2016 ರ ನವೆಂಬರ್ 8 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 500 ರೂಪಾಯಿ ಹಾಗೂ 1,000 ರೂಪಾಯಿಯ ನೋಟುಗಳನ್ನು ದೇಶದಲ್ಲಿ ಅಪನಗದೀಕರಣ ಮಾಡಿದ್ದು ನೋಟು ಅಪನಗದೀಕರಣ ಮಾಡಿ ಇಂದಿಗೆ ಐದು ವರ್ಷಗಳು ಆಗಿದೆ. ನೋಟುಗಳನ್ನು ಅಪನಗದೀಕರಣ ಮಾಡಿ ಹೊಸ ನೋಟನ್ನು ಚಾಲ್ತಿಗೆ ತರುವುದು ಸಾಮಾನ್ಯ. ನೋಟು ಅಪನಗದೀಕರಣವಾಗಿ ಐದು ವರ್ಷ ಕಳೆದಾಗ ಇದನ್ನು ಸಂಭ್ರಮಿಸುವ ಅಗತ್ಯವೂ ಇಲ್ಲ, ಅದರ ಬಗ್ಗೆ ಚರ್ಚೆ ನಡೆಸಬೇಕಾದ ವಿಚಾರವೂ ಬರುವುದಿಲ್ಲ.
ಆದರೆ 500 ರೂಪಾಯಿ ಹಾಗೂ 1,000 ರೂಪಾಯಿಯ ನೋಟುಗಳನ್ನು ದೇಶದಲ್ಲಿ ಬ್ಯಾನ್ ಮಾಡಿದ ಬಳಿಕ ಉಂಟಾದ ಕೆಲವು ಸಮಸ್ಯೆಗಳ ಕಾರಣದಿಂದಾಗಿ ಇಂದಿಗೂ ಕೂಡಾ ವಿರೋಧ ಪಕ್ಷಗಳ ವಾಗ್ದಾಳಿಗೆ ಗುರಿಯಾಗಿದೆ. ನೋಟು ಬ್ಯಾನ್ ಮಾಡಿದ ಬಳಿಕ ಆರ್ಥಿಕ ಪರಿಸ್ಥಿತಿಯಲ್ಲಿ ಕೆಲವು ಬದಲಾವಣೆ ಉಂಟಾಗಲಿದೆ ಎಂದು ಸರ್ಕಾರವು ಭರವಸೆಯನ್ನು ನೀಡಿದ್ದವು. ಆದರೆ ಪ್ರಸ್ತುತ ಈ ಬದಲಾವಣೆಗಳು ಆಗಿದೆಯೇ ಎಂಬ ಬಗ್ಗೆ ಅಧಿಕವಾಗಿ ಚರ್ಚೆ ನಡೆಯುತ್ತಿದೆ.
ಸರ್ಕಾರವು ಈ ನೋಟು ಅಪನಗದೀಕರಣ ಮಾಡಿದರೆ ಭ್ರಷ್ಟಾಚಾರ, ಭಯೋತ್ಪಾದನೆ ಕಡಿಮೆ ಆಗುತ್ತದೆ ಎಂದು ಹೇಳಿದ್ದವು. ಹಾಗೆಯೇ ಡಿಜಿಟಲ್ ವ್ಯವಸ್ಥೆಗೆ ಅಧಿಕ ಒತ್ತು ನೀಡುವುದು ಕೂಡಾ ಈ ಉದ್ದೇಶಗಳಲ್ಲಿ ಒಂದಾಗಿದೆ. ಆದರೆ ಈ ಮುಖ್ಯ ಗುರಿಯನ್ನು ಇಂದಿಗೂ ತಲುಪಲು ಸಾಧ್ಯವಾಗಿಲ್ಲ. ಆದರೆ ಉದ್ಯೋಗಿಗಳ ಭವಿಷ್ಯ ನಿಧಿ ಕಚೇರಿಯಲ್ಲಿ ಮೊದಲ ಬಾರಿಯ ಕೊಡುಗೆಗಳ ಪಾವತಿ ಸೇರಿದಂತೆ ಹೆಚ್ಚಿನ ನೋಂದಣಿಗಳು ನಡೆದಿವೆ. ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ ಕೂಡಾ ಅಧಿಕವಾಗಿದೆ.

ದೇಶದ ಆರ್ಥಿಕತೆ ಅಭಿವೃದ್ಧಿ ಆಗುತ್ತಿದೆಯೇ?
