ಬೆಂಗಳೂರು ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಿರುವ ನಗರವೆನ್ನಬಹುದು. ಈಗಾಗಲೇ ಸಿಲಿಕಾನ್ ಸಿಟಿಯಲ್ಲಿ ಎರಡನೇ ಏರ್ಪೋರ್ಟ್, ಸ್ಕೈ ಟವರ್ ನಿರ್ಮಾಣ, ಮೆಟ್ರೋ ವಿಸ್ತರಣೆ ಹೀಗೆ ಹಲವು ಮೂಲಸೌಕರ್ಯ ಅಭಿವೃದ್ದಿಗಳು ಆಗ್ಗಾಗ್ಗೆ ಜನಸಾಮಾನ್ಯರ ಗಮನ ಸೆಳೆಯುತ್ತಿದೆ. ಇದೇ ರೀತಿ ಬೆಂದಕಾಳೂರಿನಲ್ಲಿ ಸುಮಾರು ೨೫ ಎಕ್ರೆ ಪ್ರದೇಶದಲ್ಲಿ ಹೊಸತೊಂದು ನಗರ ನಿರ್ಮಾಣವಾಗಲಿದೆ.ಇದು ಎಲ್ಲಿ ನಿರ್ಮಾಣವಾಗಲಿದೆ, ಇದರ ವಿಶೇಷತೆ ಏನು ಎಂಬ ಕುರಿತು ಕುತೂಹಲವಿದ್ದರೆ ಈ ಸ್ಟೋರಿ ಓದಲೇಬೇಕು..
ರಾಜ್ಯ ಸರ್ಕಾರ 25 ಎಕ್ರೆಯಲ್ಲಿ "ವಿಜ್ಞಾನ ನಗರ" (Science City) ವನ್ನು ನಿರ್ಮಿಸಲು ಯೋಜಿಸಿದ್ದು ಹೂಡಿಕೆಗಳನ್ನು ಆಕರ್ಷಿಸುವ ಉದ್ದೇಶವೂ ಈ ಯೋಜನೆಗಿದೆ ಎನ್ನಲಾಗಿದೆ. ಸರ್ಕಾರದ ಸದ್ಯದ ಪ್ರಸ್ತಾವನೆಯ ಪ್ರಕಾರ, ವಿಜ್ಞಾನ ನಗರಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ದೇವನಹಳ್ಳಿಯಲ್ಲಿ ಸ್ಥಳಾವಕಾಶವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪರಿಗಣಿಸುತ್ತಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಸೈನ್ಸ್ ಮ್ಯೂಸಿಯಂನ ವಿಜ್ಞಾನದ ಸಂಸ್ಕೃತಿಯನ್ನು ಉತ್ತೇಜಿಸುವ ಯೋಜನೆಯಡಿ (SPoCS) ಇದನ್ನು ಕೈಗೆತ್ತಿಕೊಳ್ಳಲಾಗುವುದು.

ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ವಿಜ್ಞಾನ ತಂತ್ರಜ್ಞಾನ ಇಲಾಖೆ(Department of Science & Technology)ಯ ಪ್ರಗತಿ ಪರೀಶಿಲನಾ ಸಭೆಯಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು "ಸೈನ್ಸ್ ಸಿಟಿ" ನಿರ್ಮಾಣದ ಬಗ್ಗೆ ವಿಚಾರಿಸಿ ಶೀಘ್ರದಲ್ಲಿ ಬೆಂಗಳೂರು ನಗರದಲ್ಲಿ ವಿಜ್ಞಾನ ನಗರ ಸ್ಥಾಪನೆಗೆ ಹಂಚಿಕೆ ಮಾಡಲಾದ 25 ಎಕರೆ ಭೂಮಿಯನ್ನು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಗೆ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
232 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಫ್ಯಾನ್ಸಿ ಸೈನ್ಸ್ ಸಿಟಿ
ವಿಜ್ಞಾನ ನಗರದ ಯೋಜನೆಯ ಒಟ್ಟು ಅಂದಾಜು ವೆಚ್ಚ 232.70 ಕೋಟಿ ರೂಪಾಯಿಗಳು. ಈ ವೆಚ್ಚದಲ್ಲಿ ಬಂಡವಾಳ ವೆಚ್ಚ 179 ಕೋಟಿ ರೂಪಾಯಿಗಳು ಮತ್ತು ಇತರೆ ವೆಚ್ಚಗಳು 53.70 ಕೋಟಿ ರೂಪಾಯಿಗಳು ಸೇರಿವೆ. ಕೇಂದ್ರ ಸರ್ಕಾರವು 118.14 ಕೋಟಿ ರೂಪಾಯಿಗಳನ್ನು ಮತ್ತು ರಾಜ್ಯ ಸರ್ಕಾರವು 114.56 ಕೋಟಿ ರೂಪಾಯಿಗಳನ್ನು ಈ ಯೋಜನೆಗೆ ನೀಡುತ್ತವೆ
"ವಿಜ್ಞಾನ ನಗರವು ಎಲ್ಲಾ ವಯೋಮಾನದ ಜನರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ತಿಳಿಯಲು ಮತ್ತು ಆನಂದಿಸಲು ಒಂದು ಉತ್ತಮ ಸ್ಥಳವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ.. ಇದು ಶೈಕ್ಷಣಿಕ ಮತ್ತು ಮನರಂಜನೆಯ ಚಟುವಟಿಕೆಗಳನ್ನು ಒಳಗೊಂಡಿದೆ.
