ಅದು 2008ನೇ ಇಸವಿ. ಆ ವ್ಯಕ್ತಿ ಜಗತ್ತಿನ ಆರನೇ ಶ್ರೀಮಂತ ಎಂದು ಫೋರ್ಬ್ಸ್ ಪಟ್ಟಿಯೊಂದು ಬಿಡುಗಡೆಯಾಗಿತ್ತು. ಆ ವ್ಯಕ್ತಿಯ ಬಳಿ 4,200 ಕೋಟಿ ಅಮೆರಿಕನ್ ಡಾಲರ್ ನಷ್ಟು ಆಸ್ತಿ ಇತ್ತು. ದಿನಕ್ಕೆ ಒಂದು ಕೋಟಿ ಅಮೆರಿಕನ್ ಡಾಲರ್ ಖರ್ಚು ಮಾಡುತ್ತಾ ಬಂದಿದ್ದರೂ 4,200 ದಿನ ಬೇಕಿತ್ತು ಅಷ್ಟು ಮೊತ್ತದ ಹಣವು ಕರಗುವುದಕ್ಕೆ.
ಹೌದು, ಸ್ವಲ್ಪ ಹೆಚ್ಚು- ಕಡಿಮೆ ಅದೇ ಅವಧಿಯೊಳಗೆ ಆ ಶ್ರೀಮಂತ ಬರಿಗೈ ಆಗಿದ್ದು, ತನ್ನ ಬಳಿ ಹಣವೇ ಇಲ್ಲ ಎಂದು ಕೋರ್ಟ್ ಮುಂದೆ ಹೇಳಿಕೊಂಡಿದ್ದಾರೆ ಆ ಶ್ರೀಮಂತ ವ್ಯಕ್ತಿ. ಯಾರೀತ? ಅಷ್ಟು ದೊಡ್ಡ ಮೊತ್ತದ ಹಣ ಕಳೆದುಕೊಂಡು ಬೀದಿಗೆ ಬಂದಿರುವುದು ಅಂತೀರಾ? ಅನಿಲ್ ಅಂಬಾನಿ. ಏಷ್ಯಾದ ಅತಿ ದೊಡ್ಡ ಶ್ರೀಮಂತ ಮುಕೇಶ್ ಅಂಬಾನಿಯ ಸ್ವಂತ ಸೋದರ.
ಸಾಲದ ಸುಳಿಯಲ್ಲಿ ಸಿಲುಕಿದ ಕಂಪೆನಿಗಳು
ಅನಿಲ್ ಮತ್ತು ಮುಕೇಶ್ ಮಧ್ಯೆ ಆಸ್ತಿ ಹಂಚಿಕೆ ಆಯಿತು. ಆಗ ಅನಿಲ್ ಪಾಲಿಗೆ ಟೆಲಿಕಾಂ, ವಿದ್ಯುತ್ ಉತ್ಪಾದನೆ, ಹಣಕಾಸು ಸೇವೆ ಮತ್ತಿತರ ಉದ್ಯಮಗಳು ಬಂತು. ಅನಿಲ್ ಪಾಲಿಗೆ ಬಂದ ಉದ್ಯಮಗಳು ಒಂದೋ ಸಾಲದ ಸುಳಿಯಲ್ಲಿ ಮುಳುಗುತ್ತಿವೆ. ಇನ್ನೂ ಕೆಲವು ದಿವಾಳಿಯತ್ತ ಮುಖ ಮಾಡಿ, ಕೋರ್ಟ್ ನಲ್ಲಿವೆ. ಜೂನ್, 2019ನೇ ಇಸವಿಯಲ್ಲಿ ಅನಿಲ್ ಅಂಬಾನಿಗೆ ಒಡೆತನಕ್ಕೆ ಬಂದ ರಿಲಯನ್ಸ್ ಗ್ರೂಪ್ ನ ಆರು ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು 6,196 ಕೋಟಿ ರುಪಾಯಿ ಇತ್ತು. ಫೆಬ್ರವರಿ 10, 2020ರಂದು ಷೇರು ಮಾರುಕಟ್ಟೆ ವ್ಯವಹಾರ ಮುಗಿದ ವೇಳೆಗೆ ಆ ಆರು ಕಂಪೆನಿಗಳ ಬಂಡವಾಳ ಮೌಲ್ಯ 1,645.65 ಕೋಟಿಗೆ ಕರಗಿದೆ.
