ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಆರಂಭವಾದ ಉದ್ಯೋಗ ಕಡಿತ ಪ್ರಕ್ರಿಯೆಯು ಇನ್ನು ಕೂಡಾ ಮುಗಿದಿಲ್ಲ. 2024ರಲ್ಲಿಯೂ ಹಲವಾರು ಮಂದಿ ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಎಲ್ಲ ಸಾಧ್ಯತೆಗಳಿದೆ. ಜನವರಿ 1ರಿಂದ ಜನವರಿ 23ರ ವರೆಗೆ ಸುಮಾರು 900 ಟೆಕ್ ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ವರದಿ ಹೇಳುತ್ತದೆ.
ಉದ್ಯೋಗಕಾಂಕ್ಷಿಗಳಿಗೆ ಹೊಸ ವರ್ಷವು ಕೊಂಚ ಕಹಿಯಾಗಿಯೇ ಉಳಿದಿದೆ. ಅದರಲ್ಲೂ ಮುಖ್ಯವಾಗಿ ಐಟಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಸಂಕಷ್ಟದಲ್ಲಿದ್ದಾರೆ. ಅಮೆಜಾನ್, ಟಿಕ್‌ಟಾಕ್, ಎಚ್‌ಪಿ, ಗೂಗಲ್‌ನಂತಹ ಸಂಸ್ಥೆಗಳು ಹಲವಾರು ಹಂತಗಳಲ್ಲಿ ಲೇಆಫ್ ಮಾಡುತ್ತಿದೆ.

ಮೂರನೇ ತ್ರೈಮಾಸಿಕ ವರದಿಯನ್ನು ನಾವು ನೋಡಿದಾಗ ಟಿಸಿಎಸ್, ಇನ್ಪೋಸಿಸ್, ವಿಪ್ರೋದಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗಿರುವುದನ್ನು ನೋಡಬಹುದಾಗಿದೆ. ಈ ನಡುವೆ ಉದ್ಯೋಗಕಾಂಕ್ಷಿಗಳು ಮುಖ್ಯವಾಗಿ ಹೊಸದಾಗಿ ಉದ್ಯೋಗ ಹುಡುಕುವವರು ಆತಂಕದಲ್ಲಿದ್ದಾರೆ.
ಲೇಆಫ್.ಫೈ ಡೇಟಾ ಪ್ರಕಾರ 63 ಟೆಕ್ ಕಂಪನಿಗಳು ಜನವರಿಯಲ್ಲಿ ಈವರೆಗೆ ಸುಮಾರು 10,963 ಉದ್ಯೋಗಿಗಳನ್ನು ವಜಾಗೊಳಿಸಿದೆ. ಟ್ರುಅಪ್.ಐಒ ಪ್ರಕಾರ 2024ರಲ್ಲಿ ಈವರೆಗೆ 133 ಸಂಸ್ಥೆಗಳಲ್ಲಿ ಉದ್ಯೋಗ ಕಡಿತ ಮಾಡಲಾಗಿದ್ದು ಇದರ ಪ್ರಭಾವ 22,016 ಮಂದಿಯ ಮೇಲೆ ಬೀರಿದೆ. ಅದರ ಪ್ರಕಾರ ಈವರೆಗೆ ಪ್ರತಿ ದಿನ 957 ಮಂದಿ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ.
ಇನ್ನು ಟ್ರೂಅಪ್ ಡೇಟಾ ಪ್ರಕಾರ ಹೊಸದಾಗಿ ಟಿಕ್‌ಟಾಕ್, ಗೂಗಲ್, ಎಕ್ಸ್‌ನ್‌ಡಿಕ್, ವೆರಿಂಟ್, ಅಮೆಜಾನ್, ನೆಕ್ಸಾನ್‌ನಲ್ಲಿ ಉದ್ಯೋಗ ಕಡಿತವಾಗಿದೆ. 2023ರ ಡಿಸೆಂಬರ್ ಮತ್ತು ನವೆಂಬರ್‌ನಲ್ಲಿ ಕ್ರಮವಾಗಿ 16,945 ಮತ್ತು 16,875 ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಹೋಲಿಕೆ ಮಾಡಿದಾಗ ಜನವರಿಯಲ್ಲಿ ಭಾರೀ ಪ್ರಮಾಣದಲ್ಲಿ ಲೇಆಫ್ ಆಗಿದೆ.
