ಹೊಸೂರು ವಿಮಾನ ನಿಲ್ದಾಣ (Hosuru Airport) ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಅತ್ತ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯಗಳು ಇನ್ನೂ ನಡೆಯುತ್ತಿದ್ದರೂ, ಇತ್ತ ತಮಿಳುನಾಡು ಸರ್ಕಾರ ತನ್ನ ಹೊಸೂರು ವಿಮಾನ ನಿಲ್ದಾಣಕ್ಕಾಗಿ ಒಂದು ಹೆಜ್ಜೆ ಮುಂದೆ ಹೋಗಿದೆ. ಇದೀಗ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಸುಮಾರು 2,900 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ (Tamil Nadu Govt) ಮುಂದಾಗಿದೆ ಎಂದು ವರದಿಯಾಗಿದೆ. ಒಟ್ಟು 12 ಹಳ್ಳಿಗಳಲ್ಲಿನ 800 ಎಕರೆ ಸರ್ಕಾರಿ ಭೂಮಿ ಇದರಲ್ಲಿ ಸೇರಿದ್ದು, ಒಟ್ಟು 2900 ಎಕರೆ ಭೂಮಿ ವಿಮಾನ ನಿಲ್ದಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ (Land acquisition)
ಎನ್ನಲಾಗಿದೆ.

ಇನ್ನು ತಮಿಳುನಾಡು ಸರ್ಕಾರವು ವಿಮಾನ ನಿಲ್ದಾಣಕ್ಕಾಗಿ ಹೊಸೂರು-ಬೆರಿಗೈ-ಬಾಗಲೂರು-ಶೂಲಗಿರಿ ನಾಲ್ಕು ಪ್ರದೇಶವನ್ನು ಆಯ್ಕೆ ಮಾಡಿದೆ. ಈ ನಿಲ್ದಾಣವು ವರ್ಷಕ್ಕೆ ಸುಮಾರು 3 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಗುರಿ ಹೊಂದಿದೆ ಎನ್ನಲಾಗಿದೆ.
ಕಳೆದ ತಿಂಗಳು, ಸರ್ಕಾರವು ವಿಮಾನ ನಿಲ್ದಾಣ ಅಭಿವೃದ್ಧಿಗೆ 'ವಿವರವಾದ ತಾಂತ್ರಿಕ-ಆರ್ಥಿಕ ವರದಿ' (Detailed Techno-Economic Report - DTER) ಸಿದ್ಧಪಡಿಸಲು ಸಲಹೆಗಾರರ ಆಯ್ಕೆಗೆ ಟೆಂಡರ್ ಕರೆದಿತ್ತು. ಅಲ್ಲದೆ, ಸ್ಥಳ ಅನುಮತಿಗಾಗಿ ಕೇಂದ್ರ ವಿಮಾನಯಾನ ಸಚಿವಾಲಯವನ್ನೂ ಸಂಪರ್ಕಿ ಮಾಡಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಹೊಸೂರು ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯ ಭಾರೀ ವೇಗವಾಗಿ ಸಾಗುತ್ತಿದೆ.
ಕೃಷ್ಣಗಿರಿ ಜಿಲ್ಲಾಡಳಿತ ಸಿದ್ಧಪಡಿಸಿದ 'ಭೂ ಅಭಿವೃದ್ಧಿ ಯೋಜನೆ' (Land Development Plan - LDP) ಪ್ರಕಾರ, ಈ ಪ್ರದೇಶದಲ್ಲಿ ಸರ್ಕಾರಿ ಸ್ವಾಮ್ಯದ ಭೂಮಿ 845 ಎಕರೆ ಎಂದು ಅಂದಾಜಿಸಲಾಗಿದೆ. ಅಲ್ಲದೇ "ವಿಮಾನ ನಿಲ್ದಾಣಕ್ಕಾಗಿ ಕೃಷಿ ಭೂಮಿ ಸೇರಿದಂತೆ 2,134 ಎಕರೆ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಗತ್ಯವಿದೆ. ಒಟ್ಟಾರೆಯಾಗಿ ಹೊಸೂರು ವಿಮಾನ ನಿಲ್ದಾಣ ಯೋಜನೆಗೆ 2,979 ಎಕರೆ ಭೂಮಿ ಅಗತ್ಯವಿದೆ" ಎಂದು ವರದಿಯಾಗಿದೆ.