ವಿಜ್ಞಾನ ನಗರವು ಪರಿಶೋಧನೆಯ ಮನೋಭಾವವನ್ನು ಬೆಳೆಸಲು, ಸೃಜನಶೀಲ ಪ್ರತಿಭೆಯನ್ನು ಬೆಳೆಸಲು ಮತ್ತು ವೈಜ್ಞಾನಿಕ ಮನೋಭಾವವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಇಲ್ಲಿ ಪ್ರಯೋಗ ಆಧಾರಿತ ಕಲಿಕೆಯ ವಾತಾವರಣವಿರಲಿದೆ. ಜೊತೆಗೆ ಇಲ್ಲಿ ಒಳಾಂಗಣ ಮತ್ತು ಹೊರಾಂಗಣ ಪ್ರದರ್ಶನಗಳು ನಡೆಯಲಿದೆ. ಜೊತೆಗೆ ವರ್ಷವಿಡೀ ನಡೆಯುವ ವಿಸೇಷ ಚಟುವಟಿಕೆಗಳು ಇರುತ್ತವೆ. ವಿಜ್ಞಾನ ನಗರವು ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ವಿಷಯಗಳ ಮೇಲೆ ಗಮನಹರಿಸುತ್ತದೆ. ಇದು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರಿಗೆ ಉಪಯುಕ್ತವಾಗಿದೆ. ಯೋಜನೆಯ ನಿರ್ವಹಣೆಗೆ ರಾಜ್ಯ ಸರ್ಕಾರವು ಆರ್ಥಿಕ ಸಹಾಯ ಮಾಡುತ್ತದೆ" ಎಂದು ಈ ಹಿಂದೆ ವಿಜ್ಞಾನ ನಗರ ಯೋಜನೆಯ ಬಗ್ಗೆ ಸಚಿವ ಬೋಸರಾಜು ಮಾಹಿತಿಯನ್ನು ನೀಡಿದ್ದರು.
ಇದಲ್ಲದೇ ಬೆಂಗಳೂರಿನಿಂದ ಅಣತಿ ದೂರದಲ್ಲಿರುವ ರಾಮನಗರದಲ್ಲಿಅಂತರಾಷ್ಟ್ರೀಯ ವಿಜ್ಞಾನ ಕೇಂದ್ರದ ಸ್ಥಾಪನೆಯಾಗಲಿದೆ. ಡಾ.ಎಚ್.ನರಸಿಂಹಯ್ಯ ಅಂತರಾಷ್ಟ್ರೀಯ ವಿಜ್ಞಾನ ಕೇಂದ್ರ ಇದಾಗಲಿದ್ದು ಇದಕ್ಕಾಗಿ ಈಗಾಗಲೇ 132 ಎಕರೆ ಜಾಗ ಹಂಚಿಕೆಯಾಗಿದ್ದು, ಆ ಜಾಗವನ್ನು ಆದಷ್ಟು ಬೇಗನೆ ಇಲಾಖೆಯ ಸುಪರ್ದಿಗೆ ಪಡೆಯಲು ಕ್ರಮ ಕೈಗೊಳ್ಳುವಂತೆ ರಾಮನಗರ ಜಿಲ್ಲಾಡಳಿತಕ್ಕೆ ಸಿಎಂ ಸೂಚನೆ ನೀಡಿದ್ದಾರೆ.


Click it and Unblock the Notifications