ಸ್ಟಾಕ್ ಮಾರುಕಟ್ಟೆಯಲ್ಲಿ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಅದಾನಿ ಗ್ರೂಪ್‌ನ ಷೇರುಗಳು ಏರಿಕೆಯಾಗಿದೆ. ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿದೆ ಎಂಬ ಹಿಂಡನ್‌ಬರ್ಗ್ ವರದಿ ಬಳಿಕ ಸ್ಟಾಕ್ ಮಾರುಕಟ್ಟೆಯಲ್ಲಿ ಗ್ರೂಪ್ ಭಾರೀ ನಷ್ಟವನ್ನು ಕಂಡಿದೆ. ಆದರೆ ಈಗ ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದು ಸೋಮವಾರ (ಏಪ್ರಿಲ್ 10) ಸ್ಟಾಕ್‌ಗಳು ಸುಮಾರು ಶೇಕಡ 2ರಷ್ಟು ಏರಿಕೆ ದಾಖಲಿಸಿದೆ. ಮುಖ್ಯವಾಗಿ ಅದಾನಿ ಗ್ರೂಪ್‌ನ ಷೇರುಗಳು ಗುರುವಾರದ ದರಕ್ಕಿಂತ ಅಧಿಕ ದರಕ್ಕೆ ತಲುಪಿದೆ.
ಅದಾನಿ ಗ್ರೂಪ್‌ನ ಒಟ್ಟು 10 ಷೇರುಗಳ ಪೈಕಿ ಮೂರು ಷೇರುಗಳು ಶೇಕಡ 5ರಷ್ಟು ಏರಿದೆ. ಹಾಗೆಯೇ ಸೋಮವಾರ ಷೇರು ಮಾರುಕಟ್ಟೆಯಲ್ಲಿ ಕಂಡ ಗೂಳಿಯಾಟಕ್ಕೆ ಅದಾನಿ ಗ್ರೂಪ್ ಕೊಡುಗೆ ಅಧಿಕವಾಗಿದೆ. ದೇಶದ ಎರಡನೇ ಶ್ರೀಮಂತ ವ್ಯಕ್ತಿಯಾದ, ಈ ಹಿಂದೆ ವಿಶ್ವದ ಟಾಪ್ 10 ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿದ್ದ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್‌ನ ಅದಾನಿ ಎಂಟರ್‌ಪ್ರೈಸಸ್ ಷೇರಿಗೆ ಅಧಿಕ ಬೇಡಿಕೆ ಕಂಡು ಬಂದಿದೆ. ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್‌ಮಿಷನ್ ಗರಿಷ್ಠ ಬೆಲೆಯನ್ನು ದಾಟಿದೆ. ಎನ್‌ಎಸ್‌ಇ, ಬಿಎಸ್‌ಇ ಎರಡು ಮಾರುಕಟ್ಟೆಯಲ್ಲೂ ಅದಾನಿ ಸ್ಟಾಕ್ ಏರಿಕೆ ಕಂಡಿದೆ.

ಏರಿಕೆ ಕಂಡ ಸ್ಟಾಕ್‌ಗಳ ಬಗ್ಗೆ ಮಾಹಿತಿ
ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್: ಅದಾನಿ ಎಂಟರ್‌ಪ್ರೈಸಸ್‌ನ ಮಾರುಕಟ್ಟೆ ದರ ಈ ಹಿಂದೆ ವಹಿವಾಟಿನ ಅಂತ್ಯದಲ್ಲಿದ್ದ ದರಕ್ಕಿಂತ ಈ ದಿನದ ವಹಿವಾಟದ ಆರಂಭದಲ್ಲಿ ಶೇಕಡ 2.04ರಷ್ಟು ಏರಿಕೆಯಾಗಿದೆ. ಏರಿಕೆ ಬಳಿಕ ಪ್ರತಿ ಷೇರಿಗೆ 1,789.75 ರೂಪಾಯಿ ಆಗಿದೆ. ವೈವಿಧ್ಯಮಯ ವಲಯಗಳನ್ನು ನಿರ್ವಹಣೆ ಮಾಡುವ ಅತೀ ದೊಡ್ಡ ಸ್ಟಾಕ್ ಇದಾಗಿದೆ.
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್: ಅದಾನಿ ಗ್ರೀನ್ ಎನರ್ಜಿ ಶೇಕಡ 5ರಷ್ಟು ಏರಿಕೆ ಕಾಣುವ ಮೂಲಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಸ್ಟಾಕ್‌ನ ಆರಂಭಿಕ ವಹಿವಾಟಿನ ಬಳಿಕದ ದರವು ಪ್ರತಿ ಷೇರಿಗೆ 899.15 ರೂಪಾಯಿ ಆಗಿದೆ. ಪವರ್ ಸೆಕ್ಟರ್‌ನಲ್ಲಿ ಅತೀ ದೊಡ್ಡ ಸ್ಟಾಕ್ ಇದಾಗಿದೆ.
