ಅದಾನಿ ಗ್ರೂಪ್‌ನ ಸಂಸ್ಥೆಯಾದ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಸೋಮವಾರ ನಾಲ್ಕನೇ ತ್ರೈಮಾಸಿಕದ ವರದಿ ಬಿಡುಗಡೆ ಮಾಡಿದೆ. ಸಂಸ್ಥೆಯ ನಿವ್ವಳ ಲಾಭವು ಮಾರ್ಚ್‌ನಲ್ಲಿ ಅಂತ್ಯವಾದ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡ 319ರಷ್ಟು ಏರಿಕೆಯಾಗಿ, 507 ಕೋಟಿ ರೂಪಾಯಿಗೆ ತಲುಪಿದೆ. ಒಂದು ವರ್ಷಕ್ಕೂ ಹಿಂದೆ ನಿವ್ವಳ ಲಾಭವು 121 ಕೋಟಿ ರೂಪಾಯಿ ಆಗಿತ್ತು. ಆದರೆ ಒಂದು ವರ್ಷದಲ್ಲೇ ಶೇಕಡ 319ರಷ್ಟು ಜಿಗಿತ ಕಂಡಿದೆ.
ಅದಾನಿ ಸಂಸ್ಥೆಯ ಒಟ್ಟು ಆದಾಯವು ಹಣಕಾಸು ವರ್ಷ 2022ರ ನಾಲ್ಕನೇ ತ್ರೈಮಾಸಿಕದಲ್ಲಿ (Q4FY22) 1,587 ಕೋಟಿ ರೂಪಾಯಿಗೆ ಹೋಲಿಕೆ ಮಾಡಿದಾಗ ಹಣಕಾಸು ವರ್ಷ 2023ರ ನಾಲ್ಕನೇ ತ್ರೈಮಾಸಿಕದಲ್ಲಿ (Q4FY23) ಶೇಕಡ 88ರಷ್ಟು ಏರಿಕೆ ಕಂಡಿದೆ. ಹಣಕಾಸು ವರ್ಷ 2023ರಲ್ಲಿ ಸಂಸ್ಥೆಯ ಆದಾಯ, ಇಬಿಐಟಿಡಿಎ ಮತ್ತು ನಗದು ಲಾಭದ ಬೆಳವಣಿಗೆಯು ಇಬಿಐಟಿಡಿಎ ಏರಿಕೆಗೆ ಕಾರಣವಾಗಿದೆ.

ಅಂದರೆ ಸಂಸ್ಥೆಯಲ್ಲಿ ಬಡ್ಡಿ, ತೆರಿಗೆಗಳು, ಖರ್ಚು ವೆಚ್ಚಳ ಮೊದಲಾದವುಗಳ ಕಡಿತಕ್ಕೂ ಮುನ್ನ ಬರುವ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡ 57ರಷ್ಟು ಏರಿಕೆಯಾಗಿ, 5,538 ಕೋಟಿ ರೂಪಾಯಿಗೆ ತಲುಪಿದೆ ಎಂದು ವರದಿಯಾಗಿದೆ. ಶುಕ್ರವಾರ, ಬಿಎಸ್‌ಇಯಲ್ಲಿ ಅದಾನಿ ಗ್ರೀನ್ ಎನರ್ಜಿ ಶೇಕಡ 3.8ರಷ್ಟು ಏರಿಕೆಯಾಗಿ 952 ರೂಪಾಯಿಗೆ ತಲುಪಿದೆ.
ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಹೇಳುವುದೇನು?
"ನಮ್ಮ ವ್ಯವಹಾರ ಮಾದರಿಯು ಗಮನಾರ್ಹವಾಗಿ ಸ್ಥಿರತೆ ಕಾಯ್ದುಕೊಂಡಿದೆ. ಇದು ನಮ್ಮ ಬಲವಾದ ಆರ್ಥಿಕ ಕಾರ್ಯಕ್ಷಮತೆಯ ಸಾಕ್ಷಿಯಾಗಿದೆ," ಎಂದು ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಹೇಳಿದ್ದಾರೆ. "ಗ್ರೀನ್ ಎನರ್ಜಿ (ಹಸಿರು ಶಕ್ತಿ) ಜಾಗದಲ್ಲಿ ನಾವು ಪ್ರಬಲ ನಾಯಕರಾಗಿದ್ದೇವೆ. ದಕ್ಷತೆ, ಕಾರ್ಯಕ್ಷಮತೆ ಮತ್ತು ಸಾಮರ್ಥ್ಯದ ಅಭಿವೃದ್ಧಿಯಲ್ಲಿ ಹೊಸ ಉದ್ಯಮವನ್ನು ಬೆಳೆಸುತ್ತಿದ್ದೇವೆ. ಭಾರತಕ್ಕೆ ಗ್ರೀನ್ ಎನರ್ಜಿ ಪೂರೈಕೆಗೆ ಸಹಾಯ ಮಾಡಲು ನಾವು ಪ್ರಮುಖ ಪಾತ್ರ ವಹಿಸುತ್ತೇವೆ," ಎಂದು ತಿಳಿಸಿದ್ದಾರೆ.
