ಅದಾನಿ ಗ್ರೂಪ್‌ನ ಪ್ರಮುಖ ಕಂಪನಿಗಳಾದ ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್ ಮತ್ತು ಗ್ರೂಪ್‌ನ ಇತರೆ ಕಂಪನಿಗಳು ಇಂದು ಷೇರು ಮಾರುಕಟ್ಟೆಯಲ್ಲಿ ಅಧಿಕ ಗಮನಹರಿಸಲಾಗುವ ಷೇರುಗಳು ಆಗಿದೆ. ಇಂದು ಅದಾನಿ ಗ್ರೂಪ್‌ನ ಸ್ಟಾಕ್‌ಗಳು ಅದರಲ್ಲೂ ಮುಖ್ಯವಾಗಿ ಅದಾನಿ ಪೋರ್ಟ್ಸ್ ಸ್ಟಾಕ್ ಭಾರೀ ಕುಸಿತ ಕಾಣುವ ಸಾಧ್ಯತೆಯಿದೆ.
ಡೆಲಾಯ್ಟ್ ಹ್ಯಾಸ್ಕಿನ್ಸ್ ಮತ್ತು ಸೇಲ್ಸ್ ಎಲ್‌ಎಲ್‌ಪಿ ಕಂಪನಿಯ ಆಡಿಟರ್‌ಗಳು ಅದಾನಿ ಪೋರ್ಟ್ಸ್‌ಗೆ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಯನ್ನು ಸಂಸ್ಥೆಯು ಅಂಗೀಕಾರ ಮಾಡಿ, ಹೊಸ ಆಡಿಟರ್‌ಗಳ ನೇಮಕಾತಿಯನ್ನು ಕೂಡಾ ಮಾಡಿದೆ. ಆದರೆ ಈ ನಡುವೆ ಆಡಿಟರ್‌ಗಳ ರಾಜೀನಾಮೆ ಅದಾನಿ ಗ್ರೂಪ್‌ನ ಸ್ಟಾಕ್‌ಗಳ ಮೇಲೆ ಪ್ರಭಾವ ಉಂಟು ಮಾಡುವ ನಿರೀಕ್ಷೆಯಿದೆ.

ಅದಾನಿ ಪೋರ್ಟ್ಸ್ ಈಗ ಎಂಎಸ್‌ಕೆಎ & ಅಸೋಸಿಯೇಟ್ಸ್ ಚಾರ್ಟರ್ಡ್ ಅಕೌಂಟೆಂಟ್‌ಗಳನ್ನು ಕಂಪನಿಯ ಹೊಸ ಆಡಿಟರ್‌ಗಳಾಗಿ ನೇಮಿಸಿದೆ. ಸಂಸ್ಥೆಯ ಹೊಸ ಆಡಿಟರ್ ಸಂಸ್ಥೆಯು ಜಾಗತಿಕವಾಗಿ ಆರು ಅಗ್ರ ಆಡಿಟಿಂಗ್ ಸಂಸ್ಥೆಗಳಲ್ಲಿ ಒಂದಾಗಿದೆ ಎಂಬುವುದು ಗಮನಾರ್ಹವಾಗಿದೆ.
ಸೆಬಿ ತನಿಖೆಗೆ ಇಂದು ಗಡುವು
ಹೆಚ್ಚುವರಿಯಾಗಿ, ಅದಾನಿ ಸಂಸ್ಥೆಯ ವಿರುದ್ಧ ಜನವರಿಯಲ್ಲಿ ಪ್ರಕಟವಾದ ಹಿಂಡನ್‌ಬರ್ಗ್ ವರದಿಯ ವಿಚಾರದಲ್ಲಿ ಮಾರುಕಟ್ಟೆ ನಿಯಂತ್ರಕ ಸೆಬಿಯ ತನಿಖೆಗೆ ಇಂದು ಗಡುವು ಕೂಡ ಆಗಿದೆ. ಮಾರುಕಟ್ಟೆ ನಿಯಂತ್ರಕರ ಮನವಿಯ ನಂತರ, ಸುಪ್ರೀಂ ಕೋರ್ಟ್ ತನಿಖೆಯನ್ನು ಪೂರ್ಣಗೊಳಿಸಲು ಆಗಸ್ಟ್ 14 ರವರೆಗೆ ಸೆಬಿಗೆ ಕಾಲಾವಕಾಶ ನೀಡಿತ್ತು.
ಪ್ರಕರಣದ ವಿಚಾರಣೆ ಇಂದು ನಡೆಯಬೇಕಾಗಿದೆ ಆದರೆ ಇದನ್ನು ಆಗಸ್ಟ್ 29ಕ್ಕೆ ಪಟ್ಟಿ ಮಾಡಲಾಗಿದೆ ಎಂದು ವರದಿಯು ಹೇಳುತ್ತದೆ. ಅದಾನಿ ಗ್ರೂಪ್ ಇತ್ತೀಚೆಗೆ ಹಲವು ಆಡಿಟರ್‌ಗಳ ಬದಲಾವಣೆಯನ್ನು ಮಾಡಿದೆ ಎಂದು ಬ್ರೋಕರೇಜ್ ಸಂಸ್ಥೆ ಸಿಎಲ್‌ಎಸ್‌ಎ ಹೇಳಿದೆ. ಆದರೆ ಡೆಲಾಯ್ಟ್ ರಾಜೀನಾಮೆಯು ಅದಾನಿ ಗ್ರೂಪ್ ಸ್ಟಾಕ್‌ನಲ್ಲಿ ಏರಿಳಿತಕ್ಕೆ ಕಾರಣವಾಗಲಿದೆ.
