ಅದಾನಿ ಗ್ರೂಪ್ ವಂಚನೆ ಮಾಡಿದೆ ಎಂದು ಹಿಂಡನ್‌ಬರ್ಗ್ ವರದಿಯನ್ನು ಮಾಡಿದ ಬಳಿಕ ಅದಾನಿ ಗ್ರೂಪ್‌ನಲ್ಲಿ ಹಲವಾರು ಬದಲಾವಣೆಗಳು ಕಂಡುಬರುತ್ತಿದೆ. ಅದಾನಿ ಸ್ಟಾಕ್ ನಿರಂತರವಾಗಿ ಕುಸಿತ ಕಾಣುತ್ತಿದೆ. ಇದಕ್ಕಾಗಿ ಅದಾನಿ ಸಂಸ್ಥೆಯು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಂತೆ ಸೋಮವಾರ ಅದಾನಿ ಸಂಸ್ಥೆಯು 1,114 ಮಿಲಿಯನ್ ಡಾಲರ್ ಸಾಲ ಪೂರ್ವ ಪಾವತಿ ಮಾಡುವುದಾಗಿ ಹೇಳಿದೆ. ಇದಾದ ಬೆನ್ನಲ್ಲೇ ಮಂಗಳವಾರ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಏರಿಕೆಯಾಗಿದೆ.
ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಸುಮಾರು 120 ಬಿಲಿಯನ್ ಡಾಲರ್ ಅನ್ನು ಹಿಂಡನ್‌ಬರ್ಗ್ ವರದಿಯ ಬಳಿಕ ಅಂದರೆ ಜನವರಿ 24ರಿಂದ ಈವರೆಗೆ ಕಳೆದುಕೊಂಡಿದೆ. ಆದರೆ ನಿರಂತರವಾಗಿ ಕುಸಿಯುತ್ತಿದ್ದ ಅದಾನಿ ಷೇರುಗಳು ಮಂಗಳವಾರ ಶೇಕಡ 25ರಷ್ಟು ಏರಿಕೆಯಾಗಿದೆ. ಈ ಹಿಂದೆ ಸಂಸ್ಥೆಯ ಷೇರುಮಾರುಕಟ್ಟೆ ಸ್ಥಿತಿ ಭಾರೀ ಶೋಚನೀಯವಾಗಿತ್ತು.
ಅದಾನಿ ಸಂಸ್ಥೆಯು 1.1 ಬಿಲಿಯನ್ ಡಾಲರ್ ಸಾಲವನ್ನು ಪೂರ್ವಪಾವತಿ ಮಾಡುವುದಾಗಿ ಹೇಳಿದೆ. ಇದಾದ ಬಳಿಕ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಶೇಕಡ 25ರಷ್ಟು ಏರಿಕೆಯಾಗಿದೆ. ಮಧ್ಯಾಹ್ನದ ವಹಿವಾಟಿನಲ್ಲಿ ಅದಾನಿ ಸ್ಟಾಕ್ ಶೇಕಡ 15ರಷ್ಟು ಏರಿಕೆಯನ್ನು ಕಂಡಿದೆ. ಆದರೂ ಈ ವರ್ಷದ ಆರಂಭದಿಂದ ಈವರೆಗೆ ಅದಾನಿ ಸ್ಟಾಕ್ ಅರ್ಧ ಭಾಗದಷ್ಟು ಕುಸಿದಿದೆ.

ಸಾಲ ಪೂರ್ವಪಾವತಿ ಘೋಷಣೆ
ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಷೇರು ಮಾರುಕಟ್ಟೆಯಲ್ಲಿ ಭಾರೀ ವಂಚಣೆಯನ್ನು ಮಾಡಿದೆ ಎಂಬ ವರದಿಗಳ ಬಳಿಕ ಸಂಸ್ಥೆಯ ಸ್ಟಾಕ್‌ಗಳು ಭಾರೀ ಇಳಿದಿದೆ. ಈ ನಡುವೆ ತಮ್ಮ ಪ್ರಾಯೋಜಕರು 1,114 ಮಿಲಿಯನ್ ಡಾಲರ್ ಸಾಲವನ್ನು ಮರುಪಾವತಿ ಮಾಡಿ, ಗ್ರೂಪ್‌ನ ಸಂಸ್ಥೆಗಳ ಷೇರುಗಳನ್ನು ರಿಲೀಸ್ ಮಾಡುತ್ತಾರೆ ಎಂದು ಸೋಮವಾರ ಅದಾನಿ ಎಂಟರ್‌ಪ್ರೈಸಸ್‌ನ ಮೂಲ ಸಂಸ್ಥೆ ಅದಾನಿ ಗ್ರೂಪ್ ಹೇಳಿಕೊಂಡಿದೆ.
