ಅದಾನಿ ಸಮೂಹದ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ತನ್ನ ಮೊದಲ ತ್ರೈಮಾಸಿಕದ ವರದಿಯನ್ನು ಪ್ರಕಟಿಸಿದೆ. ಆಗಸ್ಟ್ 3ರಂದು ವರದಿಯನ್ನು ಪ್ರಕಟಿಸಲಾಗಿದ್ದು, ಜೂನ್‌ನಲ್ಲಿ ಕೊನೆಯಾದ ತ್ರೈಮಾಸಿಕದಲ್ಲಿ ಅದಾನಿ ಸಂಸ್ಥೆಯ ನಿವ್ವಳ ಲಾಭವು ಶೇಕಡೆ 44ರಷ್ಟು ವಾರ್ಷಿಕ ಬೆಳವಣಿಗೆಯನ್ನು ಕಂಡಿದ್ದು, ಲಾಭವು 674 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ಆರ್ಥಿಕ ವರ್ಷದ ಅವಧಿಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ನ ನಿವ್ವಳ ಲಾಭವು 469 ಕೋಟಿ ರೂಪಾಯಿ ಆಗಿತ್ತು.
ಇನ್ನು ಸಂಸ್ಥೆಯ ಒಟ್ಟು ಆದಾಯವು 25,810 ಕೋಟಿ ರೂಪಾಯಿ ಆಗಿದೆ. ಇಬಿಐಟಿಡಿಎ ಶೇಕಡ 47ರಷ್ಟು ಏರಿಕೆಯಾಗಿದ್ದು, 2,896 ಕೋಟಿ ರೂಪಾಯಿಗೆ ತಲುಪಿದೆ. ಆದರೂ ಕಾರ್ಯಾಚರಣೆಯಲ್ಲಿನ ಆದಾಯವು ಮೊದಲ ತ್ರೈಮಾಸಿಕದಲ್ಲಿ ಶೇಕಡ 38ರಷ್ಟು ಕುಸಿದು 25,438 ಕೋಟಿ ರೂಪಾಯಿಗೆ ತಲುಪಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ 40,844 ಕೋಟಿ ರೂಪಾಯಿ ಆಗಿತ್ತು. ಇತರ ಆದಾಯವು ಹಿಂದಿನ ವರ್ಷದ 222 ಕೋಟಿ ರೂಪಾಯಿಯಿಂದ ಈ ವರ್ಷದ ಈ ತ್ರೈಮಾಸಿಕದಲ್ಲಿ 371.5 ಕೋಟಿ ರೂಪಾಯಿಗೆ ಹೆಚ್ಚಳವನ್ನು ಕಂಡಿದೆ.

ಗೌತಮ್ ಅದಾನಿ ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅದಾನಿ ಗ್ರೂಪ್‌ನ ಚೇರ್‌ಮನ್ ಗೌತಮ್ ಅದಾನಿ, "ಪ್ರತಿ ತ್ರೈಮಾಸಿಕದಲ್ಲಿ, ವರ್ಷದಿಂದ ವರ್ಷಕ್ಕೆ ಮತ್ತು ಮೂರು ದಶಕಗಳಲ್ಲಿ, ಅದಾನಿ ಎಂಟರ್‌ಪ್ರೈಸಸ್ ಭಾರತದ ಅತ್ಯಂತ ಯಶಸ್ವಿ ವ್ಯಾಪಾರವಾಗಿದೆ. ಅಷ್ಟು ಮಾತ್ರವಲ್ಲದೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಜಾಗತಿಕ ಶಕ್ತಿ ಕೇಂದ್ರವಾಗಿಯೂ ತನ್ನ ಖ್ಯಾತಿಯನ್ನು ಸಾಬೀತುಪಡಿಸುತ್ತಾ ಬಂದಿದೆ," ಎಂದು ತಿಳಿಸಿದ್ದಾರೆ.
ಅದಾನಿ ಗ್ರೂಪ್ ಷೇರುಗಳು ಹೇಗಿದೆ?
ಅದಾನಿ ಗ್ರೀನ್, ಅದಾನಿ ವಿಲ್ಮಾರ್ ಅನ್ನು ಹೊರತುಪಡಿಸಿ ಅದಾನಿ ಗ್ರೂಪ್‌ನ ಬಹುತೇಕ ಎಲ್ಲ ಷೇರುಗಳು ಗುರುವಾರ ಏರಿಕೆಯಾಗಿದೆ. ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಮೊದಲ ತ್ರೈಮಾಸಿಕ ವರದಿ ಪ್ರಕಟವಾದ ಬಳಿಕ ಬಿಎಸ್‌ಇಯಲ್ಲಿ ಶೇಕಡ 2.85ರಷ್ಟು ಹೆಚ್ಚಳವಾಗಿ 2543.75 ರೂಪಾಯಿ ಗರಿಷ್ಠ ಮಟ್ಟಕ್ಕೆ, 2461.45 ರೂಪಾಯಿ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಇಂದಿನ ವಹಿವಾಟಿನ ಅಂತ್ಯದಲ್ಲಿ ಅದಾನಿ ಎಂಟರ್‌ಪ್ರೈಸಸ್ ಷೇರು ಸುಮಾರು ಶೇಕಡ 2.48ರಷ್ಟು ಜಿಗಿದು 2,535.00ಕ್ಕೆ ವಹಿವಾಟು ಅಂತ್ಯ ಮಾಡಿದೆ.
