ್ರೌಡ್‌ಫಂಡಿಂಗ್ ಅಭಿಯಾನದ ಸಹಸ್ಥಾಪಕರೂ ಆಗಿದ್ದಾರೆ.

ಈ ದ್ವೀಪವು ಹೆಚ್ಚು ವಿಸ್ತಾರವನ್ನು ಹೊಂದಿಲ್ಲ. ಆದರೆ ಉತ್ತರ ಗೋಳಾರ್ಧದ ಅತಿದೊಡ್ಡ ತಡೆಗೋಡೆಯಾದ ಬೆಲೀಜ್ ಬ್ಯಾರಿಯರ್ ರೀಫ್ ರಿಸರ್ವ್ ವ್ಯವಸ್ಥೆಯಡಿ ನೆಲೆಗೊಂಡಿದೆ. ಈ ವಿಭಿನ್ನ ದ್ವೀಪವನ್ನು 2019ರಲ್ಲಿ ಖರೀದಿಸಲಾಗಿದೆ. ಈ ದ್ವೀಪವು ಮೊದಲು ಬೆಲೀಜಿಯನ್-ಲೆಬನಾನ್ ದಂಪತಿಗೆ ಸೇರಿತ್ತು. ವಿಶೇಷವೆಂದರೆ, ಈ ದ್ವೀಪವು ಮ್ಯಾಂಗ್ರೋವ್ ಹಾಗೂ ತೆಂಗಿನ ಮರಗಳಿಂದ ಆವೃತಗೊಂಡಿವೆ.
ಈ ದ್ವೀಪವನ್ನು ಖರೀದಿಸುವುದಕ್ಕೆ ಇದರ ಸಂಸ್ಥಾಪಕರು 100ಕ್ಕೂ ಹೆಚ್ಚು ಮಂದಿಯಿಂದ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಈ ಭೂಮಿಗೆ ಅವರೆಲ್ಲರೂ ಪಾಲುದಾರರಾಗಿದ್ದಾರೆ. ಈ ದ್ವೀಪದ ಪ್ರತಿ ಷೇರುಬೆಲೆ 3250 ಡಾಲರ್. ಹೂಡಿಕೆದಾರರಿಗೆ ಈ ಹೂಡಿಕೆಯು ಹೆಚ್ಚಿನ ಲಾಭವನ್ನು ಉಂಟು ಮಾಡುವುದಕ್ಕೆ ಈ ದ್ವೀಪವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
ಲೆಟಸ್ ಬೈ ಆನ್ ಐಲ್ಯಾಂಡ್‌ನ ಸಿಇಒ ಹಾಗೂ ಸಹ ಸಂಸ್ಥಾಪಕರಾದ ಗರೆಥ್ ಜಾನ್ಸನ್ ಅವರು ಉದ್ಯಮಿಯಾಗಿದ್ದು, ಯಂಗ್ ಪಯೊನೀರ್ ಟೂರ್ಸ್ ಎಂಬ ಕಂಪನಿಯನ್ನು ಹೊಂದಿದ್ದಾರೆ. ಯುಕೆ ಮೂಲದ ಇವರು ನಾರ್ತ್ ಕೊರಿಯಾ, ನಗರೋನೊ ಸೇರಿದಂತೆ ಜಗತ್ತಿನ ಬಹಳ ಅಪರೂಪವಾದ ತಾಣಗಳಿಗೆ ಪ್ರವಾಸಿಗಳನ್ನು ಕರೆಯೊಯ್ಯುತ್ತಾರೆ.
ಸದ್ಯಕ್ಕೆ ಈ ದ್ವೀಪವು ಸ್ವಾಯತ್ತತೆಯನ್ನು ಪಡೆದುಕೊಂಡಿಲ್ಲ. ಈಗಲೂ ಬೆಲೀಜ್‌ನ ಭಾಗವಾಗಿಯೇ ಇದೆ. ಆದರೆ, ಅದರ ಮಾಲೀಕರು ಪ್ರತ್ಯೇಕ ಧ್ವಜ ಹಾಗೂ ಸಂವಿಧಾನವನ್ನು ರಚಿಸಿಕೊಂಡಿದ್ದಾರೆ. ಪ್ರತಿ ಹೂಡಿಕೆದಾರರು ಕೂಡ ಈ ಪ್ರಜಾಪ್ರಭುತ್ವದ ಭಾಗವಾಗಿದ್ದು, ಯಾವುದೇ ನಿರ್ಧಾರಗಳಿಗೆ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಕಡಲ್ಕೊರೆತ ತಪ್ಪಿಸುವುದಕ್ಕೆ ಈ ದ್ವೀಪದ ಸುತ್ತಲೂ ತಡೆಗೋಡೆಯನ್ನು ನಿರ್ಮಿಸುವ ನಿರ್ಧಾರ ಕೂಡ ಮಾಡಿಕೊಂಡಿದ್ದಾರೆ.


Click it and Unblock the Notifications