ಅದಾನಿ ಟೋಟಲ್ ಗ್ಯಾಸ್: ಅದಾನಿ ಟೋಟಲ್ ಗ್ಯಾಸ್ ಸ್ಟಾಕ್ ಕೂಡಾ ಶೇಕಡ 5ರಷ್ಟು ಏರಿಕೆಯನ್ನು ಕಂಡಿದೆ. ಆರಂಭಿಕ ವಹಿವಾಟಿನ ಬಳಿಕ ಪ್ರತಿ ಸ್ಟಾಕ್‌ನ ಮೌಲ್ಯವು 906.15 ರೂಪಾಯಿ ಆಗಿದೆ. ಗ್ಯಾಸ್ ಹಾಗೂ ಪೆಟ್ರೋಲಿಯಂ ವಲಯದಲ್ಲಿರುವ ಅತೀ ದೊಡ್ಡ ಸ್ಟಾಕ್ ಇದಾಗಿದೆ.
ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್: ಸೋಮವಾರ ಆರಂಭಿಕವಾಗಿ ಅದಾನಿ ಟ್ರಾನ್ಸ್‌ಮಿಷನ್ ಶೇಕಡ 5ರಷ್ಟು ಏರಿಕೆಯಾಗಿದೆ. ವಹಿವಾಟಿನ ಆರಂಭದ ಬಳಿಕ ಅದಾನಿ ಟ್ರಾನ್ಸ್‌ಮಿಷನ್ ಪ್ರತಿ ಷೇರಿನ ದರವು 1000.85 ರೂಪಾಯಿ ಆಗಿದೆ. ಪವರ್ ಸೆಕ್ಟರ್‌ನಲ್ಲಿರುವ ಅತೀ ದೊಡ್ಡ ಸ್ಟಾಕ್ ಇದಾಗಿದೆ.
ವಹಿವಾಟಿನ ಅಂತ್ಯದಲ್ಲಿ ಅದಾನಿ ಸ್ಟಾಕ್ ಹೇಗಿದೆ?
ಈ ಸಮಯಕ್ಕೆ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಶೇಕಡ 2.45ರಷ್ಟು ಏರಿಕೆಯಾಗಿ 1,797.00 ರೂಪಾಯಿಗೆ ತಲುಪಿದೆ. ಅದಾನಿ ವಿಲ್ಮಾರ್ ಸ್ಟಾಕ್ ಶೇಕಡ 0.20ರಷ್ಟು ಹೆಚ್ಚಳವಾಗಿ, 410.00 ರೂಪಾಯಿಗೆ ತಲುಪಿದೆ. ಅದಾನಿ ಪೋರ್ಟ್ಸ್ ಶೇಕಡ 1.66ರಷ್ಟು ಜಿಗಿದು, 652.25 ರೂಪಾಯಿಗೆ ತಲುಪಿದೆ. ಅಂಬುಜಾ ಸಿಮೆಂಟ್ ಸ್ಟಾಕ್ ಶೇಕಡ 0.25ರಷ್ಟು ಏರಿಕೆಯಾಗಿದ್ದು, 384.55 ರೂಪಾಯಿಗೆ ತಲುಪಿದೆ.
ಎಸಿಸಿ ಶೇಕಡ 1.93ರಷ್ಟು ಜಿಗಿದು,1,745.00 ರೂಪಾಯಿಗೆ ತಲುಪಿದೆ. ಅದಾನಿ ಟ್ರಾನ್ಸ್‌ಮಿಷನ್ ಶೇಕಡ 5.00ರಷ್ಟು ಏರಿಕೆಯಾಗಿ, 1,000.85 ರೂಪಾಯಿಗೆ ತಲುಪಿದೆ. ಅದಾನಿ ಟೋಟಲ್ ಗ್ಯಾಸ್ ಶೇ.5.00ರಷ್ಟು ಹೆಚ್ಚಳವಾಗಿ 906.15 ರೂಪಾಯಿ ಆಗಿದೆ. ಅದಾನಿ ಗ್ರೀನ್ ಎನರ್ಜಿ ಶೇ.5.00ರಷ್ಟು ಜಿಗಿದು, 899.15ಕ್ಕೆ ತಲುಪಿದೆ. ಎನ್‌ಡಿಟಿವಿ ಶೇಕಡ 0.15ರಷ್ಟು ಏರಿಕೆಯಾಗಿ 194.70 ರೂಪಾಯಿಗೆ ಮತ್ತು ಅದಾನಿ ಪವರ್ ಶೇಕಡ 0.96ರಷ್ಟು ಹೆಚ್ಚಳವಾಗಿ 194.05 ರೂಪಾಯಿಗೆ ತಲುಪಿದೆ.


Click it and Unblock the Notifications