ಅದಾನಿ ಗ್ರೂಪ್ ಷೇರು ಮಾರುಕಟ್ಟೆಯಲ್ಲಿ ವಂಚನೆಯನ್ನು ಮಾಡಿದೆ, ಹಲವಾರು ವಂಚನೆಗಳಲ್ಲಿ ಭಾಗಿಯಾಗಿದೆ ಎಂದು ಜನವರಿಯಲ್ಲಿ ಹಿಂಡನ್‌ಬರ್ಗ್ ವರದಿಯೊಂದನ್ನು ಮಾಡಿದೆ. ಈ ವರದಿ ಭಾರತದ ಷೇರುಪೇಟೆಯಲ್ಲಿ ಭಾರೀ ಸಂಚಲನವನ್ನು ಉಂಟು ಮಾಡಿದೆ. ವರದಿ ಬಳಿಕ ಅದಾನಿ ಗ್ರೂಪ್ ಸ್ಟಾಕ್‌ಗಳು ನಿರಂತರವಾಗಿ ಕುಸಿದಿದ್ದು, ಈಗ ಭಾರತದ ಅತೀ ಮೌಲ್ಯಯುತ 25 ಸ್ಟಾಕ್‌ಗಳ ಪಟ್ಟಿಯಿಂದ ಅದಾನಿ ಗ್ರೂಪ್ ಸ್ಟಾಕ್‌ಗಳು ಔಟ್ ಆಗಿದೆ.
ಅದಾನಿ ಗ್ರೂಪ್‌ನ ಯಾವುದೇ ಸ್ಟಾಕ್‌ಗಳು ಕೂಡಾ ಈ 25 ಮೌಲ್ಯಯುತ ಸ್ಟಾಕ್‌ಗಳ ಪಟ್ಟಿಯಲ್ಲಿ ಕಂಡುಬಂದಿಲ್ಲ. ಇನ್ನು ಅದಾನಿ ಗ್ರೂಪ್‌ನ ಎಲ್ಲ ಸ್ಟಾಕ್‌ಗಳ ಮೌಲ್ಯವನ್ನು ಲೆಕ್ಕ ಹಾಕಿದಾಗ, ಗ್ರೂಪ್ ಮಾರುಕಟ್ಟೆ ಮೌಲ್ಯವು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯ ಮತ್ತು ಇತರೆ ನಾಲ್ಕು ಸ್ಟಾಕ್‌ಗಳ ಮಾರುಕಟ್ಟೆ ಮೌಲ್ಯಕ್ಕಿಂತ ಕೆಳಕ್ಕೆ ಕುಸಿದಿದೆ.
ತನಿಖಾ ಸಂಸ್ಥೆ ಹಿಂಡೆನ್‌ಬರ್ಗ್ ಅದಾನಿ ಗ್ರೂಪ್ ವಿರುದ್ಧ ಭಾರೀ ವಂಚನೆ ಆರೋಪ ಮಾಡಿದೆ. ಲೆಕ್ಕಪತ್ರ ವಂಚನೆಯಲ್ಲಿ ಹಾಗೂ ಸ್ಟಾಕ್ ಮ್ಯಾನಿಪ್ಯುಲೇಷನ್‌ನಲ್ಲಿ ಅದಾನಿ ಗ್ರೂಪ್ ಭಾಗವಹಿಸಿದೆ ಎಂದು ಹಿಂಡೆನ್‌ಬರ್ಗ್ ತನಿಖಾ ವರದಿ ಹೇಳಿದೆ. ಈ ಆರೋಪವನ್ನು ಅದಾನಿ ಗ್ರೂಪ್ ಅಲ್ಲಗಳೆದಿದೆ. 413 ಪುಟಗಳ ಉತ್ತರವನ್ನು ಕೂಡಾ ಅದಾನಿ ಗ್ರೂಪ್ ನೀಡಿದೆ. ಆದರೆ ಈ ಅದಾನಿ ಗ್ರೂಪ್ ಸ್ಟಾಕ್‌ಗಳು ಮಾತ್ರ ನಿರಂತರವಾಗಿ ಕುಸಿತ ಕಂಡಿದೆ. ಸ್ಟಾಕ್‌ಗಳ ಮಾರುಕಟ್ಟೆ ಮೌಲ್ಯದ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ, ಮುಂದೆ ಓದಿ....
ಅದಾನಿ ಸ್ಟಾಕ್‌ಗಳು ಪ್ರಸ್ತುತ ಯಾವ ಸ್ಥಾನದಲ್ಲಿದೆ?