ಮಾರುಕಟ್ಟೆಯಲ್ಲಿನ ಅಸ್ಥಿರತೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಕೂಡಾ ಸಂಸ್ಥೆ ಹೇಳಿದೆ. ಈ ಬಗ್ಗೆ ಅದಾನಿ ಎಂಟರ್‌ಪ್ರೈಸಸ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಪ್ರಾಯೋಜಕರು ಸಾಲವನ್ನು ಪೂರ್ವಪಾವತಿ ಮಾಡಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
"ಮಾರುಕಟ್ಟೆಯಲ್ಲಿ ಅಸ್ಥಿರತೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಮತ್ತು ಅದಾನಿ ಸಂಸ್ಥೆಯ ಷೇರುಗಳ ಮೇಲಿನ ಪ್ರಾಯೋಜಕರ ಹತೋಟಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರವರ್ತಕರ ಬದ್ಧತೆಯೊಂದಿಗೆಯೇ ಪ್ರಾಯೋಜಕರು ಸೆಪ್ಟೆಂಬರ್ 2024ರ ಮೆಚ್ಯೂರಿಟಿ ಸಮಯಕ್ಕಿಂತ ಮುಂಚಿತವಾಗಿ 1,114 ಮಿಲಿಯನ್ ಯುಎಸ್ ಡಾಲರ್ ಅನ್ನು ಪೂರ್ವಪಾವತಿ ಮಾಡಲಿದ್ದಾರೆ," ಎಂದು ಹೇಳಿದೆ.
ಏನಿದು ಹಿಂಡನ್‌ಬರ್ಗ್ ವರದಿ?
ತನಿಖಾ ಸಂಸ್ಥೆ ಹಿಂಡೆನ್‌ಬರ್ಗ್ ಅದಾನಿ ಗ್ರೂಪ್ ವಿರುದ್ಧ ಭಾರೀ ವಂಚನೆ ಆರೋಪ ಮಾಡಿದೆ. ಲೆಕ್ಕಪತ್ರ ವಂಚನೆಯಲ್ಲಿ ಹಾಗೂ ಸ್ಟಾಕ್ ಮ್ಯಾನಿಪ್ಯುಲೇಷನ್‌ನಲ್ಲಿ ಅದಾನಿ ಗ್ರೂಪ್ ಭಾಗವಹಿಸಿದೆ ಎಂದು ಹಿಂಡೆನ್‌ಬರ್ಗ್ ತನಿಖಾ ವರದಿ ಹೇಳಿದೆ. ಅದಾನಿ ಗ್ರೂಪ್ ವಿರುದ್ಧ ಮನಿ ಲಾಂಡರಿಂಗ್, ತೆರಿಗೆ ಡಾಲರ್ ಕಳ್ಳತನ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಕೂಡ ಹಿಂಡನ್‌ಬರ್ಗ್ ತನಿಖಾ ವರದಿ ಮಾಡಿದೆ. ಅದಾನಿ ಕುಟುಂಬದ ಸದಸ್ಯರು ಹಾಗೂ ಕಂಪನಿಗೆ ಸಂಬಂಧಿಸಿದ ಅಧಿಕಾರಿಗಳು ಮಾರಿಷಸ್, ಯುಎಇ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಕಡಲಾಚೆಯ ಶೆಲ್ ಘಟಕಗಳನ್ನು ರಚಿಸಲು ಸಹಕರಿಸಿದ್ದಾರೆ. ನಕಲಿ ಅಥವಾ ಕಾನೂನುಬಾಹಿರ ವಹಿವಾಟು ಮತ್ತು ಲಿಸ್ಟೆಡ್ ಕಂಪನಿಗಳಿಂದ ಹಣವನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ನಕಲಿ ಆಮದು/ರಫ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹಿಂಡೆನ್‌ಬರ್ಗ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ. ಷೇರು ಮಾರುಕಟ್ಟೆಯಲ್ಲಿ ನಕಲಿ ಷೇರುಗಳ ಸೃಷ್ಟಿ ಮಾಡಲಾಗಿದೆ ಎಂದು ಹೇಳಲಾಗಿದೆ.


Click it and Unblock the Notifications