$ 100 ಮಿಲಿಯನ್ ಹಣದ ಠೇವಣಿಗೆ ಲಂಡನ್ ನ ಕೋರ್ಟ್ ಸೂಚನೆ
ಒಂದು ಕಾಲದ ಶತಕೋಟ್ಯಧಿಪರಿ ಅನಿಲ್ ಅಂಬಾನಿ ಮೇಲೆ ಚೀನಾದ ಬ್ಯಾಂಕ್ ಗಳು ಮೂರು ಪ್ರಕರಣ ದಾಖಲಿಸಿವೆ. 2012ರಲ್ಲಿ ಸ್ವತಃ ಗ್ಯಾರಂಟಿ ನೀಡಿ, ರಿಲಯನ್ಸ್ ಕಮ್ಯುನಿಕೇಷನ್ಸ್ ಗಾಗಿ ಪಡೆದಿದ್ದ $ 680 ಮಿಲಿಯನ್ ಸಾಲವನ್ನು ವಸೂಲಿ ಮಾಡಲು ಅವು ಪ್ರಯತ್ನ ಮಾಡುತ್ತಿವೆ. ಇನ್ನು 6 ವಾರದಲ್ಲಿ $ 100 ಮಿಲಿಯನ್ ಹಣದ ಠೇವಣಿ ಮಾಡುವಂತೆ ಲಂಡನ್ ನ ಕೋರ್ಟ್ ಅನಿಲ್ ಅಂಬಾನಿಗೆ ಸೂಚಿಸಿದೆ. "ನನ್ನ ಎಲ್ಲ ಹೂಡಿಕೆ ಕುಸಿದಿದೆ. ಒಟ್ಟು ಆಸ್ತಿ ಮೌಲ್ಯ ಶೂನ್ಯ. ಈ ಮೊತ್ತವನ್ನು ಪಾವತಿಸಲು ನಗದು ಕ್ರೋಡೀಕರಿಸುವಂಥ ಯಾವ ಆಸ್ತಿಯೂ ನನ್ನ ಬಳಿ ಇಲ್ಲ" ಎಂದು ಕೋರ್ಟ್ ಮುಂದೆ ಹೇಳಿಕೊಂಡಿದ್ದಾರೆ ಅನಿಲ್ ಅಂಬಾನಿ. ಅಲ್ಲಿಗೆ, ಆರಂಭದಲ್ಲೇ ಹೇಳಿದಂತೆ 4,200 ಕೋಟಿ ಅಮೆರಿಕನ್ ಡಾಲರ್ ಆಸ್ತಿ ದಿನಕ್ಕೆ 1 ಕೋಟಿ ಡಾಲರ್ ನಂತೆ ಕರಗಿಹೋಗಿದೆ.