ಈ ವಾರದಲ್ಲಿ ಈ ಷೇರು ಸುಮಾರು ಶೇಕಡ 4.25ರಷ್ಟು ಏರಿಕೆಯಾಗಿದೆ. 3ನೇ ಮತ್ತು 6ನೇ ತಿಂಗಳಿನಲ್ಲಿ ಅದಾನಿ ಎಂಟರ್‌ಪ್ರೈಸಸ್ ಷೇರು ಕ್ರಮವಾಗಿ ಶೇಕಡ 37.7 ಮತ್ತು ಶೇಕಡ 59.86ರಷ್ಟು ಆದಾಯವನ್ನು ಗಳಿಸಿದೆ. ಆದರೆ ಕಳೆದ ಒಂದು ವರ್ಷದ ಬೆಳವಣಿಗೆಯನ್ನು ನಾವು ನೋಡಿದಾಗ ಷೇರು ಸುಮಾರು ಶೇಕಡ 6.60ರಷ್ಟು ಕುಸಿತ ಕಂಡಿದೆ. ಕಳೆದ 3 ವರ್ಷಗಳಲ್ಲಿ ಶೇಕಡ 1371.13ರಷ್ಟು, 5 ವರ್ಷಗಳಲ್ಲಿ ಶೇಕಡ 1649.72ರಷ್ಟು ಆದಾಯವನ್ನು ಈ ಷೇರು ಗಳಿಸಿದೆ.
ಹಿಂಡನ್‌ಬರ್ಗ್ ವರದಿ ಬಳಿಕ ಅದಾನಿ ಷೇರು
ಹಿಂಡನ್‌ಬರ್ಗ್ ವರದಿ ಬಳಿಕ ಅದಾನಿ ಷೇರು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಆದರೆ ಇತ್ತೀಚೆಗೆ ಕೊಂಚ ಚೇತರಿಕೆ ಕಾಣುತ್ತಿದೆ. ಹಿಂಡನ್‌ಬರ್ಗ್ ತನಿಖಾ ವರದಿಯು ಅದಾನಿ ಗ್ರೂಪ್ ವಂಚನೆಯನ್ನು ಭಾಗಿಯಾಗಿದೆ. ದಶಕಗಳಿಂದ ವಂಚನೆ ನಡೆಸುತ್ತಿದೆ. ಅದಾನಿ ಗ್ರೂಪ್ ಬಗ್ಗೆ ಸುಮಾರು ಎರಡು ವರ್ಷಗಳ ಕಾಲ ತನಿಖೆಯನ್ನು ನಡೆಸಿ ವರದಿ ನೀಡಲಾಗಿದೆ. ಅದಾನಿ ಗ್ರೂಪ್‌ನ ಹಲವಾರು ವ್ಯಕ್ತಿಗಳ ಸಂದರ್ಶನ ಮಾಡಲಾಗಿದೆ. ಮಾಜಿ ಹಿರಿಯ ಅಧಿಕಾರಿಗಳ ಸಂದರ್ಶನವನ್ನು ಕೂಡಾ ಮಾಡಲಾಗಿದೆ. ದಾಖಲೆಗಳು ನಮ್ಮಲ್ಲಿದೆ ಎಂದು ಹಿಂಡನ್‌ಬರ್ಗ್ ಮಾಹಿತಿ ನೀಡಿದೆ.
ಅದಾನಿ ಕುಟುಂಬದ ಸದಸ್ಯರು ಹಾಗೂ ಕಂಪನಿಗೆ ಸಂಬಂಧಿಸಿದ ಅಧಿಕಾರಿಗಳು ಮಾರಿಷಸ್, ಯುಎಇ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಕಡಲಾಚೆಯ ಶೆಲ್ ಘಟಕಗಳನ್ನು ರಚಿಸಲು ಸಹಕರಿಸಿದ್ದಾರೆ. ನಕಲಿ ಅಥವಾ ಕಾನೂನುಬಾಹಿರ ವಹಿವಾಟು ಮತ್ತು ಲಿಸ್ಟೆಡ್ ಕಂಪನಿಗಳಿಂದ ಹಣವನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ನಕಲಿ ಆಮದು/ರಫ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹಿಂಡೆನ್‌ಬರ್ಗ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.


Click it and Unblock the Notifications