"ನಾವು ಈ ವರ್ಷ 2,676 ಮೆಗಾ ವ್ಯಾಟ್ ನವೀಕರಿಸಬಹುದಾದ ಆಸ್ತಿಗಳ ಬೃಹತ್ ಗ್ರೀನ್‌ಫೀಲ್ಡ್ ಸಾಮರ್ಥ್ಯವನ್ನು ಹೊಂದಿದ್ದೇವೆ. ಈ ಸಾಧನೆಯನ್ನು ನಮ್ಮ ತಂಡಗಳ ಅವಿರತ ಪ್ರಯತ್ನಗಳಿಗೆ ಸಲ್ಲುತ್ತದೆ. ಎಜಿಎಲ್‌ನ ಕಾರ್ಯಾಚರಣೆಯ ಸಾಮರ್ಥ್ಯವು ಕಳೆದ ಐದು ವರ್ಷಗಳಲ್ಲಿ ಶೇಕಡ 33ರಷ್ಟು ಬೆಳವಣಿಗೆ ಕಂಡಿದೆ," ಎಂದು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ವಿನೀತ್ ಎಸ್ ಜೈನ್ ತಿಳಿಸಿದ್ದಾರೆ.
"ಹಣಕಾಸು ವರ್ಷ 2023ರಲ್ಲಿ ಇಂಧನ ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡ 58ರಷ್ಟು ಏರಿಕೆಯಾಗಿ 14,880 ಮಿಲಿಯನ್ ಯುನಿಟ್‌ಗೆ ತಲುಪಿದೆ," ಎಂದು ಫೈಲಿಂಗ್‌ನಲ್ಲಿ ಉಲ್ಲೇಖಿಸಲಾಗಿದೆ. ಇನ್ನೊಂದೆಡೆ ಅದಾನಿ ಗ್ರೂಪ್ ವಿರುದ್ಧ ಷೇರು ಮಾರುಕಟ್ಟೆಯಲ್ಲಿ ವಂಚನೆ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಈ ಆರೋಪದ ಬಳಿಕ ಅದಾನಿ ಷೇರುಗಳು ನಿರಂತರವಾಗಿ ಕುಸಿತ ಕಾಣುತ್ತಿದೆ.
ಅದಾನಿ ಗ್ರೂಪ್ ವಿರುದ್ಧ ಹಿಂಡನ್‌ಬರ್ಗ್ ವರದಿ
ಹಿಂಡನ್‌ಬರ್ಗ್ ತನಿಖಾ ವರದಿಯು ಅದಾನಿ ಗ್ರೂಪ್ ವಂಚನೆಯನ್ನು ಭಾಗಿಯಾಗಿದೆ. ದಶಕಗಳಿಂದ ವಂಚನೆ ನಡೆಸುತ್ತಿದೆ. ಅದಾನಿ ಗ್ರೂಪ್ ಬಗ್ಗೆ ಸುಮಾರು ಎರಡು ವರ್ಷಗಳ ಕಾಲ ತನಿಖೆಯನ್ನು ನಡೆಸಿ ವರದಿ ನೀಡಲಾಗಿದೆ. ಅದಾನಿ ಗ್ರೂಪ್‌ನ ಹಲವಾರು ವ್ಯಕ್ತಿಗಳ ಸಂದರ್ಶನ ಮಾಡಲಾಗಿದೆ. ಮಾಜಿ ಹಿರಿಯ ಅಧಿಕಾರಿಗಳ ಸಂದರ್ಶನವನ್ನು ಕೂಡಾ ಮಾಡಲಾಗಿದೆ. ದಾಖಲೆಗಳು ನಮ್ಮಲ್ಲಿದೆ ಎಂದು ಹಿಂಡನ್‌ಬರ್ಗ್ ಮಾಹಿತಿ ನೀಡಿದೆ.
ಜನವರಿ 24ರಂದು ವರದಿ ಬಿಡುಗಡೆ ಮಾಡಿರುವ ಹಿಂಡನ್‌ಬರ್ಗ್, ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿರುವ ಬಗ್ಗೆ ನಾವು ಹಲವಾರು ದಾಖಲೆಗಳನ್ನು ಪರಿಶೀಲನೆ ಮಾಡಿದ್ದೇವೆ. 12ರಷ್ಟು ದೇಶಗಳಿಗೆ ಭೇಟಿ ನೀಡಿ ಸ್ವತಃ ಸ್ಥಳ ಪರಿಶೀಲನೆ ಮಾಡಿದ್ದೇವೆ. ಇದರಿಂದಾಗಿ ಅದಾನಿ ಗ್ರೂಪ್ ವಂಚನೆಯನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ ಎಂದು ವರದಿ ಹೇಳಿದೆ.


Click it and Unblock the Notifications