ಸತತವಾಗಿ ಲಾಕ್ ಡೌನ್ ವಿಸ್ತರಣೆ ಕಾರಣಕ್ಕೆ ಖಜಾನೆ ಬರಿದು ಮಾಡಿಕೊಂಡಿರುವ ತೆಲಂಗಾಣ ಸರ್ಕಾರವು, ಅಲ್ಲಿನ ಸರ್ಕಾರಿ ಉದ್ಯೋಗಿಗಳಿಗೆ ಮೇ ತಿಂಗಳ ವೇತನದಲ್ಲಿ 50 ಪರ್ಸೆಂಟ್ ಕಡಿತ ಮಾಡಲು ನಿರ್ಧರಿಸಿದೆ. ಅಂದ ಹಾಗೆ ದೇಶದ ಎಲ್ಲ ರಾಜ್ಯಗಳ ಆದಾಯಕ್ಕೂ ಕೊರೊನಾ ಲಾಕ್ ಡೌನ್ ಕಾರಣಕ್ಕೆ ಬರೆ ಬಿದ್ದಿದೆ.
ಒಂದು ವೇಳೆ ಉದ್ಯೋಗಿಗಳ ಸಂಬಳ, ಪೆನ್ಷನ್ ನೀಡಿದರೆ ಖರ್ಚು ಮೂರು ಸಾವಿರ ಕೋಟಿಗೂ ಹೆಚ್ಚು ಬರುತ್ತದೆ. ಇಡೀ ಖಜಾನೆ ಬರಿದಾಗುತ್ತದೆ. ಆದ್ದರಿಂದ ಯಾವುದೇ ಪಾವತಿ ಮಾಡಲ್ಲ. ಯಾವ ಕೆಲಸವನ್ನೂ ಕೈಗೆತ್ತಿಕೊಳ್ಳಲ್ಲ. ಆದ್ದರಿಂದ ಸೂಕ್ತ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದ್ದೇವೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಹೇಳಿದ್ದಾರೆ.
ಯಾರ್ಯಾರಿಗೆ ಎಷ್ಟು ವೇತನ ಕಡಿತ?
ತೆಲಂಗಾಣ ಸರ್ಕಾರವು ಜನಪ್ರತಿನಿಧಿಗಳ ವೇತನದಲ್ಲಿ 75 ಪರ್ಸೆಂಟ್, ಅಖಿಲ ಭಾರತ ಸೇವೆಯಲ್ಲಿರುವ ಅಧಿಕಾರಿಗಳ ವೇತನದಿಂದ 60 ಪರ್ಸೆಂಟ್, ರಾಜ್ಯ ಸರ್ಕಾರಿ ನೌಕರರಿಂದ 50 ಪರ್ಸೆಂಟ್, ಪೆನ್ಷನ್ ದಾರರ ಪಿಂಚಣಿಯಲ್ಲಿ 25 ಪರ್ಸೆಂಟ್ ಹಾಗೂ ಹೊರಗುತ್ತಿಗೆ ಮತ್ತು ಗುತ್ತಿಗೆ ಸಿಬ್ಬಂದಿಯ 10 ವೇತನ ಕಡಿತಕ್ಕೆ ನಿರ್ಧರಿಸಲಾಗಿದೆ. ಮೇ ತಿಂಗಳ ವೇತನಕ್ಕೆ ಇದು ಅನ್ವಯ ಆಗುತ್ತದೆ.
