ನರೇಂದ್ರ ಮೋದಿ ಸರ್ಕಾರ ಸರ್ಕಾರಿ ನೌಕರರು (Government employee) ಪಿಂಚಣಿದಾರರಿಗೆ ದೊಡ್ಡ ಸಿಹಿ ಸುದ್ದಿ ನೀಡಿದೆ.ಬಜೆಟ್ ಮಂಡನೆಗೂ ಮುನ್ನವೇ 8ನೇ ವೇತನ ಆಯೋಗ (8th Pay Commission) ರಚನೆಗೆ ಒಪ್ಪಿಗೆ ನೀಡಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ಬಹುದಿನದ ಬೇಡಿಕೆಗೆ ಮೋದಿ ಸರ್ಕಾರ (Modi government) ಗ್ರೀನ್ ಸಿಗ್ನಲ್ ಕೊಟ್ಟಿದೆ.
ಹೌದು,ಕೇಂದ್ರ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿಗಳ ಪರಿಷ್ಕರಣೆಗೆ 8ನೇ ವೇತನ ಆಯೋಗ ರಚನೆಯಾಗಲಿದೆ. ವೇತನ ಆಯೋಗ ರಚನೆ ಕುರಿತ ಪ್ರಕ್ರಿಯೆಗಳನ್ನು ನಡೆಸಲು ಸಮಿತಿ ರಚನೆ ಮಾಡಲು ಕೇಂದ್ರ ಸರ್ಕಾರ ಗುರುವಾರ ಒಪ್ಪಿಗೆಯನ್ನು ಸೂಚಿಸಿದೆ ಎಂದು ಕೇಂದ್ರ ರೈಲ್ವೆ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ನಿರ್ಧಾರಕ್ಕಾಗಿ ಲಕ್ಷಾಂತರ ಕೇಂದ್ರ ಸರಕಾರಿ ನೌಕರರು ಮತ್ತು ಪಿಂಚಣಿದಾರರು ಕಾತರದಿಂದ ಕಾಯುತ್ತಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಈ ಸಂಬಂಧ ನಿರ್ಧಾರ ಕೈಗೊಂಡಿದೆ.
ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಈ ಕ್ರಮಕ್ಕಾಗಿ ಕಾಯುತ್ತಿದ್ದಾರೆ, ಅವರು ತಮ್ಮ ಮೂಲ ವೇತನ, ಭತ್ಯೆಗಳು, ಪಿಂಚಣಿ ಮತ್ತು ಇತರ ಪ್ರಯೋಜನಗಳನ್ನು ಪರಿಷ್ಕರಿಸಲು ಆಯೋಗವನ್ನು ರಚಿಸುವ ನಿರೀಕ್ಷೆಯಲ್ಲಿದ್ದಾರೆ. 2026ರ ವೇಳೆಗೆ ಆಯೋಗ ರಚನೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ ಮಾಡಿದ್ದಾರೆ.
ಪ್ರತಿ 10 ವರ್ಷಗಳಿಗೊಮ್ಮೆ ಸರ್ಕಾರ ವೇತನ ಆಯೋಗ ರಚನೆ ಮಾಡಬೇಕು. ವೇತನ ಆಯೋಗ ಕೇಂದ್ರ ಸರ್ಕಾರಿ ನೌಕರರ ವೇತನ, ಭತ್ಯೆ, ನಿವೃತ್ತ ನೌಕರರ ಪಿಂಚಣಿ ಪರಿಷ್ಕರಣೆ ಕುರಿತು ವರದಿ ನೀಡಲಿದೆ. ಈ ವರದಿ ಆಧರಿಸಿ ಸರ್ಕಾರ ವೇತನ, ಭತ್ಯೆ ಮತ್ತು ಪಿಂಚಣಿ ಹೆಚ್ಚಳ ಮಾಡಲಿದೆ. ಸದ್ಯ 2016ರಲ್ಲಿ ಜಾರಿಗೆ ಬಂದ 7ನೇ ವೇತನ ಆಯೋಗದ ವರದಿ ಅನ್ವಯ ನೌಕರರು ವಿವಿಧ ಸೌಲಭ್ಯವನ್ನು ಪಡೆಯುತ್ತಿದ್ದಾರೆ.