ಆದರೆ ಈ ನಡುವೆ ದೇಶದ ಆರ್ಥಿಕ ಪರಿಸ್ಥಿತಿ ಮಾತ್ರ ಅಭಿವೃದ್ಧಿ ಆಗುತ್ತಿಲ್ಲ ಎಂಬುವುದು ಸ್ಪಷ್ಟ ಎಂದು ತಜ್ಞರು ಹೇಳುತ್ತಾರೆ. ದೇಶದಲ್ಲಿ ತೆರಿಗೆ ಸಂಗ್ರಹವು ಅಧಿಕ ಆಗುತ್ತಿದೆ. ದೊಡ್ಡ ಉದ್ಯಮಗಳು ವಹಿವಾಟಿನಲ್ಲಿ ಲಾಭವನ್ನು ಪಡೆಯುತ್ತಿದೆ. ದೇಶದಲ್ಲಿ ನಿರುದ್ಯೋಗ ದರವು ಭಾರೀ ಏರಿಕೆ ಆಗುತ್ತಲೇ ಇದೆ. ಈ ನಡುವೆ ದೇಶದಲ್ಲಿ ಲೇಬರ್ ಪಾರ್ಟಿಸಿಪೇಷನ್ ಪ್ರಮಾಣವೂ ಕಡಿಮೆ ಆಗುತ್ತಿದೆ. ದೊಡ್ಡ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮಾರುಕಟ್ಟೆಗಳಿಗೆ ಪ್ರವೇಶವನ್ನು ಮಾಡಿದೆ. ಜನರನ್ನು ಅಧಿಕವಾಗಿ ಸೆಳೆಯುತ್ತಿದೆ. ಈ ಮೂಲಕ ಸಣ್ಣ ವ್ಯಾಪಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.
ನಾವು ಈ ನೋಟು ಅಪನಗದೀಕರಣದಿಂದಾಗಿ ಏನನ್ನು ಪಡೆದಿದ್ದೇವೆ ಎಂಬುವುದು ತಿಳಿದಿದೆ. ಆದರೆ ಏನನ್ನು ಕಳೆದುಕೊಂಡಿದ್ದೇವೆ ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ ಎಂಬಂತಾಗಿದೆ ಎಂದು ಕೂಡಾ ತಜ್ಞರು ತಿಳಿಸಿದ್ದಾರೆ. ನೋಟು ಅಪನಗದೀಕರಣ ನಡೆದು ಐದು ವರ್ಷಗಳು ಕಳೆದಿದೆ. ಆದರೆ ಈಗಲೂ ಕೂಡಾ ಸಾರ್ವಜನಿಕರಲ್ಲಿ ಅಂದರೆ ಜನರಲ್ಲಿ ಇರುವ ನಗದು ಪ್ರಮಾಣ (Cash with public) ಏರಿಕೆ ಆಗುತ್ತಲೇ ಇದೆ. 2016 ರ ನವೆಂಬರ್ 8 ರಂದು ದೇಶದಲ್ಲಿ ನೋಟು ಅಪನಗದೀಕರಣವಾದ ಬಳಿಕ ಏರಿಕೆ ಆಗುತ್ತಿರುವ ಜನರಲ್ಲಿ ಇರುವ ನಗದು ಪ್ರಮಾಣ ಈಗ ಸಾರ್ವಕಾಲಿಕ ಹೆಚ್ಚಳವಾಗಿದೆ.
ಆರ್‌ಬಿಐ ಪ್ರಕಾರ, ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿ (ಸಿಐಸಿ) ಯಿಂದ ಬ್ಯಾಂಕ್‌ಗಳಲ್ಲಿ ಹಣವನ್ನು ಕಡಿತಗೊಳಿಸಿದ ನಂತರ ಉಳಿಯುವ ಹಣವನ್ನು ಜನರಲ್ಲಿ ಇರುವ ನಗದು ಪ್ರಮಾಣ ಎಂದು ಪರಿಗಣಿಸಲಾಗುತ್ತದೆ. ಗ್ರಾಹಕರು ಮತ್ತು ವ್ಯವಹಾರಗಳ ನಡುವೆ ವಹಿವಾಟು ನಡೆಸಲು ಜನರು ಭೌತಿಕವಾಗಿ ಬಳಸುವ ನಗದನ್ನು ಮಾತ್ರ ಸಿಐಸಿ ಸೂಚಿಸುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಡೇಟಾದ ಪ್ರಕಾರವಾಗಿ ಈ ದೀಪಾವಳಿಗೂ ಮುನ್ನ ಅಕ್ಟೋಬರ್ 23, 2020 ಕ್ಕೆ ಕೊನೆಗೊಂಡ ಹದಿನೈದು ದಿನಗಳ ಅವಧಿಯಲ್ಲಿ ಜನರಲ್ಲಿ ಇರುವ ನಗದು ಪ್ರಮಾಣವು 15,582 ಕೋಟಿ ರೂ ಆಗಿತ್ತು. ಇದು ಶೇಕಡ 8.5 ರಷ್ಟು ಅಥವಾ 2.21 ಲಕ್ಷ ಕೋಟಿ ರೂಪಾಯಿ ಏರಿಕೆ ಕಂಡು ಬಂದಿದೆ.


Click it and Unblock the Notifications