ಧೀರೂಭಾಯಿ ಅಂಬಾನಿ ವಿಲ್ ಮಾಡಿರಲಿಲ್ಲ
ಮುಕೇಶ್ ಮತ್ತು ಅನಿಲ್ ರ ತಂದೆ ಧೀರೂಭಾಯಿ ಅಂಬಾನಿ 2002ನೇ ಇಸವಿಯಲ್ಲಿ ತೀರಿಕೊಂಡರು. ಅವರು ಯಾವುದೇ ವಿಲ್ ಮಾಡಿರಲಿಲ್ಲ. ಅಂಥ ಸನ್ನಿವೇಶದಲ್ಲಿ ಮುಕೇಶ್ ರಿಲಯನ್ಸ್ ನ ಅಧ್ಯಕ್ಷರಾದರೆ, ಅನಿಲ್ ಕಾರ್ಯನಿರ್ವಾಹಕ ನಿರ್ದೇಶಕರಾದರು. ಅವತ್ತಿಗೆ ರಿಲಯನ್ಸ್ ನ ಒಟ್ಟು ವ್ಯವಹಾರದ ಮೊತ್ತ 28 ಸಾವಿರ ಕೋಟಿ ಇತ್ತು. ಆದರೆ ಅಣ್ಣ- ತಮ್ಮಂದಿರ ಮಧ್ಯೆ 2005ರಲ್ಲಿ ಭಿನ್ನಮತ ಬಂದಿತು. ಆಗ ಕಂಪೆನಿಯನ್ನು ಎರಡಾಗಿ ಹೋಳು ಮಾಡಲಾಯಿತು. ಅನಿಲ್ ಪಾಲಿಗೆ ಟೆಲಿಕಾಂ, ವಿದ್ಯುತ್ ಉತ್ಪಾದನೆ ಮತ್ತು ಹಣಕಾಸು ಸೇವೆಯ ಉದ್ಯಮ ಬಂದರೆ, ತೈ ಸಂಸ್ಕರಣೆ ಮತ್ತು ಪೆಟ್ರೋ ಕೆಮಿಕಲ್ಸ್ ಉದ್ಯಮವನ್ನು ಮುಕೇಶ್ ತಾವೇ ಇಟ್ಟುಕೊಂಡರು. ಪರಸ್ಪರರ ಉದ್ಯಮದಲ್ಲಿ ಸ್ಪರ್ಧೆಗೆ ಇಳಿಯುವುದಿಲ್ಲ ಎಂದು 2010ರ ತನಕದ ಒಪ್ಪಂದ ಕೂಡ ಮಾಡಿಕೊಂಡರು.
ಯಾವ ಉದ್ಯಮದ ಆರ್ಥಿಕ ಸ್ಥಿತಿಯೂ ಚೆನ್ನಾಗಿಲ್ಲ
ರಿಲಯನ್ಸ್ ಕಮ್ಯುನಿಕೇಷನ್ಸ್, ರಿಲಯನ್ಸ್ ಪವರ್, ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್, ರಿಲಯನ್ಸ್ ನವಲ್, ರಿಲಯನ್ಸ್ ಹೋಮ್ ಫೈನಾನ್ಸ್ ಅನ್ನು ಅನಿಲ್ ಅಂಬಾನಿಯ ರಿಲಯನ್ಸ್ ಗ್ರೂಪ್ ಮುನ್ನಡೆಸಿತು. ವರದಿಗಳ ಪ್ರಕಾರ,ಅನಿಲ್ ಅಂಬಾನಿ ಪಟ್ಟು ಹಿಡಿದು ಟೆಲಿಕಾಂ ಉದ್ಯಮವನ್ನು ತಮ್ಮದಾಗಿಸಿಕೊಂಡರು. ಆ ಹೊತ್ತಿಗೆ ಟೆಲಿಕಾಂ ಉದ್ಯಮಕ್ಕೆ ಪ್ರಗತಿಗೆ ಭಾರೀ ಅವಕಾಶ ಇತ್ತು. ಆದರೆ ಹೊಸ ತಂತ್ರಜ್ಞಾನಕ್ಕೆ ಮೇಲ್ದರ್ಜೆಗೆ ಏರಲು ಆಗಲಿಲ್ಲ. 2020ನೇ ಇಸವಿಯಲ್ಲಿ ರಿಲಯನ್ಸ್ ಕಮ್ಯುನಿಕೇಷನ್ ನ ಸಾಲದ ಹೊರೆ 50 ಸಾವಿರ ಕೋಟಿ ಇದೆ. ಅಷ್ಟೇ ಅಲ್ಲ, ಅನಿಲ್ ನೇತೃತ್ವದಲ್ಲಿ ಇರುವ ಯಾವ ಉದ್ಯಮದ ಆರ್ಥಿಕ ಸ್ಥಿತಿಯೂ ಚೆನ್ನಾಗಿಲ್ಲ. ಎಲ್ಲಕ್ಕೂ ಸಾವಿರಾರು ಕೋಟಿ ರುಪಾಯಿ ಸಾಲ ಇದೆ.


Click it and Unblock the Notifications