ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್‌ಗಳ ಮೇಲಿನ ಜಿಎಸ್‌ಟಿಯು 2023ರ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ. ಜಾರಿಗೆ ಬಂದ ಆರು ತಿಂಗಳಲ್ಲಿ ಪರಿಶೀಲಿಸಲಾಗುವುದು ಎಂದು ಜಿಎಸ್‌ಟಿ ಕೌನ್ಸಿಲ್ ಬುಧವಾರ ಸ್ಪಷ್ಟಪಡಿಸಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಸಭೆ ಬುಧವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಯಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಜಿಎಸ್‌ಟಿ ಸಭೆಯು ನಡೆದಿದ್ದು, ರಾಜ್ಯಗಳ ಹಣಕಾಸು ಸಚಿವರುಗಳು ಹಾಜರಿದ್ದರು.

ಆನ್‌ಲೈನ್ ಗೇಮಿಂಗ್, ಕ್ಯಾಸಿನೊಗಳ ಮೇಲೆ ಶೇಕಡ 28ರಷ್ಟು ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ. ಇದು ಜಾರಿಗೆ ಬಂದ ಆರು ತಿಂಗಳ ನಂತರ ಪರಿಶೀಲನೆ ಮಾಡಲಾಗುತ್ತದೆ. ಅಗತ್ಯವಿದ್ದಲ್ಲಿ ಕೆಲವು ಬದಲಾವಣೆಯನ್ನು ತರಲಾಗುತ್ತದೆ. ಈ ಬಗ್ಗೆ ಸರ್ಕಾರವೇ ಮಾಹಿತಿ ನೀಡಲಿದೆ. ಕಾನೂನು ತಿದ್ದುಪಡಿ ಮಾಡುವ ಯಾವುದೇ ಅಗತ್ಯ ಇರುವುದಿಲ್ಲ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.
"ಹೊರ ಪ್ರದೇಶದಲ್ಲಿನ ಆನ್‌ಲೈನ್ ಗೇಮಿಂಗ್‌ಗೆ ನೋಂದಣಿ ಅಗತ್ಯವಿದ್ದು, ಅದಕ್ಕಾಗಿ ಕಾನೂನು ನಿಬಂಧನೆಯನ್ನು ಪರಿಚಯಿಸುತ್ತೇವೆ. ಇದು ಸರಳ ಪ್ರಕ್ರಿಯೆಯಾಗಿದೆ," ಎಂದು ಕಂದಾಯ ಕಾರ್ಯದರ್ಶಿ ಪ್ರತಿಪಾದಿಸಿದ್ದಾರೆ. ಈ ಹಿಂದೆ ದೆಹಲಿ, ಗೋವಾದಂತಹ ರಾಜ್ಯಗಳಿಂದ ಆನ್‌ಲೈನ್ ಗೇಮಿಂಗ್, ಕ್ಯಾಸಿನೋ ಮೇಲಿನ ಜಿಎಸ್‌ಟಿ ಹೇರಿಕೆ ಪರಿಶೀಲನೆಯ ಬೇಡಿಕೆ ಕಂಡು ಬಂದಿತ್ತು.
ಈ ಹಿಂದೆ ಜಿಎಸ್‌ಟಿ ಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಜಿಎಸ್‌ಟಿಗೆ ಅಸ್ತು
ಆನ್‌ಲೈನ್ ಗೇಮಿಂಗ್, ಕ್ಯಾಸಿನೋ, ಕುದುರೆ ರೇಸಿಂಗ್ ಮೇಲೆ ಜಿಎಸ್‌ಟಿಯನ್ನು ವಿಧಿಸುವ ನಿರ್ಧಾರವನ್ನು ಈ ಹಿಂದಿನ ಜಿಎಸ್‌ಟಿ ಸಭೆಯ ಬಳಿಕ ಕೈಗೊಳ್ಳಲಾಗಿದೆ. ಈ ಬಗ್ಗೆ ಜಿಎಸ್‌ಟಿ ಸಭೆಯ ನಂತರ ಪಶ್ಚಿಮ ಬಂಗಾಳ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಮಾಹಿತಿ ನೀಡಿದ್ದರು. ಇನ್ನು ಮುಂದೆ ಆನ್‌ಲೈನ್ ಗೇಮಿಂಗ್, ಕ್ಯಾಸಿನೋ, ಕುದುರೆ ರೇಸಿಂಗ್‌ಗೆ ಶೇಕಡ 28ರಷ್ಟು ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ. ಒಟ್ಟು ಮೊತ್ತದ ಮೇಲೆ ಈ ಜಿಎಸ್‌ಟಿ ವಿಧಿಸಲಾಗುತ್ತದೆ ಎಂದು ತಿಳಿಸಿದ್ದರು.
