ಬೆಂಗಳೂರು: ರಾಜ್ಯ ಉನ್ನತ ಮಟ್ಟದ 64ನೇ ಒಪ್ಪಿಗೆ ನೀಡಿಕೆ ಸಭೆಯಲ್ಲಿ ರಾಜ್ಯದ ವಿವಿಧ ಕೈಗಾರಿಕಾ ವಲಯಗಳಲ್ಲಿ ಒಟ್ಟು ರೂ. 9,823 ಕೋಟಿ ಮೊತ್ತದ ಬಂಡವಾಳ ಹೂಡಿಕೆಯ ಒಂಬತ್ತು ಯೋಜನೆಗಳ ಪ್ರಸ್ತಾವನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ.
ಹೌದು, ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ ಒಂಬತ್ತು ಯೋಜನೆಗಳ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಇದರಿಂದ ರಾಜ್ಯದಲ್ಲಿ 5,605 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಘೋಷಣೆ ಮಾಡಿದ್ದಾರೆ.

ಸೆಮಿಕಂಡಕ್ಟರ್ ವಲಯದಲ್ಲಿ ಹೆಚ್ಚಿನ ಹೂಡಿಕೆ
ಕೋಚನಹಳ್ಳಿಯ ಎಲೆಕ್ಟ್ರಾನಿಕ್ಸ್ ಮ್ಯಾನುಫಾಕ್ಚರಿಂಗ್ ಕ್ಲಸ್ಟರ್ ನಲ್ಲಿ ಸೆಮಿಕಂಡಕ್ಟರ್ ವಲಯದಲ್ಲಿ ರೂ. 3,425 ಕೋಟಿ ವೆಚ್ಚದ ಪ್ರಥಮ ಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.ಇದರಲ್ಲಿ ಅನುಮೋದನೆ ಪಡೆದ ಯೋಜನೆಗಳಲ್ಲಿ ಡಿ.ಎನ್.ಸೊಲ್ಯೂಷನ್ಸ್ನ 998 ಕೋಟಿ (ಐಟಿಐಆರ್, ದೇವನಹಳ್ಳಿ), ಮತ್ತು ಸನ್ಸೆರಾ ಇಂಜಿನಿಯರಿಂಗ್ ಸಂಸ್ಥೆಯ 2150 ಕೋಟಿ (ಹಾರೋಹಳ್ಳಿ) ಹೂಡಿಕೆ ಯೋಜನೆಗಳು ಹೊಸದಾಗಿವೆ. ಇವುಗಳಿಂದ ಕ್ರಮವಾಗಿ 467, 460 ಮತ್ತು 3,500 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಕ್ಕರೆ ಕಾರ್ಖಾನೆಗಳ ಉತ್ಪನ್ನಗಳಲ್ಲಿ ರೈತರಿಗೆ ಲಾಭಾಂಶದ ಪಾಲು
ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನಗಳ ಉತ್ಪಾದನೆಯಲ್ಲೂ ರೈತರಿಗೆ ಲಾಭಾಂಶದ ಪಾಲು ನೀಡುವ ಕುರಿತು ಪರಿಶೀಲಿಸಲಾಗುವುದು. ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಈ ಕುರಿತು ಅನುಸರಿಸುತ್ತಿರುವ ನಿಯಮಗಳನ್ನು ಪರಿಶೀಲಿಸಲು ಸೂಚನೆ ನೀಡಲಾಯಿತು. ಕೈಗಾರಿಕೆಗಳು ಸರ್ಕಾರದ ನಿಯಮಗಳಿಗೆ ತಕ್ಕಂತೆಯೇ ಕಾರ್ಯ ನಿರ್ವಹಿಸುವುದನ್ನು ಖಾತ್ರಿಪಡಿಸಿಕೊಳ್ಳಲಾಗುವುದು ಎಂದು ಸಿಎಂ ವಿವರಿಸಿದ್ದಾರೆ.
ಕೈಗಾರಿಕೆಯನ್ನು ಆರಂಭಿಸದಿದ್ದರೆ ದಂಡ
ಕೆಐಎಡಿಬಿಯಿಂದ ಕೈಗಾರಿಕೆಗಳನ್ನು ಆರಂಭಿಸಲು ಜಮೀನು ಪಡೆಯುವ ಕಂಪೆನಿಗಳು ನಿಗದಿತ ಅವಧಿಯಲ್ಲಿ ಕೈಗಾರಿಕೆಯನ್ನು ಆರಂಭಿಸದಿದ್ದರೆ ದಂಡ ವಿಧಿಸುವುದು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಪರಿಶೀಲನೆ ನಡೆಸಲು ಸೂಚಿಸಲಾಯಿತು.ಸೆಮಿಕಂಡಕ್ಟರ್ ವಲಯದ ಪ್ರಥಮ ಯೋಜನೆಯು ಮೈಸೂರಿನ ಬಳಿಕ ಕೋಚನಹಳ್ಳಿಯ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ನಲ್ಲಿ ಅಸ್ತಿತ್ವಕ್ಕೆ ಬರಲಿದೆ. ಸರ್ಕಾರದ ನಿಯಮಾವಳಿಗೆ ಅನುಸಾರವಾಗಿ ಕೈಗಾರಿಕೆಗಳು ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸಲಾಗುವುದು ಎಂದು ಹೇಳಿದ್ದರು.
ಸಚಿವರಾದ ಎಂ.ಬಿ.ಪಾಟೀಲ್, ಕೆ.ಎಚ್.ಮುನಿಯಪ್ಪ, ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ.ನಾರಾಯಣಸ್ವಾಮಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


Click it and Unblock the Notifications