ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧವು ಸೋಮವಾರ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ. ಈ ನಡುವೆ ಅದಾನಿ ಪೋರ್ಟ್ಸ್ ಹೈಫಾ ಬಂದರುಗಳ ಕುರಿತು ಮಹತ್ವದ ಹೇಳಿಕೆಯನ್ನು ನೀಡಿದೆ. ಇರಾನ್ ಬೆಂಬಲಿತ ಹಮಾಸ್ ಇಸ್ರೇಲ್ ಮೇಲೆ 5,000 ರಾಕೆಟ್‌ಗಳನ್ನು ಉಡಾಯಿಸಿದೆ.
ಇದಾದ ಬಳಿಕ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಅದಾನಿ ಗ್ರೂಪ್ ಷೇರುಗಳು ಕುಸಿತ ಕಂಡಿದೆ. ಅದಾನಿ ಗ್ರೂಪ್ ಈ ವರ್ಷದ ಆರಂಭದಲ್ಲಿ ಇಸ್ರೇಲಿ ಬಂದರು ಹೈಫಾವನ್ನು 1.2 ಬಿಲಿಯನ್ ಡಾಲರ್‌ಗೆ ಸ್ವಾಧೀನಪಡಿಸಿಕೊಂಡಿದೆ ಎಂಬುವುದು ಗಮನಾರ್ಹ. ಇನ್ನು ಹಡಗು ಕಂಟೈನರ್‌ಗಳ ವಿಷಯದಲ್ಲಿ ಹೈಫಾ ಬಂದರು ಇಸ್ರೇಲ್‌ನ ಎರಡನೇ ಅತಿದೊಡ್ಡ ಬಂದರಾಗಿದೆ.

ಮಹತ್ವದ ಹೇಳಿಕೆ ನೀಡಿದ ಅದಾನಿ ಸಂಸ್ಥೆ
"ಇಂತಹ ಸಮಯದಲ್ಲಿ, ನಾವು ಎಂದಿನಂತೆಯೇ ಇಸ್ರೇಲ್ ಜನರೊಂದಿಗೆ ನಿಲ್ಲುತ್ತೇವೆ. ದಕ್ಷಿಣ ಇಸ್ರೇಲ್‌ನಲ್ಲಿರುವ ಈ ಪ್ರದೇಶದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ನಾವು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಆದರೆ ಹೈಫಾ ಬಂದರು ಉತ್ತರದಲ್ಲಿದೆ," ಎಂದು ಅದಾನಿ ಗ್ರೂಪ್ ಹೇಳಿಕೆಯಲ್ಲಿ ತಿಳಿಸಿದೆ.
"ನಮ್ಮ ಉದ್ಯೋಗಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ನಾವು ಸಂಪೂರ್ಣವಾಗಿ ಜಾಗರೂಕರಾಗಿರುತ್ತೇವೆ. ವ್ಯಾಪಾರ ಮುಂದುವರಿಸುವ ಯೋಜನೆಯನ್ನು ಸಿದ್ಧರಾಗಿರುತ್ತೇವೆ. ಹಾಗೆಯೇ ಯಾವುದೇ ಘಟನೆಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ನಮಗೆ ಅದು ಅವಕಾಶ ನೀಡುತ್ತದೆ," ಎಂದು ಕೂಡಾ ಅದಾನಿ ಸಂಸ್ಥೆ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
"ಎಪಿಎಸ್‌ಇಜೆಡ್‌ನ ಸಂಖ್ಯೆಯಲ್ಲಿ ಹೈಫಾದ ಒಟ್ಟಾರೆ ಕೊಡುಗೆಯು ಒಟ್ಟು ಸರಕು ಪರಿಮಾಣದ ಶೇಕಡ 3 ರಷ್ಟು ಚಿಕ್ಕದಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (ಎಪ್ರಿಲ್ 23-ಮಾರ್ಚ್ 24), ನಾವು ಹೈಫಾ ಕಾರ್ಗೋ ವಾಲ್ಯೂಮ್‌ಗಳ ಶ್ರೇಣಿ 10-12 ಎಂಎಂಟಿ ಮತ್ತು ಎಪಿಎಸ್‌ಇಜೆಡ್‌ನ ಒಟ್ಟು ಸರಕು ಪರಿಮಾಣ 370-390 ಎಂಎಂಟಿ ಆಗಿದೆ," ಎಂದು ಉಲ್ಲೇಖಿಸಲಾಗಿದೆ.
ಇಂದು, ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯದ (APSEZ) ಷೇರಿನ ಬೆಲೆಯು ಮಧ್ಯಾಹ್ನ 2:37 ಕ್ಕೆ ಶೇಕಡ 4.88 ರಷ್ಟು ಇಳಿದು ಪ್ರತಿ ಷೇರಿಗೆ 790 ರೂಪಾಯಿಯಂತೆ ವಹಿವಾಟು ನಡೆಸುತ್ತಿದೆ. ಈ ನಡುವೆ ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಗ್ರೀನ್ ಎನರ್ಜಿ ಸೇರಿದಂತೆ ಹೆಚ್ಚಿನ ಅದಾನಿ ಸಮೂಹದ ಷೇರುಗಳು ಇಂದು ನಷ್ಟದಲ್ಲಿದೆ.
ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧ
ಶನಿವಾರದ ದಾಳಿಯಲ್ಲಿ ದೇಶದಲ್ಲಿ ಸುಮಾರು 700 ಮಂದಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಅವರಲ್ಲಿ ಮಕ್ಕಳು ಕೂಡಾ ಸೇರಿದ್ದಾರೆ. ಇನ್ನು ಎರಡನೇ ದಿನವೂ ಯುದ್ಧ ಮುಂದುವರೆದಿದೆ.


Click it and Unblock the Notifications