"ಈ ಆನ್‌ಲೈನ್ ಗೇಮ್‌ಗಳಿಗೆ ಕೌಶಲ್ಯದ ಅಗತ್ಯವಿದೆಯೇ ಅಥವಾ ಚಾನ್ಸ್ ಆಧಾರದಲ್ಲಿ ಇದೆಯೇ ಎಂಬುವುದರ ಆಧಾರವನ್ನು ನಾವು ಪರಿಗಣನೆಗೆ ತೆಗೆದುಕೊಂಡಿಲ್ಲ. ಎಲ್ಲ ಆನ್‌ಲೈನ್ ಗೇಮಿಂಗ್ ಕಂಪನಿಗಳ ಮೇಲೆ ತೆರಿಗೆ ವಿಧಿಸಲಾಗುವುದು," ಎಂದು ಮಹಾರಾಷ್ಟ್ರ ರಾಜ್ಯದ ಸಚಿವ ಸುಧೀರ್ ಮುಂಗಂತಿವಾರ್ ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್‌ನ ಸಿಇಒ ರೋಲಾಂಡ್ ಲ್ಯಾಂಡರ್ಸ್, "ಅಂದರೆ ನಿವ್ವಳ ಆದಾಯ ಅಥವಾ ಒಟ್ಟು ಗಳಿಕೆಯ ಹಣದ ಮೇಲೆ ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ. ಜಿಎಸ್‌ಟಿ ಕೌನ್ಸಿಲ್ ಕೈಗೊಂಡಿರುವ ಈ ನಿರ್ಧಾರವು ಅಸಂವಿಧಾನಿಕ, ಅತಿರೇಕದ್ದು ಎಂದು ನಾವು ನಂಬುತ್ತೇವೆ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಹಾಲ್‌ಗಳಲ್ಲಿ ಲಭ್ಯವಾಗುವ ಆಹಾರದ ಜಿಎಸ್‌ಟಿ ಕಡಿತ
ಈ ಹಿಂದೆ 50ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಸಭೆಯಲ್ಲಿ ಸಿನಿಮಾ ಹಾಲ್‌ಗಳಲ್ಲಿ ಲಭ್ಯವಾಗುವ ಆಹಾರ ಪದಾರ್ಥಗಳ ಮೇಲಿನ ಹಾಗೂ ಕೆಲವು ಔಷಧಿಗಳ ಮೇಲಿನ ಜಿಎಸ್‌ಟಿಯನ್ನು ಕಡಿತಗೊಳಸಲು ಒಪ್ಪಿಗೆ ಸೂಚಿಸಲಾಗಿದೆ. ಈ ಕೌನ್ಸಿಲ್ ಸಿನಿಮಾ ಹಾಲ್‌ಗಳಲ್ಲಿ ಮಾರಾಟ ಮಾಡಲಾಗುವ ಆಹಾರಗಳ ಮೇಲಿನ ಜಿಎಸ್‌ಟಿಯನ್ನು ಶೇಕಡ 18ರಿಂದ ಶೇಕಡ 5ಕ್ಕೆ ಇಳಿಕೆ ಮಾಡುವ ನಿರ್ಧಾರವನ್ನು ಕೈಗೊಂಡಿತ್ತು.
ಇನ್ನು ಈ ಸಂದರ್ಭದಲ್ಲೇ ಕ್ಯಾನ್ಸರ್ ಔಷಧಿ ಡಿನುಟುಕ್ಸಿಮಾಬ್ ಆಮದು ಮೇಲಿನ ಜಿಎಸ್‌ಟಿಯನ್ನು ವಿನಾಯಿತಿ ಮಾಡಲು ಕೌನ್ಸಿಲ್ ಒಪ್ಪಿಕೊಂಡಿದೆ. ವಿಶೇಷ ವೈದ್ಯಕೀಯ ಉದ್ದೇಶಗಳಿಗಾಗಿ ಕೆಲವು ಆಹಾರವನ್ನು ಆಮದು ಮಾಡಲಾಗುತ್ತದೆ, ಕೆಲವು ವಿರಳ ಕಾಯಿಲೆಗಳಿಗೆ ಇದನ್ನು ಬಳಸಲಾಗುತ್ತದೆ. ಅಂತಹ ಆಮದುಗಳ ಮೇಲಿನ ಜಿಎಸ್‌ಟಿಯನ್ನು ಕೂಡಾ ವಿನಾಯಿತಿ ಮಾಡಲಾಗಿದೆ


Click it and Unblock the Notifications