ಬೆಂಗಳೂರು, ಆಗಸ್ಟ್ 22: ಕೇಂದ್ರ ಲೋಕ ಸೇವಾ ಆಯೋಗ(ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್-UPSC) ಇದು ಭಾರತದ ಒಂದು ಕೇಂದ್ರೀಯ ಸಂಸ್ಥೆಯಾಗಿದ್ದು ಸಾರ್ವಜನಿಕ ಸೇವೆಗೆ ರಾಷ್ಟ್ರ ಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸಿ ಲೋಕಸೇವಾ ಅಧಿಕಾರಿಗಳನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿದೆ. ಕೇಂದ್ರಿಯ ಲೋಕ ಸೇವಾ ನಡೆಸುವ ನಾಗರಿಕ ಸೇವಾ ಪರೀಕ್ಷೆ(ಐಎಎಸ್) ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು. ಈ ಪರೀಕ್ಷೆಗಳಲ್ಲಿ ಟಾಪರ್ ಆಗೋದು ಬಿಡಿ, ಪಾಸ್ ಆಗೋದೇ ಅದೆಷ್ಟೋ ಆಕಾಂಕ್ಷಿಗಳಿಗೆ ಸವಾಲಾಗಿರುತ್ತದೆ. ಹೀಗಿರುವಾಗ 2023 ರ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ (ಸಿಎಸ್‌ಇ) ಲಕ್ನೋದ 26 ವರ್ಷದ ಎಲೆಕ್ಟ್ರಿಕಲ್ ಇಂಜಿನಿಯರ್ ಆದಿತ್ಯ ಶ್ರೀವಾಸ್ತವ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗವು 2023ನೇ ಸಾಲಿನ ಸಿವಿಲ್ ಸರ್ವೀಸೆಸ್ ಎಕ್ಸಾಮ್ ಅಂತಿಮ ರಿಸಲ್ಟ್ ಅನ್ನು ಏಪ್ರಿಲ್ ನಲ್ಲಿ ಬಿಡುಗಡೆ ಮಾಡಿತ್ತು. 2023ನೇ ಸಾಲಿನ ಯುಪಿಎಸ್‌ಸಿ ಸಿಎಸ್‌ಇ ಪರೀಕ್ಷೆಯಲ್ಲಿ ಅಖಿಲ ಭಾರತ ಮೊದಲ ಟಾಪರ್ ಆಗಿರುವ ಆದಿತ್ಯಾ ಶ್ರೀವತ್ಸವ ಕಠಿಣ ಪರಿಶ್ರಮ, ತಾಳ್ಮೆ ಇಂದ ನಿರಂತರ ಓದು ಇದ್ದರೆ ಯಶಸ್ಸು ಖಂಡಿತ ಎಂಬುದಕ್ಕೆ ಉದಾಹರಣೆಯಾಗಿದ್ದು, ಲಕ್ಷಾಂತರ ಯುವ ಆಕಾಂಕ್ಷಿಗಳಿಗೆ ಸ್ಪೂರ್ತಿಯಾಗಿದ್ದಾರೆ.

ಅಂದಹಾಗೇ ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿಕೆ) ಯ ಹಳೆಯ ವಿದ್ಯಾರ್ಥಿಯಾಗಿರುವ ಆದಿತ್ಯ ತಮ್ಮ ಮೂರನೇ ಯತ್ನದಲ್ಲಿ ಟಾಪರ್ ಹೊರಹೊಮ್ಮಿದ್ದಾರೆ. ಆದಿತ್ಯ ಶ್ರೀವಾಸ್ತವ ಅವರ ಶೈಕ್ಷಣಿಕ ಪಯಣ ನೋಡುವುದಾದ್ರೆ ಅವರು ಆರಂಭದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾರೆ. ತಮ್ಮ ಶಾಲಾ ಶಿಕ್ಷಣವನ್ನು CMS ಲಕ್ನೋದ ಅಲಿಗಂಜ್ ಶಾಖೆಯಲ್ಲಿ ಪೂರ್ಣಗೊಳಿಸಿದ್ದು, ಇಲ್ಲಿ 95% ಗಳಿಸಿದರು. ಅವರ ಉತ್ಕೃಷ್ಟತೆಯು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಾನ್ಪುರದಲ್ಲಿ ಮುಂದುವರೆಯಿತು. ಅಲ್ಲಿ ಅವರು ಬಿ.ಟೆಕ್ ಮತ್ತು ಎಂ.ಟೆಕ್ ಪದವಿಯನ್ನು ಪಡೆದರು. ಐಐಟಿಯಲ್ಲಿ ಪದವಿ ಪಡೆದಾಗ ಚಿನ್ನದ ಪದಕವನ್ನು ಗಳಿಸಿದ್ದು ಇದು ಅವರ ಶೈಕ್ಷಣಿಕ ಪ್ರತಿಭೆಗೆ ಕೈಗಡಿಯಾಯಿತು.