ಭೂಸ್ವಾಧೀನವಾಗುವ 12 ಹಳ್ಳಿಗಳಲ್ಲಿ 10 ಹೊಸೂರು ತಾಲೂಕಿನಲ್ಲಿದ್ದು, 2 ಹಳ್ಳಿಗಳು ಶೂಲಗಿರಿ ತಾಲೂಕಿನಲ್ಲಿವೆ. ಬಾಳವನಪಲ್ಲಿ, ಮುತ್ತಾಲಿ, ಅದವನಪಲ್ಲಿ, ದಾಸಪಲ್ಲಿ, ಪೆಡಾ ಮುತ್ತಾಲಿ, ಅತ್ತೂರು, ಅಳೇನಾಥಂ, ಕಾರುಪಲ್ಲಿ, ನಂದಿಮಂಗಲಂ, ಸೂಡುಕೊಂಡಪಲ್ಲಿ, ಮಿಡುಡೆಪಲ್ಲಿ, ವೆಂಕಟೇಶಪುರಂ ಈ ಯೋಜನಾ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಾಗಿವೆ. ಈ ಎಲ್ಲಾ ಹಳ್ಳಿಗಳಲ್ಲಿ 2900 ಎಕರೆಗೂ ಅಧಿಕ ಭೂಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎನ್ನಲಾಗಿದೆ.
"ಈಗಾಗಲೇ LDP ಯನ್ನು ಭೂ ಆಡಳಿತ ಆಯುಕ್ತರ ಪರಿಶೀಲನೆಗಾಗಿ ಕಳುಹಿಸಲಾಗಿದೆ. ಅವರು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಅವರ ಅಂತಿಮ ಪ್ರತಿಕ್ರಿಯೆ ನಿರೀಕ್ಷೆಯಿದೆ" ಎಂದು ಮೂಲಗಳು ತಿಳಿಸಿದೆ. ಒಮ್ಮೆ LDP ಅನುಮೋದನೆಗೊಂಡರೆ, ನಂತರ ಅದನ್ನು ವಿವಿಧ ಇಲಾಖೆಗಳಿಗೆ ಆಡಳಿತಾತ್ಮಕ ಅನುಮೋದನೆಗಾಗಿ ರವಾನಿಸಲಾಗುತ್ತದೆ. ತದನಂತರ, ಸರ್ಕಾರಿ ಆದೇಶ (Government Order - GO) ಹೊರಡಿಸಲಾಗುತ್ತದೆ ಎಂದು ಹೇಳಲಾಗಿದೆ.
ಸದ್ಯ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 150 ಕಿ.ಮೀ. ವ್ಯಾಪ್ತಿಯಲ್ಲಿ 2033ರವರೆಗೆ ಹೊಸ ವಿಮಾನ ನಿಲ್ದಾಣ ನಿರ್ಮಾಣ ಮಾಡುವಂತಿಲ್ಲ. ಆದರೂ, ರಾಜ್ಯ ಸರ್ಕಾರವು ವಿನಾಯಿತಿ ಪಡೆಯಲು ಒಪ್ಪಂದ ಮಾಡಿಕೊಳ್ಳಬಹುದು ಅಥವಾ ರಿಯಾಯಿತಿ ಒಪ್ಪಂದದ ಅವಧಿ ನಂತರ ಯೋಜನೆ ಆರಂಭಿಸಬಹುದು ಎಂದು ಹೇಳಲಾಗಿದೆ. ರಿಯಾಯಿತಿ ಒಪ್ಪಂದದ ಕಾರಣ, ತಮಿಳುನಾಡಿಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ನಿಂದ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಸಹ ಅಗತ್ಯವಿರುತ್ತದೆ. ಇನ್ನೇನು ಕಾರ್ಯ ಶುರುವಾಗಬೇಕಿದೆ. ಆದರೆ ಈಗಾಗಲೇ ಪ್ರಕ್ರಿಯೆಗಳು ಆರಂಭವಾಗಿದೆ. ಮುಂದೆ ಏನಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ.


Click it and Unblock the Notifications