ಅದಾನಿ ಗ್ರೂಪ್‌ನ ಸಂಸ್ಥೆಯಾದ ಅದಾನಿ ಪೋರ್ಟ್ಸ್‌ನ ಸ್ಟಾಕ್ ಮಂಗಳವಾರ ಸಾರ್ವಕಾಲಿಕ ಏರಿಕೆಯಾಗಿದೆ. ಅದಾನಿ ಪೋರ್ಟ್ಸ್ ಷೇರಿನ ಮೇಲೆ ಹೂಡಿಕೆದಾರರ ಚಿತ್ತ ನೆಟ್ಟಿದೆ. ಇದರಿಂದಾಗಿ ಸಂಸ್ಥೆಯ ಮಾರುಕಟ್ಟೆ ಮೌಲ್ಯವು ಸುಮಾರು ಎರಡು ಲಕ್ಷ ಕೋಟಿ ರೂಪಾಯಿ ದಾಟಿದೆ. ಸತತ ಆರನೇ ಸೆಷನ್‌ನಲ್ಲಿ ಅದಾನಿ ಪೋರ್ಟ್ಸ್ ಸ್ಟಾಕ್ ಲಾಭವನ್ನು ಬಾಚಿಕೊಂಡಿದೆ.
ಈ ತಿಂಗಳಲ್ಲಿ ಅದಾನಿ ಪೋರ್ಟ್ಸ್ ಸ್ಟಾಕ್ ಸುಮಾರು ಶೇಕಡ 13ರಷ್ಟು ಜಿಗಿತ ಕಂಡಿದೆ. ಸುಮಾರು 100 ಶೇಕಡಕ್ಕಿಂತ ಅಧಿಕ ರಿಟರ್ನ್ ಅನ್ನು ನೀಡುವ ಮಲ್ಟಿಬ್ಯಾಗರ್ ಸ್ಟಾಕ್ ಇದಾಗಿದೆ. ಅಷ್ಟು ಮಾತ್ರವಲ್ಲದೆ ಹೂಡಿಕೆದಾರರ ಸಂಪತ್ತು ಮೂರು ಪಟ್ಟು ಅಧಿಕವಾಗಿದೆ.
ಇನ್ನು ಮಂಗಳವಾರ ಬಾಂಬೆ ಸ್ಟಾಕ್ ಮಾರುಕಟ್ಟೆಯಲ್ಲಿ ಅದಾನಿ ಪೋರ್ಟ್ಸ್ ಷೇರು 10.20 ರೂಪಾಯಿ ಅಥವಾ ಶೇಕಡ 1.09ರಷ್ಟು ಹೆಚ್ಚಾಗಿ 948.85ಕ್ಕೆ ವಹಿವಾಟು ಸ್ಥಗಿತ ಮಾಡಿದೆ. ಸೆಪ್ಟೆಂಬರ್ 14ರಂದು ಮಧ್ಯಾಹ್ನದ ಹೊತ್ತಿಗೆ ಅದಾನಿ ಸ್ಟಾಕ್ ಸುಮಾರು ಶೇಕಡ 0.48ರಷ್ಟು ಅಥವಾ 4.55 ರೂಪಾಯಿ ಏರಿ 953.35ಕ್ಕೆ ತಲುಪಿದೆ. ಇನ್ನು ಈ ಷೇರು ಹೊಸ ದಾಖಲೆಯನ್ನು ಕೂಡಾ ಬರೆದಿದೆ. ಪ್ರಸ್ತುತ ಮಾರುಕಟ್ಟೆ ಮೌಲ್ಯ ಎಷ್ಟಿದೆ, ಕೊನೆಯ ವಹಿವಾಟಿನ ಅಂತ್ಯದಲ್ಲಿ ಎಷ್ಟಿತ್ತು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....
ಹೊಸ ದಾಖಲೆ ಬರೆದ ಅದಾನಿ ಪೋರ್ಟ್ಸ್ ಷೇರು
ಷೇರು ಮಾರುಕಟ್ಟೆಯಲ್ಲಿ ಅದಾನಿ ಪೋರ್ಟ್ಸ್ ಷೇರು ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ವಹಿವಾಟಿನ ನಡುವಲ್ಲಿ ಸುಮಾರು 953.80 ರೂಪಾಯಿಗೆ ಏರಿಕೆಯಾಗುವ ಮೂಲಕ ಅದಾನಿ ಪೋರ್ಟ್ಸ್ ಷೇರು ಹೊಸ ದಾಖಲೆಯನ್ನು ಬರೆದಿದೆ. ಸೋಮವಾರದ ವಹಿವಾಟಿಗೆ ಹೋಲಿಕೆ ಮಾಡಿದಾಗ ಮಂಗಳವಾರದ ವಹಿವಾಟಿನಲ್ಲಿ ಅದಾನಿ ಪೋರ್ಟ್ಸ್ ಷೇರು ಸುಮಾರು ಶೇಕಡ 1.6ರಷ್ಟು ಜಿಗಿದಿದೆ. ಈ ಹಿಂದಿನ ವಹಿವಾಟಿನ ಅಂತ್ಯದಲ್ಲಿ ಸಂಸ್ಥೆಯ ಮಾರುಕಟ್ಟೆ ಮೌಲ್ಯವು 2,00,432.53 ಕೋಟಿ ರೂಪಾಯಿ ಆಗಿತ್ತು. ಪ್ರಸ್ತುತ ಸೆಪ್ಟೆಂಬರ್ 14ರಂದು ಮಧ್ಯಾಹ್ನದ ಹೊತ್ತಿಗೆ ಅದಾನಿ ಪೋರ್ಟ್ಸ್ ಮಾರುಕಟ್ಟೆ ಮೌಲ್ಯವು 2.01 ಟ್ರಿಲಿಯನ್ ರೂಪಾಯಿ ಆಗಿದೆ. ದಲಾಲ್ ಸ್ಟ್ರೀಟ್‌ನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಅದಾನಿ ಪೋರ್ಟ್ಸ್ ಷೇರು ಸುಮಾರು ಶೇಕಡ 13.25ರಷ್ಟು ಏರಿಕೆಯಾಗಿದೆ.