ಅದಾನಿ ಪೋರ್ಟ್‌ಗಳ ಷೇರುಗಳು ಈಗಾಗಲೇ ಜನವರಿಯಲ್ಲಿ ಹಿಂಡನ್‌ಬರ್ಗ್ ವರದಿ ಬಳಿಕ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಆದರೆ ಈಗ ಅದಕ್ಕಿಂತ ಕೊಂಚ ಅಧಿಕ ಮಟ್ಟದಲ್ಲಿಯೇ ವಹಿವಾಟು ನಡೆಸುತ್ತಿದೆ. ಎಲ್ಲ ನಷ್ಟಗಳಿಂದ ಚೇತರಿಕೆ ಕಾಣುತ್ತಿದೆ. ಕಳೆದ ವರ್ಷದ ಈ ದಿನಾಂಕಕ್ಕೆ ಹೋಲಿಕೆ ಮಾಡಿದಾಗ ಶೇಕಡ 2.75ರಷ್ಟು ಕುಸಿದು ವಹಿವಾಟು ನಡೆಸುತ್ತಿದೆ.
ಹಿಂಡನ್‌ಬರ್ಗ್ ವರದಿ ಏನು ಹೇಳುತ್ತದೆ?
ಹಿಂಡನ್‌ಬರ್ಗ್ ತನಿಖಾ ವರದಿಯು ಅದಾನಿ ಗ್ರೂಪ್ ವಂಚನೆಯನ್ನು ಭಾಗಿಯಾಗಿದೆ. ದಶಕಗಳಿಂದ ವಂಚನೆ ನಡೆಸುತ್ತಿದೆ. ಅದಾನಿ ಗ್ರೂಪ್ ಬಗ್ಗೆ ಸುಮಾರು ಎರಡು ವರ್ಷಗಳ ಕಾಲ ತನಿಖೆಯನ್ನು ನಡೆಸಿ ವರದಿ ನೀಡಲಾಗಿದೆ. ಅದಾನಿ ಗ್ರೂಪ್‌ನ ಹಲವಾರು ವ್ಯಕ್ತಿಗಳ ಸಂದರ್ಶನ ಮಾಡಲಾಗಿದೆ. ಮಾಜಿ ಹಿರಿಯ ಅಧಿಕಾರಿಗಳ ಸಂದರ್ಶನವನ್ನು ಕೂಡಾ ಮಾಡಲಾಗಿದೆ. ದಾಖಲೆಗಳು ನಮ್ಮಲ್ಲಿದೆ ಎಂದು ಹಿಂಡನ್‌ಬರ್ಗ್ ಮಾಹಿತಿ ನೀಡಿದೆ.
ಜನವರಿ 24ರಂದು ವರದಿ ಬಿಡುಗಡೆ ಮಾಡಿರುವ ಹಿಂಡನ್‌ಬರ್ಗ್, ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿರುವ ಬಗ್ಗೆ ನಾವು ಹಲವಾರು ದಾಖಲೆಗಳನ್ನು ಪರಿಶೀಲನೆ ಮಾಡಿದ್ದೇವೆ. 12ರಷ್ಟು ದೇಶಗಳಿಗೆ ಭೇಟಿ ನೀಡಿ ಸ್ವತಃ ಸ್ಥಳ ಪರಿಶೀಲನೆ ಮಾಡಿದ್ದೇವೆ. ಇದರಿಂದಾಗಿ ಅದಾನಿ ಗ್ರೂಪ್‌ಯು ವಂಚನೆಯನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ ಎಂದು ವರದಿ ಹೇಳಿದೆ. ಹೀಗೆ ಹಲವಾರು ವಂಚನೆ ಆರೋಪ ಮಾಡಿದೆ.
ಆದರೆ ಈ ಎಲ್ಲ ಆರೋಪವನ್ನು ಅದಾನಿ ಸಂಸ್ಥೆಯು ನಿರಾಕರಿಸಿದೆ. ಇತ್ತೀಚೆಗೆ ಗೌತಮ್ ಅದಾನಿ ಷೇರುದಾರರ ಸಭೆಯಲ್ಲಿಯೂ ಈ ಬಗ್ಗೆ ಮಾತನಾಡಿದ್ದಾರೆ. ಹಿಂಡನ್‌ಬರ್ಗ್ ವರದಿಯು ಗ್ರೂಪ್ ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಅದಾನಿ ತಿಳಿಸಿದ್ದಾರೆ.
"ಹಿಂಡನ್‌ಬರ್ಗ್ ವರದಿಯು ಅದಾನಿ ಗ್ರೂಪ್‌ನ ಪ್ರತಿಷ್ಠೆಗೆ ಧಕ್ಕೆ ಉಂಟು ಮಾಡುವ ಉದ್ದೇಶಪೂರ್ವಕ, ದುರುದ್ದೇಶಪೂರಿತ ಪ್ರಯತ್ನವಾಗಿದೆ. ಅಲ್ಪಾವಧಿಯಲ್ಲಿ ಅದಾನಿ ಗ್ರೂಪ್ ಷೇರು ಕುಸಿಯುವಂತೆ ಮಾಡಿ ಅದರ ಲಾಭವನ್ನು ಪಡೆಯುವ ಪ್ರಯತ್ನವಾಗಿದೆ," ಎಂದು ಅದಾನಿ ಎಂಟರ್‌ಪ್ರೈಸಸ್‌ನ ಎಜಿಎಂನಲ್ಲಿ ಷೇರುದಾರರಿಗೆ ಗೌತಮ್ ಅದಾನಿ ಹೇಳಿದ್ದಾರೆ.


Click it and Unblock the Notifications