ಜಿಎಸ್ ಟಿ (ಸರಕು ಹಾಗೂ ಸೇವಾ ತೆರಿಗೆ) ಸಮಿತಿಯ 41ನೇ ಸಭೆಯು ಗುರುವಾರ (ಆಗಸ್ಟ್ 27, 2020) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ರಾಜ್ಯಗಳಿಗೆ ಆದಾಯದಲ್ಲಿ ಇಳಿಕೆ ಆಗಿರುವುದಕ್ಕೆ ಹೇಗೆ ಪರಿಹಾರ ನೀಡಬೇಕು ಎಂಬ ಚರ್ಚೆಯಾಗಿದೆ.
ಕೇಂದ್ರ ಜಿಎಸ್ ಟಿ ಕಾಯ್ದೆ ಪ್ರಕಾರ, ಜಿಎಸ್ ಟಿ ಜಾರಿಯಾದ ಜುಲೈ 1, 2017ರಿಂದ ಐದು ವರ್ಷಗಳ ಕಾಲ ರಾಜ್ಯಗಳಿಗೆ ಯಾವುದೇ ಆದಾಯ ನಷ್ಟವಾದಲ್ಲಿ ಅದನ್ನು ಖಾತ್ರಿಯಾಗಿ ಪರಿಹಾರ ರೂಪದಲ್ಲಿ ತುಂಬಿಕೊಡಬೇಕು. 2015- 16ನೇ ಇಸವಿಯನ್ನು ಬೇಸ್ ವರ್ಷ ಎಂದು ಗಣನೆಗೆ ತೆಗೆಕೊಂಡು, ಆಗಿನ ಆದಾಯಕ್ಕೆ ವಾರ್ಷಿಕವಾಗಿ 14% ಬೆಳವಣಿಗೆಯನ್ನು ಲೆಕ್ಕ ಹಾಕಿ, ರಾಜ್ಯಗಳ ಆದಾಯ ನಷ್ಟ ಅಥವಾ ಕೊರತೆಯನ್ನು ತೀರ್ಮಾನ ಮಾಡಬೇಕು.
ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಡಿದ ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ, ಈ ಸಭೆಯಲ್ಲಿ ಪರಿಹಾರದ ವಿಚಾರವಾಗಿ ಚರ್ಚಿಸಲಾಯಿತು. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಈ ವರ್ಷ ಜಿಎಸ್ ಟಿ ಸಂಗ್ರಹಕ್ಕೆ ಭಾರೀ ಪೆಟ್ಟು ಬೀಳುತ್ತದೆ ಎಂದು ಹೇಳಿದರು.

ಅಟಾರ್ನಿ ಜನರಲ್ ಅವರ ಪ್ರಕಾರ, ಭಾರತದ ಸಮಗ್ರ ನಿಧಿ ಮತ್ತು ಪರಿಹಾರದ ಸೆಸ್ ಶುಲ್ಕದ ಮೊತ್ತದಿಂದ ರಾಜ್ಯಗಳಿಗೆ ಪರಿಹಾರ ಒದಗಿಸಲು ಸಾಧ್ಯವಿಲ್ಲ. ಆದ್ದರಿಂದ ಆದಾಯ ನಷ್ಟವನ್ನು ಭರಿಸಲು ಐದು ವರ್ಷದ ಆಚೆಗೂ ಪರಿಹಾರದ ಸೆಸ್ ವಿಸ್ತರಣೆ ಮಾಡಬಹುದಾಗಿದೆ.
ಇನ್ನು ಕೊರೊನಾ ಬಿಕ್ಕಟ್ಟಿನಲ್ಲಿ ಆದಾಯ ನಷ್ಟ ಅನುಭವಿಸುತ್ತಿರುವ ರಾಜ್ಯಗಳ ಮುಂದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎರಡು ಆಯ್ಕೆಗಳನ್ನು ಇಟ್ಟರು.
ಆಯ್ಕೆ 1:
ಆರ್ ಬಿಐ ಜತೆಗೆ ಚರ್ಚೆ ನಡೆಸಿ, ರಾಜ್ಯಗಳಿಗೆ ವಿಶೇಷ ಸವಲತ್ತು ಒದಗಿಸಲಾಗುತ್ತದೆ. 97 ಸಾವಿರ ಕೋಟಿ ರುಪಾಯಿಯನ್ನು ಉತ್ತಮ ಬಡ್ಡಿ ದರದಲ್ಲಿ ಕೊಡಿಸಲಾಗುತ್ತದೆ. ಅದನ್ನು ಐದು ವರ್ಷಗಳ ಅವಧಿಗೆ ಸೆಸ್ ಸಂಗ್ರಹದ ಮೂಲಕ ಮರುಪಾವತಿಗೆ ಅವಕಾಶ ಇರುತ್ತದೆ.
ಆಯ್ಕೆ 2:
ಒಟ್ಟಾರೆ ಜಿಎಸ್ ಟಿ ಪರಿಹಾರ ಕೊರತೆಯಾದ 2.35 ಲಕ್ಷ ಕೋಟಿ ರುಪಾಯಿ ಮೊತ್ತವನ್ನು ಆರ್ ಬಿಐ ಜತೆಗೆ ಚರ್ಚೆ ನಡೆಸಿ, ಸಾಲ ಪಡೆಯುವ ಮೂಲಕ ರಾಜ್ಯಗಳೇ ಅದನ್ನು ತುಂಬಿಕೊಳ್ಳಬಹುದು ಎಂದು ಅವರು ಹೇಳಿದರು.
ಈ ಎರಡು ಆಯ್ಕೆಗಳಲ್ಲಿ ಯಾವುದನ್ನು ಆರಿಸಿಕೊಳ್ಳಬೇಕು ಎಂದು ತೀರ್ಮಾನ ಮಾಡುವುದಕ್ಕೆ ರಾಜ್ಯಗಳು ಏಳು ದಿನಗಳ ಕಾಲಾವಕಾಶ ಕೇಳಿದವು. ಇನ್ನು ದ್ವಿಚಕ್ರ ವಾಹನದ ಮೇಲೆ ಜಿಎಸ್ ಟಿ ದರ ಇಳಿಸುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಲಿಲ್ಲ. ಈ ಹಿಂದೆ ತೆರಿಗೆ ದರ ಇಳಿಸುವ ಬಗ್ಗೆ ಆಲೋಚಿಸುತ್ತಿರುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು ಎಂದು ವರದಿಗಳಾಗಿದ್ದವು.


Click it and Unblock the Notifications