ತನ್ನ ಶಿಕ್ಷಣವನ್ನು ಮುಗಿಸಿದ ನಂತರ, ಆದಿತ್ಯ ಅವರು ಗೋಲ್ಡ್‌ಮನ್ ಸ್ಯಾಕ್ಸ್ ಕಂಪನಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಇಲ್ಲಿ ಅವರು 15 ತಿಂಗಳು ಕೆಲಸ ಮಾಡಿದರು. ಈ ಸಮಯದಲ್ಲಿ, ಕಾರ್ಪೊರೇಟ್ ವಲಯದಲ್ಲಿ ಮುಂದುವರಿಯುವ ಬದಲು ಸಮಾಜಕ್ಕೆ ಸೇವೆ ಸಲ್ಲಿಸುವುದರಲ್ಲಿ ಅವರ ನಿಜವಾದ ಅರ್ಥವಿದೆ ಅಂದುಕೊಂಡು ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆ ಎದುರಿಸುವ ಬಗ್ಗೆ ಯೋಚಿಸತೊಡಗಿದರು.
YouTube ನಲ್ಲಿ ಹಂಚಿಕೊಂಡ ಅಣಕು ಸಂದರ್ಶನದಲ್ಲಿ, ಭಾರತೀಯ ಆಡಳಿತ ಸೇವೆಗಳನ್ನು (IAS) ಮುಂದುವರಿಸಲು ಆದಿತ್ಯ ಅವರ ನಿರ್ಧಾರವು ಚಿಂತನಶೀಲವಾಗಿತ್ತು. ಮೊದಮೊದಲು ತಮ್ಮ ಗಮನವೆಲ್ಲಾ ಆರ್ಥಿಕ ಭದ್ರತೆಯನ್ನು ಸಾಧಿಸುವುದರ ಮೇಲೆ ಕೇಂದ್ರೀಕೃತವಾಗಿತ್ತು. ಅದಕ್ಕಾಗಿಯೇ ಅವರು ಕಾರ್ಪೊರೇಟ್ ಜಗತ್ತನ್ನು ಸೇರಿಕೊಂಡರು. ಆದರೆ ಶೀಘ್ರದಲ್ಲೇ, ತೃಪ್ತಿ ಸಿಗುವುದು ಹಣದಿಂದ ಮಾತ್ರವಲ್ಲ ಎಂದು ಅರಿತುಕೊಂಡರು. ನಾಗರಿಕ ಸೇವೆಗಳ ಮೂಲಕ ನಿಜವಾದ ಬದಲಾವಣೆಯನ್ನು ಮಾಡುವ ಅವಕಾಶ ಸಿಗಲಿದೆ. ಈ ಮೂಲಕ ತಳಮಟ್ಟದಲ್ಲಿ ಕೆಲಸ ಮಾಡಬಹುದು ಮತ್ತು ನವೀನ ಪರಿಹಾರಗಳನ್ನು ಪರಿಚಯಿಸಬಹುದು ಅಂದುಕೊಂಡು ಯುಪಿಎಸ್ಸಿ ಪರೀಕ್ಷೆಗಳತ್ತ ಗಮನಹರಿಸಿದರು.
ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಇದು ಅವರ ಮೊದಲ ಪ್ರಯತ್ನವಲ್ಲ. 2022 ರಲ್ಲಿ, ಅವರು 236 ನೇ ಶ್ರೇಣಿಯನ್ನು ಪಡೆದಿದ್ದು, ಈ ವೇಳೆ ಭಾರತೀಯ ಪೊಲೀಸ್ ಸೇವೆ (IPS) ಗೆ ಆಯ್ಕೆ ಮಾಡಿಕೊಂಡಿದ್ದರು. ಪ್ರಸ್ತುತ ಅವರು ಹೈದರಾಬಾದ್‌ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಆದಿತ್ಯ ಅವರ ಯಶಸ್ಸಿನ ಹಿಂದೆ ಸಮರ್ಪಣೆ, ಪರಿಶ್ರಮ ಮತ್ತು ಅವರ ಕುಟುಂಬದ ಬೆಂಬಲವೂ ಇದೆ. ಅವರ ತಂದೆ ಅಜಯ್ ಶ್ರೀವಾಸ್ತವ ಅವರು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾದಲ್ಲಿ ಸಹಾಯಕ ಆಡಿಟ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. UPSC ನಾಗರಿಕ ಸೇವೆಗಳ ಪರೀಕ್ಷೆ 2023 ರಲ್ಲಿ ಉನ್ನತ ಶ್ರೇಣಿಯನ್ನು ಗಳಿಸುವಲ್ಲಿ ಆದಿತ್ಯ ಶ್ರೀವಾಸ್ತವ ಅವರ ಗಮನಾರ್ಹ ಸಾಧನೆಯು ರಾಷ್ಟ್ರದಾದ್ಯಂತ ಅಸಂಖ್ಯಾತ ಮಹತ್ವಾಕಾಂಕ್ಷಿ ನಾಗರಿಕ ಸೇವಕರಿಗೆ ಸ್ಫೂರ್ತಿಯಾಗಿದೆ.


Click it and Unblock the Notifications