ಕೇಂದ್ರ ಸರ್ಕಾರಿ ನೌಕರರು, ನೌಕರರ ಸಂಘಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್‌ಗೆ 8ನೇ ವೇತನ ಆಯೋಗ ರಚನೆ ಮಾಡಬೇಕು ಎಂದು ಮನವಿ ಸಲ್ಲಿಕೆ ಮಾಡಿದ್ದವು. ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಸರ್ಕಾರ 8ನೇ ವೇತನ ಆಯೋಗ ರಚನೆಗೆ ಸಮಿತಿ ರಚಿಸಲು ಒಪ್ಪಿಗೆ ಕೊಟ್ಟಿದೆ.
8ನೇ ವೇತನ ಆಯೋಗ ಯಾವಾಗ ಬಂತು?
ಕೇಂದ್ರ ಸರ್ಕಾರಿ ನೌಕರರ ವೇತನ ಶ್ರೇಣಿಗಳು, ಭತ್ಯೆಗಳು ಮತ್ತು ಪ್ರಯೋಜನಗಳಿಗೆ ಬದಲಾವಣೆಗಳನ್ನು ಪರಿಶೀಲಿಸಲು ಮತ್ತು ಶಿಫಾರಸು ಮಾಡಲು ಕೇಂದ್ರೀಯ ವೇತನ ಆಯೋಗಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ರಚನೆ ಮಾಡಬೇಕು. ಆದರೆ ಈ ಆಯೋಗಗಳು ಹಣದುಬ್ಬರ ಮತ್ತು ಆರ್ಥಿಕ ಪರಿಸ್ಥಿತಿಗಳಂತಹ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಫೆಬ್ರವರಿ 28, 2014 ರಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಚಿಸಿದ 7 ನೇ ವೇತನ ಆಯೋಗವು ತನ್ನ ವರದಿಯನ್ನು ನವೆಂಬರ್ 19, 2015 ರಂದು ಸಲ್ಲಿಸಿತು, ಶಿಫಾರಸುಗಳನ್ನು ಜನವರಿ 1, 2016 ರಿಂದ ಜಾರಿಗೆ ತರಲಾಯಿತು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಜನವರಿ 2016ರಲ್ಲಿ 7ನೇ ಕೇಂದ್ರ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಿದೆ. ಸದ್ಯ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಈ ಆಯೋಗದ ವರದಿ ಅನ್ವಯವೇ ವೇತನ, ಭತ್ಯೆ, ಪಿಂಚಣಿಯನ್ನು ಪಡೆಯುತ್ತಿದ್ದಾರೆ. ಈಗ ಜನವರಿ 1, 2025ರಿಂದಲೇ ಜಾರಿಗೆ ಬರುವಂತೆ ಹೊಸ ವೇತನ ಆಯೋಗ ರಚನೆಯಾಗಲಿದೆ.
2024ರ ಲೋಕಸಭೆ ಚುನಾವಣೆ ಮುಗಿದು ಎನ್‌ಡಿಎ 3.0 ಸರ್ಕಾರ ಅಧಿಕಾರಕ್ಕೆ ಬಂದಿತು. ಆಗ ಮಂಡನೆಯಾದ 2024-25 ಪೂರ್ಣ ಪ್ರಮಾಣದ ಬಜೆಟ್‌ನಲ್ಲಿಯೇ 8ನೇ ವೇತನ ಆಯೋಗ ರಚನೆ ಘೋಷಣೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಯಾವುದೇ ಘೋಷಣೆಯನ್ನು ಸರ್ಕಾರ ಮಾಡಿರಲಿಲ್ಲ. ಇದರಿಂದಾಗಿ ನೌಕರರಿಗೆ ನಿರಾಸೆಯಾಗಿತ್ತು.
ಭಾರೀ ಬೇಡಿಕೆಯ ನಡುವೆ ಆಯೋಗ ರಚನೆ
2026ರ ಜನವರಿಯಿಂದ ವೇತನವನ್ನು ಪರಿಷ್ಕರಿಸಲು 8ನೇ ವೇತನ ಆಯೋಗವನ್ನು ಶೀಘ್ರವಾಗಿ ರಚಿಸಬೇಕು ಎಂಬ ಒತ್ತಡವಿತ್ತು. ನೌಕರರ ಸಂಘಗಳು ಮತ್ತು ಸಿಬ್ಬಂದಿ ಸಂಘಗಳ ನಿರಂತರ ಬೇಡಿಕೆಗಳ ನಡುವೆ ಅಶ್ವಿನಿ ವೈಷ್ಣವ್ ಅವರು ಗುರುವಾರ ಈ ಘೋಷಣೆ ಮಾಡಿದ್ದಾರೆ.


Click it and Unblock the Notifications