ಬಡತನ ರೇಖೆಗಿಂತ ಕೆಳಗೆ ಇರುವವರಿಗೆ ನಗದು ನೀಡಲ್ಲ
ಬಡತನ ರೇಖೆಗಿಂತ ಕೆಳಗೆ ಇರುವವರಿಗೆ 1500 ರುಪಾಯಿ ನಗದು ನೀಡದಿರಲು ನಿರ್ಧರಿಸಲಾಗಿದೆ. ಲಾಕ್ ಡೌನ್ ನಿರ್ಬಂಧ ತೆರವಾದ ಮೇಲೆ ಕಾರ್ಮಿಕರಿಗೆ ಪ್ರತಿ ದಿನ ಕೆಲಸ ದೊರೆಯಲಿದೆ. ಆದ್ದರಿಂದ ಮೇ ತಿಂಗಳಿಂದ ನಗದು ನೆರವು ದೊರೆಯುವುದಿಲ್ಲ ಎಂದು ಕೆಸಿಆರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೂ ಮೇ ತಿಂಗಳಲ್ಲಿ ಹನ್ನೆರಡು ಕೇಜಿ ಉಚಿತ ಅಕ್ಕಿ ನೀಡಲಾಗುವುದು. ಇನ್ನು ಸಾಮಾಜಿಕ ಭದ್ರತೆ ಪಿಂಚಣಿಯನ್ನು ಸರ್ಕಾರ ಮುಂದುವರಿಸುತ್ತದೆ ಎಂದು ತಿಳಿಸಲಾಗಿದೆ.
ತಿಂಗಳಿಗೆ ಹನ್ನೆರಡು ಸಾವಿರ ಕೋಟಿ ಆದಾಯ ಬರಬೇಕು
ಕೆಸಿಆರ್ ಮಾತನಾಡಿ, ರಾಜ್ಯಕ್ಕೆ ಪ್ರತಿ ತಿಂಗಳು ಹನ್ನೆರಡು ಸಾವಿರ ಕೋಟಿ ಆದಾಯ ಬರಬೇಕು. ಆದರೆ ಲಾಕ್ ಡೌನ್ ನಿಂದ ಅದು ನಿಂತುಹೋಗಿದೆ. ಮೇ ತಿಂಗಳಲ್ಲಿ 3100 ಕೋಟಿ ರುಪಾಯಿ ಆದಾಯ ಬಂದಿದೆ. ಅದರಲ್ಲಿ 982 ಕೋಟಿ ರುಪಾಯಿ ರಾಜ್ಯ ಸರ್ಕಾರದ ಪಾಲಿನ ಕೇಂದ್ರದ ತೆರಿಗೆಯೂ ಸೇರಿದೆ ಎಂದು ತಿಳಿಸಿದ್ದಾರೆ.
37,400 ಕೋಟಿ ರುಪಾಯಿ ವರ್ಷಕ್ಕೆ ಸಲ ಮರುಪಾವತಿಸಬೇಕು
ಈ ಕನಿಷ್ಠ ಆದಾಯದಿಂದಲೇ ಎಲ್ಲ ಅಗತ್ಯಗಳನ್ನು ಪೂರೈಸಿದ್ದೇವೆ. ಒಂದು ವರ್ಷಕ್ಕೆ ರಾಜ್ಯದ ಸಾಲದ ಮೊತ್ತ 37,400 ಕೋಟಿ ಪಾವತಿಸಬೇಕು. ಈ ಕಂತುಗಳನ್ನು ಪ್ರತಿ ತಿಂಗಳೂ ಕಟ್ಟಬೇಕು. ಈ ಸಾಲದ ಕಂತುಗಳ ಪಾವತಿಗೆ ಸಮಯ ವಿಸ್ತರಣೆ ಕೊಡಿಸಬೇಕು ಎಂದು ಕೇಂದ್ರವನ್ನು ಕೇಳಲಾಗಿದೆ. ಆದರೆ ಈ ಬಗ್ಗೆ ಕೇಂದ್ರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಈ ಮೂಲಕ ಬೇರೆ ದಾರಿ ಇಲ್ಲ. ಕಂತನ್ನು ಪಾವತಿಸಲೇಬೇಕು. ರಾಜ್ಯಗಳ ಸಾಲ ಪಡೆಯುವ ಮಿತಿಯನ್ನು ಕೇಂದ್ರವು ವಿಸ್ತರಿಸಿದೆ. ಆದರೆ ನಿಬಂಧನೆಗಳನ್ನು ವಿಧಿಸಿರುವ ಕಾರಣಕ್ಕೆ ಸಾಲ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ ಕೆ. ಚಂದ್ರಶೇಖರ್ ರಾವ್.


Click it and Unblock the Notifications