ನವದೆಹಲಿ, ಮಾರ್ಚ್ 21: ರೇಮಂಡ್ಸ್ ಲಿಮಿಟೆಡ್ ಎಂಬ ವಸ್ತ್ರೋದ್ಯಮ ಸ್ಥಾಪಿಸಿ, ಸುಮಾರು 1000 ಕೋಟಿ ರೂ. ಆಸ್ತಿಯ ಒಡೆಯರಾಗಿ, ದೇಶದ ಸಿರಿವಂತರಲ್ಲಿ ಒಬ್ಬರಾಗಿದ್ದ ಡಾ.ವಿಜಯಪತ್ ಸಿಂಘಾನಿಯಾ ಎಷ್ಟು ಪ್ರಸಿದ್ದರೋ, ಅಷ್ಟೇ ಅವರ ಕುಟುಂಬದ ಮನಸ್ತಾಪ, ಜಗಳಗಳೂ ಜನಜನಿತವಾಗಿದೆ.
ಸಿಂಘಾನಿಯಾ ತಮ್ಮ ಮಗ ಗೌತಮ್ ಸಿಂಘಾನಿಯಾ ಆಡಳಿತ ಹಸ್ತಾಂತರಿಸಿದ ಬಳಿಕ ವಿಷಾದ ವ್ಯಕ್ತಪಡಿಸಿದ್ದು ಬಿಡಿಗಾಸಿಗೂ ಪರದಾಡಿದ್ದು ಒಂದೆಡೆಯಾದರೆ, ತಂದೆಗೆ ನಯಾಪೈಸೆಯನ್ನು ನೀಡದೆ ಬೀದಿಗೆ ತಳ್ಳಿದ ಅಪಖ್ಯಾತಿ ಸಿಂಘಾನಿಯಾ ಪುತ್ರ ಗೌತಮ್ ಗೆ ಅಂಟಿತ್ತು. ಇಷ್ಟು ಮಾತ್ರವಲ್ಲದೇ ಗೌತಮ್ ಸಿಂಘಾನಿಯಾ ಹಾಗೂ ಅವರ ಪತ್ನಿ ನವಾಜ್ ಮೋದಿಯ ವಿಚ್ಚೇದನವೂ ಬೀದಿ ಜಗಳವಾಗಿ ಮಾರ್ಪಟ್ಟಿತ್ತು.

ಉದ್ಯಮ ಹಾಗೂ ತಾವು ಕಷ್ಟಪಟ್ಟು ದುಡಿದು ಸಂಪಾದಿಸಿದ ಸಕಲ ಆಸ್ತಿಯನ್ನೂ ಸಿಂಘಾನಿಯಾ ಮಗ ಗೌತಮ್ ಹೆಸರಿಗೆ ಮಾಡಿಕೊಟ್ಟಿದ್ದರಿಂದ, ಸಿಂಘಾನಿಯಾ ಬಳಿ ಕಾರೂ ಹಾಗೂ ಸ್ವಂತ ಮನೆಯೂ ಇಲ್ಲದೇ ಬಾಡಿಗೆಗಾಗಿ ಹಣ ಹೊಂದಿಸಲು ಹರ ಸಾಹಸ ಪಡಬೇಕಾದ ಸ್ಥಿತಿಯನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.
ಹೀಗೆ ಕೌಟುಂಬಿಕ ಸಮಸ್ಯೆ, ತಂದೆ ಮಗನ ಮನಸ್ತಾಪಗಳು, ಜಗಜ್ಜಾಹೀರವಾದ ತಿಂಗಳುಗಳ ನಂತರ, ರೇಮಂಡ್ಸ್ ಕಂಪನಿಯ ಮಾಲೀಕ ಗೌತಮ್ ಸಿಂಘಾನಿಯಾ ಬುಧವಾರ ತಮ್ಮ ತಂದೆ ವಿಜಯಪತ್ ಸಿಂಘಾನಿಯಾ ಅವರ ಜೊತೆಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. "ತನ್ನ ಮಗ ತನ್ನಿಂದ ಎಲ್ಲವನ್ನೂ ಕಿತ್ತುಕೊಂಡಿದ್ದಾನೆ" ಎಂದು ವಿಜಯಪತ್ ಅವರು ಆರೋಪಿಸಿದ ತಿಂಗಳುಗಳ ನಂತರ ಈ ಪೋಟೋ ಹಂಚಿಕೊಂಡಿರುವುದು ತೀವ್ರ ಕುತೂಹಲ ಮೂಡಿಸಿದೆ.