ಎಲ್ಲಿ ಅಧಿಕ ಉದ್ಯೋಗ ಕಡಿತ
ಕೋವಿಡ್ ಬಳಿಕ ಅತೀ ಅಧಿಕ ಉದ್ಯೋಗ ಕಡಿತವನ್ನು ಫೇಸ್‌ಬುಕ್‌ನಲ್ಲಿ ಮಾಡಲಾಗಿದೆ. ಇಲ್ಲಿ 22000 ಮಂದಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಅದಾದ ಬಳಿಕ ಅಮೆಜಾನ್ (19,000), ಗೂಗಲ್ (12,000) ಮತ್ತು ಮೈಕ್ರೋಸಾಫ್ಟ್‌ನಲ್ಲಿ (10,000) ಅಧಿಕ ವಜಾ ಪ್ರಕ್ರಿಯೆ ಮಾಡಲಾಗಿದೆ.
ಎಐನಿಂದಾಗಿ ಉದ್ಯೋಗ ಕಡಿತ
ಈಗಾಗಲೇ ಕೋವಿಡ್ ಸಾಂಕ್ರಾಮಿಕ ಬಳಿಕ ವೆಚ್ಚ ಅಧಿಕವಾಗಿದೆ ಎಂಬ ಕಾರಣ ನೀಡಿ ಉದ್ಯೋಗ ಕಡಿತವನ್ನು ಮಾಡುತ್ತಾ ಬರಲಾಗುತ್ತಿದೆ. ಆದರೆ ಈ ಕೃತಕ ಬುದ್ಧಿಮತ್ತೆ (ಎಐ) ಉದ್ಯೋಗಿಗಳಿಗೆ ಸಂಕಷ್ಟ ತಂದುಬಿಟ್ಟಿದೆ. ಅದು ಕೂಡಾ ಮುಖ್ಯವಾಗಿ ಐಟಿ ಉದ್ಯೋಗಿಗಳಿಗೆ!
ಡಿಸೆಂಬರ್ 2023 ರಲ್ಲಿ, ಪ್ರಮುಖ ಎಐ-ದೈತ್ಯ ಎನ್ವಿಡಿಯಾ ಡೇಟಾ ಸೆಂಟರ್ ಜಿಪಿಯು ವಿಭಾಗದಲ್ಲಿ 92% ಮಾರುಕಟ್ಟೆ ಪಾಲನ್ನು ಹೊಂದಿದೆ ಎಂದು ತಿಳಿದುಬಂದಿದೆ. ಆದರೆ ಮೈಕ್ರೋಸಾಫ್ಟ್ ಓಪನ್ ಎಐ ಜೊತೆಗೆ ಪ್ಲಾಟ್‌ಫಾರ್ಮ್ ಮಾರ್ಕೆಟ್ ಮತ್ತು ಪ್ಲಾಟ್‌ಫಾರ್ಮ್‌ಗಳ ಮಾರುಕಟ್ಟೆಯಲ್ಲಿ 69% ಅನ್ನು ಹೊಂದಿದೆ. ಇದಲ್ಲದೆ, ಆಕ್ಸೆಂಚರ್ 6% ಪಾಲನ್ನು ಹೊಂದಿರುವ ಸೇವಾ ಮಾರುಕಟ್ಟೆಯಲ್ಲಿ ಲೀಡರ್ ಆಗಿ ಹೊರಹೊಮ್ಮಿದೆ.
ಭಾರತೀಯ ಟೆಕ್ ಕಂಪನಿಗಳಲ್ಲಿ ಉದ್ಯೋಗಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಣಕಾಸು ವರ್ಷ 2024ರ ಮೂರನೇ ತ್ರೈಮಾಸಿಕದಲ್ಲಿ ಅಜೀಂ ಪ್ರೇಮ್‌ಜಿ ನೇತೃತ್ವದ ವಿಪ್ರೋ ಕಂಪನಿಯಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ 4,473 ಕಡಿತವಾದರೆ, ಟಿಸಿಎಸ್‌ನಲ್ಲಿ 5,680 ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಇನ್ಫೋಸಿಸ್‌ನಲ್ಲಿ 6,101 ಉದ್ಯೋಗಿಗಳ ಸಂಖ್ಯೆ ಇಳಿಕೆಯಾಗಿದೆ. ಕ್ಟೋಬರ್‌ನಿಂದ ಡಿಸೆಂಬರ್ ನಡುವೆ ಭಾರತೀಯ ಐಟಿ ಕಂಪನಿಗಳು 16,254 ಮಂದಿಯನ್ನು ವಜಾಗೊಳಿಸಿದೆ.


Click it and Unblock the Notifications