ಇದು ಯಾರದ್ದೋ ಕಂಪನಿಯಲ್ಲಿ ನೌಕರನಾಗಿ ದುಡಿಯುತ್ತಾ, ತನ್ನದೇ ಸ್ವಂತ ಬಿಸಿನೆಸ್ ಮಾಡಬೇಕೆಂಬ ಕನಸು ಕಂಡು ಕೆಲಸ ತೊರೆದು ಕನಸು ನನಸು ಮಾಡಲು ಪಟ್ಟ ಶ್ರಮ ವ್ಯಕ್ತಿಯ ಸ್ಪೂರ್ತಿದಾಯಕ ಕಥೆಯಾಗಿದೆ. ಪ್ರತಿಯೊಬ್ಬರೂ ಮುಂದೊಂದು ದಿನ ತಮ್ಮೊಂದೊಂದು ಸ್ವಂತ ವ್ಯವಹಾರ ಹೊಂದಿರಬೇಕು ಎಂದು ಕನಸು ಕಾಣುತ್ತಾರೆ. ಆದರೆ ಅದನ್ನು ನನಸಾಗಿಸುವಲ್ಲಿ ಕೆಲವರು ಮಾತ್ರ ಯಶಸ್ವಿ ಕಾಣುತ್ತಾರೆ. 86,000 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಏಷ್ಯಾದ ಅತಿದೊಡ್ಡ ಔಷಧೀಯ ಕಂಪನಿಗಳಲ್ಲಿ ಒಂದಾದ ಮ್ಯಾನ್‌ಕೈಂಡ್ ಫಾರ್ಮಾದ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿರುವ ರಮೇಶ್ ಜುನೇಜಾ ಇಂತಹ ಅದ್ಬುತ ಸಾಧನೆಗೆ ಉದಾಹರಣೆಯಾಗಿದ್ದಾರೆ.
ಮ್ಯಾನ್‌ಕೈಂಡ್ ಫಾರ್ಮಾ ಪ್ರಮುಖ ಕಚೇರಿ ದೆಹಲಿಯಲ್ಲಿದ್ದು, ರಾಷ್ಟ್ರದಾದ್ಯಂತ 25 ಪ್ರೋಡಕ್ಷನ್ ಸೈಟ್ ಗಳನ್ನು ಹೊಂದುವುದರ ಜೊತೆಗೆ ಹೆಚ್ಚಿನ ಸಂಖ್ಯೆಯ ವಿಜ್ಞಾನಿಗಳನ್ನು ತನ್ನ ಕಂಪನಿಯಲ್ಲಿ ನೇಮಿಸಿಕೊಂಡಿದೆ.

ರಮೇಶ್ ಜುನೇಜಾ ಅವರು ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತರ, 1974 ರಲ್ಲಿ ವೈದ್ಯಕೀಯ ಪ್ರತಿನಿಧಿಯಾಗಿ ಕೀಫಾರ್ಮಾದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದಾದ ಬಳಿಕ1975 ರಲ್ಲಿ ಅವರು ಲುಪಿನ್ ಲಿಮಿಟೆಡ್‌ಗೆ ಫಸ್ಟ್ ಲೈನ್ ಮ್ಯಾನೆಜರ್ ಆಗಿ ಸೇರ್ಪಡೆಗೊಂಡರು. ಅಲ್ಲಿ ಅವರು ಸುಮಾರು 8 ವರ್ಷಗಳ ಕಾಲ ಕೆಲಸ ಮಾಡಿದರು. ರಮೇಶ್ ಅವರು ಔಟ್ ಆಫ್ ದಿ ಬಾಕ್ಸ್ ಯೋಚಿಸುತ್ತಿದ್ದರು. ಈ ಕಾರಣ ಲುಪಿನ್‌ನಲ್ಲಿ ಸುಮಾರು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಅವರು ತಮ್ಮ ಸ್ವಂತ ವ್ಯವಹಾರವನ್ನು ಆರಂಭಿಸಲು ಸಂಸ್ಥೆ ತೊರೆದರು.
1995 ರಲ್ಲಿ, ಅವರು ತಮ್ಮ ಸಹೋದರ ರಾಜೀವ್ ಜುನೇಜಾ ಅವರೊಂದಿಗೆ ಸೇರಿ 50 ಲಕ್ಷ ರೂ. ಬಂಡವಾಳದೊಂದಿಗೆ 25 ವೈದ್ಯಕೀಯ ಪ್ರತಿನಿಧಿಗಳ ತಂಡದೊಂದಿಗೆ ಮ್ಯಾನ್‌ಕೈಂಡ್ ಫಾರ್ಮಾವನ್ನು ಸ್ಥಾಪಿಸಿದರು. ಈಗ, ಮ್ಯಾನ್‌ಕೈಂಡ್ ಭಾರತದಲ್ಲಿ ವೈದ್ಯಕೀಯ ಪ್ರತಿನಿಧಿಗಳ ಅತಿದೊಡ್ಡ ಜಾಲವನ್ನು ಹೊಂದಿದೆ.
ಕಾಲೇಜು ಡ್ರಾಪ್ಔಟ್ ಆಗಿರುವ ಅವರ ಸಹೋದರ ರಾಜೀವ್ ಜುನೇಜಾ ಅವರಿಗೂ ಮ್ಯಾನ್‌ಕೈಂಡ್ ಫಾರ್ಮಾದ ಯಶಸ್ಸು ಸಲ್ಲುತ್ತದೆ. ಇವರು ತಮ್ಮ ತಂಡದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಮೇಶ್ ಜುನೇಜಾ ಅವರ ಪುತ್ರ ಅರ್ಜುನ್ ಜುನೇಜಾ ಅವರು ಉತ್ಪಾದನೆ ಮತ್ತು ಆರ್ & ಡಿ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ಅವರ ಪುತ್ರಿ ಶೀತಲ್ ಅರೋರಾ ಸ್ತ್ರೀರೋಗ ಶಾಸ್ತ್ರ ಮತ್ತು ಚರ್ಮರೋಗ ಔಷಧಗಳ ಮಾರುಕಟ್ಟೆ ವಿಭಾಗವಾದ ಲೈಫ್‌ಸ್ಟಾರ್ ಅನ್ನು ನಿರ್ವಹಿಸುತ್ತಿದ್ದಾರೆ.
ಫೋರ್ಬ್ಸ್ ಪ್ರಕಾರ, ರಮೇಶ್ ಮತ್ತು ರಾಜೀವ್ ಜುನೇಜಾ ಮತ್ತು ಕುಟುಂಬ $6.9 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದೆ. ಕಂಪನಿಯು 36 ವಿಶಿಷ್ಟ ಬ್ರಾಂಡ್ಗಳಲ್ಲಿ ಸಾವಿರಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತದೆ. ಈ ಮೂಲಕ ನೋವು ನಿವಾರಣೆ, ಸೋಂಕು ನಿಯಂತ್ರಣ, ಹೃದಯ ಕಾಯಿಲೆಗಳು ಮತ್ತು ಮಧುಮೇಹ ನಿರ್ವಹಣೆಯಂತಹ ವಿವಿಧ ವೈದ್ಯಕೀಯಕ್ಕೆ ಸಂಬಂಧಿಸಿದ ಅಗತ್ಯಗಳನ್ನು ಪರಿಹರಿಸುವಲ್ಲಿ ಕೆಲಸ ಮಾಡುತ್ತದೆ.


Click it and Unblock the Notifications