ತಮ್ಮ ತಂದೆಯೊಂದಿಗಿನ ಫೋಟೋವನ್ನು ಹಂಚಿಕೊಂಡ ಗೌತಮ್, "ಇಂದು ನನ್ನ ತಂದೆ ಮನೆಯಲ್ಲಿದ್ದು, ಅವರೊಂದಿಗೆ ಕಾಲಕಳೆದಿರುವುದು ಸಂತೋಷವಾಗಿದೆ ಮತ್ತು ಅವರ ಆಶೀರ್ವಾದವನ್ನು ಕೋರುತ್ತೇನೆ. ಅಪ್ಪಾ ನೀವು ಸದಾ ಆರೋಗ್ಯವಾಗಿರಿ" ಎಂದು ಬರೆದುಕೊಂಡಿದ್ದಾರೆ.
ಒಂದು ಕಾಲದಲ್ಲಿ 36 ಅಂತಸ್ತು ಕಟ್ಟಡದ ಒಡೆಯರಾಗಿದ್ದ ವಿಜಯಪತ್ ಸಿಂಘಾನಿಯಾ, ಬಳಿಕ ಗ್ರ್ಯಾಂಡ್ ಪರಾಡಿ ಸೊಸೈಟಿಯ ಬಾಡಿಗೆ ಮನೆಯಲ್ಲಿದ್ದರು. 2017 ರಲ್ಲಿ, ದಕ್ಷಿಣ ಮುಂಬೈನಲ್ಲಿರುವ ಡ್ಯುಪ್ಲೆಕ್ಸ್ ಜೆಕೆ ಹೌಸ್ ಕಟ್ಟಡವನ್ನು ರೇಮಂಡ್ ಲಿಮಿಟೆಡ್ ತಮಗೆ ನೀಡಿಲ್ಲ ಎಂದು ಆರೋಪಿಸಿದ್ದರು. ಮಾತ್ರವಲ್ಲದೇ ಬಾಡಿಗೆಗಾಗಿ ಹಣ ಹೊಂದಿಸಲು ಹರ ಸಾಹಸ ಪಡಬೇಕಾಗಿದೆ ಎಂದು ವಿಜಯಪತ್ ಸಿಂಘಾನಿಯಾ ದೂರಿದ್ದರು. ಉದ್ಯಮ ಹಾಗೂ ತಾವು ಕಷ್ಟಪಟ್ಟು ದುಡಿದು ಸಂಪಾದಿಸಿದ ಸಕಲ ಆಸ್ತಿಯನ್ನೂ ಮಗ ಗೌತಮ್ ಹೆಸರಿಗೆ ಮಾಡಿಕೊಟ್ಟಿದ್ದರಿಂದ, ಇಂಥದ್ದೊಂದು ಪರಿಸ್ಥಿತಿ ಎದುರಿಸಬೇಕಾಗಿತ್ತು ಎಂದು ವಿಷಾದಿಸಿದ್ದರು.
ಗೌತಮ್ ಸಿಂಘಾನಿಯಾ ರೇಮಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಮಾರ್ಚ್ 20 ರ ಹೊತ್ತಿಗೆ 11539 ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿದ್ದು, ಸದ್ಯ ಹೆಂಡತಿಯೊಂದಿಗೆ ವಿಚ್ಛೇದನದ ಹೋರಾಟ ನಡೆಸುತ್ತಿದ್ದಾರೆ. ಅವರ ಪತ್ನಿ ನವಾಜ್ ಮೋದಿಯೂ ಪತಿಯ ಶೇ. 75ರಷ್ಟು ಆಸ್ತಿಯನ್ನು ಪರಿಹಾರವಾಗಿ ಪಡೆಯಲು ಕಾನೂನು ಅಂಗಳದಲ್ಲಿ ಹೋರಾಟ ನಡೆಸುತ್ತಿದ್ದಾರೆ. ನವಾಜ್ ಮೋದಿ ಈ ದಂಪತಿಗಳಿಗೆ ನಿಹಾರಿಕಾ ಮತ್ತು ನಿಸಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 34 ವರ್ಷದ ಹಿಂದೆ, 1999ರಲ್ಲಿ ಅವರಿಬ್ಬರ ವಿವಾಹವಾಗಿತ್ತು. 32 ವರ್ಷ ಕಾಲ ಅವರ ದಾಂಪತ್ಯ ಸಾಗಿತ್ತು.
ಗೌತಮ್ ಸಿಂಘಾನಿಯಾ ಅವರು 1986 ರಲ್ಲಿ ಸಿಂಘಾನಿಯಾ ಕುಟುಂಬದ JK ಗ್ರೂಪ್ ಆಫ್ ಕಂಪನಿಗಳಿಗೆ ಸೇರಿದರು. ನಂತರ ಅವರು ಕುಟುಂಬದ ರೇಮಂಡ್ ಗ್ರೂಪ್‌ಗೆ ಸೇರಿದರು, 1990 ರಲ್ಲಿ ನಿರ್ದೇಶಕರಾದರು, ಜುಲೈ 1999 ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾದರು ಮತ್ತು ಸೆಪ್ಟೆಂಬರ್ 2000 ರಲ್ಲಿ ಅಧ್ಯಕ್ಷರಾದರು.


Click it and Unblock the Notifications