ಮಾರುಕಟ್ಟೆ ಮೌಲ್ಯದ ಲೆಕ್ಕಾಚಾರದಲ್ಲಿ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಬಿಎಸ್‌ಇ (ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್) 27ನೇ ಸ್ಥಾನದಲ್ಲಿದ್ದು ಮಾರುಕಟ್ಟೆ ಮೌಲ್ಯ (m-cap) 1,78,798 ಕೋಟಿ ರೂಪಾಯಿ ಆಗಿದೆ. ಅದಾನಿ ಪೋರ್ಟ್ & ಎಸ್‌ಇಜೆಡ್ ಮಾರುಕಟ್ಟೆ ಮೌಲ್ಯ 1,26,001 ಕೋಟಿ ರೂಪಾಯಿ ಆಗಿದ್ದು, ಸ್ಟಾಕ್ 37ನೇ ಸ್ಥಾನದಲ್ಲಿದೆ. ಅದಾನಿ ಟೋಟಲ್ ಗ್ಯಾಸ್ 49ನೇ ಸ್ಥಾನಕ್ಕೆ ಇಳಿದಿದ್ದು, ಮಾರುಕಟ್ಟೆ ಮೌಲ್ಯ 96,657 ಕೋಟಿ ರೂಪಾಯಿ ಆಗಿದೆ. ಇನ್ನು ಅದಾನಿ ಟ್ರಾನ್ಸ್‌ಮಿಷನ್ ಮತ್ತು ಅದಾನಿ ಗ್ರೀನ್ ಎನರ್ಜಿ 53, 54ನೇ ಸ್ಥಾನದಲ್ಲಿದೆ. ಮಾರುಕಟ್ಟೆ ಮೌಲ್ಯ ಕ್ರಮವಾಗಿ 92,613.78 ಕೋಟಿ ರೂ., 89,917.60 ಕೋಟಿ ರೂ. ಆಗಿದೆ.
ಈ ಹಿಂದಿನ ಮಾರುಕಟ್ಟೆ ಮೌಲ್ಯ
ಜನವರಿ 25ರಂದು ಹಿಂಡನ್‌ಬರ್ಗ್ ವರದಿಯು ಪ್ರಕಟವಾಗಿದೆ. ಅದಕ್ಕೂ ಮುಂಚಿನ ದಿನ ಅಂದರೆ ಜನವರಿ 24ರಂದು ಅದಾನಿ ಟೋಟಲ್ ಗ್ಯಾಸ್ ಮಾರುಕಟ್ಟೆ ಮೌಲ್ಯವು 4,27,326 ಕೋಟಿ ರೂಪಾಯಿ ಆಗಿದೆ. ಅದಾನಿ ಎಂಟರ್‌ಪ್ರೈಸಸ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಗ್ರೀನ್ ಮೂರರ ಮಾರುಕಟ್ಟೆ ಮೌಲ್ಯ 3-4 ಲಕ್ಷ ಕೋಟಿ ರೂಪಾಯಿ ಆಗಿತ್ತು. ಅದಾನಿ ಟೋಟಲ್ ಗ್ಯಾಸ್ ಮಾರುಕಟ್ಟೆ ಮೌಲ್ಯ ಇಂದಿಗೂ 4,27,326 ಕೋಟಿ ರೂಪಾಯಿ ಆಗಿದ್ದರೆ, ಬಿಎಸ್‌ಇಯಲ್ಲಿ ಇಂದು 11ನೇ ಸ್ಥಾನದಲ್ಲಿರುತ್ತಿದ್ದ ಸ್ಟಾಕ್ ಇದಾಗಿತ್ತು. ಜನವರಿ 24ರಂದು ಅದಾನಿ ಟ್ರಾನ್ಸ್‌ಮಿಷನ್ ಮಾರುಕಟ್ಟೆ ಮೌಲ್ಯ 3,92,474 ಕೋಟಿ ರೂಪಾಯಿ ಆಗಿದ್ದು, 12ನೇ ಸ್ಥಾನದಲ್ಲಿರುತ್ತಿತ್ತು.
ಎಚ್‌ಡಿಎಫ್‌ಸಿ ಬ್ಯಾಂಕ್ ಮೌಲ್ಯಕ್ಕಿಂತ ಕೆಳಕ್ಕೆ
ಅದಾನಿ ಗ್ರೂಪ್‌ನ 10 ಸ್ಟಾಕ್‌ಗಳು ಒಟ್ಟು ಸೇರಿದಾಗ ಮಂಗಳವಾರದ ವೇಳೆಗೆ ಮಾರುಕಟ್ಟೆ ಮೌಲ್ಯವು 8,09,182 ಕೋಟಿ ರೂಪಾಯಿ ಆಗಿದೆ. ಈ ಮೌಲ್ಯವು ಎಚ್‌ಡಿಎಫ್‌ಸಿ ಬ್ಯಾಂಕ್ ಒಂದರ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆಯಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಮಾರುಕಟ್ಟೆ ಮೌಲ್ಯ 9,18,703.53 ಕೋಟಿ ರೂಪಾಯಿ ಆಗಿದೆ. ಜನವರಿ 24ರಂದು ಅದಾನಿ ಗ್ರೂಪ್‌ನ ಎಲ್ಲ ಸ್ಟಾಕ್‌ಗಳ ಮಾರುಕಟ್ಟೆ ಮೌಲ್ಯ ಸೇರಿದಾಗ 19.19 ಲಕ್ಷ ಕೋಟಿ ರೂಪಾಯಿ ಆಗಿತ್ತು. ರಿಲಯನ್ಸ್ ಇಂಡಸ್ಟ್ರೀಯ ಮೌಲ್ಯಕ್ಕಿಂತ ಅಧಿಕವಾಗಿತ್ತು. ಹಿಂಡನ್‌ಬರ್ಗ್ ಆರೋಪದ ಬಳಿಕ ಅದಾನಿ ಗ್ರೂಪ್ 11,10,706 ಕೋಟಿ ರೂಪಾಯಿ ಅಥವಾ 134 ಬಿಲಿಯನ್ ಡಾಲರ್‌ನಷ್ಟು ಮೌಲ್ಯವನ್ನು ಕಳೆದುಕೊಂಡಿದೆ.


Click it and Unblock the Notifications