ಹೂಡಿಕೆದಾರರ ಸಂಪತ್ತು 3 ಪಟ್ಟು ಜಿಗಿತ
ವರ್ಷದಲ್ಲಿ ಅದಾನಿ ಷೇರು ಸುಮಾರು ಶೇಕಡ 27ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 13ರಂದು ಅದಾನಿ ಪೋರ್ಟ್ಸ್ ಷೇರು ಮೌಲ್ಯವು ಸುಮಾರು 745 ರೂಪಾಯಿಗಿಂತ ಕೆಳಗಿತ್ತು. ಆದರೆ ಪ್ರಸ್ತುತ 953.35ಕ್ಕೆ ತಲುಪಿದೆ. ಇನ್ನು ಎರಡು ವರ್ಷದಲ್ಲಿ ಅದಾನಿ ಪೋರ್ಟ್ಸ್ ಸ್ಟಾಕ್ ಸುಮಾರು ಶೇಕಡ 177ರಷ್ಟು ಲಾಭವನ್ನು ಪಡೆದುಕೊಂಡಿದೆ. 2020ರ ಸೆಪ್ಟೆಂಬರ್ 11ರಂದು ಅದಾನಿ ಪೋರ್ಟ್ಸ್ ಷೇರು ದರವು 342 ರೂಪಾಯಿ ಆಗಿತ್ತು. ಈ ಲೆಕ್ಕಾಚಾರದಲ್ಲಿ ನಾವು ನೋಡಿದಾಗ ಈ ಎರಡು ವರ್ಷದಲ್ಲೇ ಅದಾನಿ ಪೋರ್ಟ್ಸ್ ಹೂಡಿಕೆದಾರರ ಸಂಪತ್ತು ಮೂರು ಪಟ್ಟು ಅಧಿಕವಾಗಿದೆ.
ಅದಾನಿ ಪೋರ್ಟ್ಸ್ ನಿವ್ವಳ ಆದಾಯವೆಷ್ಟು?
ಅದಾನಿ ಪೋರ್ಟ್ಸ್ ಪ್ರಸ್ತುತ ದೇಶದಲ್ಲಿ ಕಾರ್ಗೋ ಲೆಕ್ಕಾಚಾರದಲ್ಲಿ ಅತೀ ದೊಡ್ಡ ಸಂಸ್ಥೆಯಾಗಿದೆ. ಪ್ರಸ್ತುತ 13 ಪೋರ್ಟ್‌ಗಳನ್ನು ಅದಾನಿ ಪೋರ್ಟ್ಸ್ ಹೊಂದಿದೆ. ಪ್ರಮುಖವಾಗಿ ಮಹಾರಾಷ್ಟ್ರ, ಗುಜರಾತ್, ಗೋವಾ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು, ಒಡಿಶಾದಲ್ಲಿ ಅದಾನಿ ಸಂಸ್ಥೆಯ ಪೋರ್ಟ್‌ಗಳು ಇದೆ. ಇನ್ನು ಹಣಕಾಸು ವರ್ಷ 2023ರ ಮೊದಲ ತ್ರೈಮಾಸಿಕದಲ್ಲಿ (ಎಪ್ರಿಲ್-ಜೂನ್ 2022) ಅದಾನಿ ಪೋರ್ಟ್ಸ್‌ನ ನಿವ್ವಳ ಆದಾಯದಲ್ಲಿ ಸುಮಾರು ಶೇಕಡ 16.09ರಷ್ಟು ಕುಸಿತ ಕಂಡು ಬಂದಿದ್ದು ನಿವ್ವಳ ಆದಾಯ 1,072.38 ಕೋಟಿ ರೂಪಾಯಿಗೆ ಇಳಿದಿದೆ. ಕಳೆದ ವರ್ಷ 1,277.99 ರೂಪಾಯಿ ನಿವ್ವಳ ಆದಾಯವಾಗಿತ್ತು. ಇನ್ನು 2023ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಆದಾಯವು ಶೇಕಡ 20.62ರಷ್ಟು ಹೆಚ್ಚಳವಾಗಿ ರೂಪಾಯಿ 4,637.95 ಕೋಟಿಗೆ ತಲುಪಿದೆ. ಇನ್ನು 2022ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 3,845.03 ಕೋಟಿ ರೂಪಾಯಿ ಆಗಿತ್ತು.


Click it and Unblock the Notifications