ಭಾರತದ ಷೇರು ಮಾರುಕಟ್ಟೆಯೇನೋ ಮತ್ತೆ ಚೇತರಿಕೆ ಹಾದಿಯಲ್ಲಿದೆ. ಆದರೆ ಸಾರ್ವಜನಿಕ ಸ್ವಾಮ್ಯದ 12 ಬ್ಯಾಂಕ್ ಗಳಲ್ಲಿ 5ರ ಈಕ್ವಿಟಿ ಷೇರಿನ ದರವು ಅದರ ಮುಖಬೆಲೆಗಿಂತ ಕಡಿಮೆಗೆ ಅಥವಾ ಸಮೀಪದಲ್ಲಿ ವಹಿವಾಟಾಗುತ್ತಿವೆ. ಸಾರ್ವಜನಿಕ ಸ್ವಾಮ್ಯದ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಷೇರು ಅದರ ಮುಖಬೆಲೆಯಾದ 10 ರುಪಾಯಿಗಿಂತ ಕಡಿಮೆಗೆ ಬಿಎಸ್ ಇಯಲ್ಲಿ ವ್ಯವಹಾರ ನಡೆಸುತ್ತಿದೆ.
ಶುಕ್ರವಾರದಂದು (ಅಕ್ಟೋಬರ್ 9. 2020) 9.27 ರು.ಗೆ ದಿನದ ವಹಿವಾಟು ಮುಗಿಸಿದೆ. ಇನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳೇ ಆದ ಬ್ಯಾಂಕ್ ಆಫ್ ಮಹಾರಾಷ್ಟ್ರ, ಯುಕೋ ಬ್ಯಾಂಕ್, ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಅದರ ಮುಖಬೆಲೆ ಆದ 10 ರುಪಾಯಿಗೆ ಸಮೀಪದಲ್ಲಿ ವಹಿವಾಟು ನಡೆಸುತ್ತಿದೆ.
ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ ಪ್ರತಿ ಷೇರಿಗೆ 10.81 ರು., ಬ್ಯಾಂಕ್ ಆಫ್ ಮಹಾರಾಷ್ಟ್ರ 11.29 ರು., ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 12.45 ರು., ಯುಕೋ ಬ್ಯಾಂಕ್ 12.14 ರು., ನಲ್ಲಿ ಶುಕ್ರವಾರ ದಿನದ ವ್ಯವಹಾರವನ್ನು ಪೂರ್ತಿ ಮಾಡಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇಂಥ ಸ್ಥಿತಿ ಏರ್ಪಡಲು ಹಲವು ಕಾರಣಗಳಿವೆ.

ಆಸ್ತಿಯ ಗುಣಮಟ್ಟದ ಬಗ್ಗೆ ಆತಂಕ, ವ್ಯವಹಾರದಲ್ಲಿ ಇಳಿಕೆ ಇನ್ನಿತರ ಕಾರಣಗಳಿವೆ. ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ ಸರ್ಕಾರದ ಪಾಲು ಶೇ 95.84, ಯುಕೋ ಬ್ಯಾಂಕ್ ನಲ್ಲಿ 94.44, ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 93.33, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶೇ 92.39, ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ ನಲ್ಲಿ 83.06 ಪರ್ಸೆಂಟ್ ಪಾಲಿದೆ. ಇದು ಜೂನ್ 30, 2020ಕ್ಕೆ ಕೊನೆಯಾದ ತ್ರೈಮಾಸಿಕದ ಮಾಹಿತಿ.


Click it and Unblock the Notifications