ಬೆಲೆ ಏರಿಕೆ ಮದ್ಯೆಯೇ ಕರ್ನಾಟಕ ಸರ್ಕಾರ ಎಲ್ಲಾ ಸರ್ಕಾರಿ ಬಸ್ ಪ್ರಯಾಣ ದರವನ್ನು ಶನಿವಾರ ಮಧ್ಯರಾತ್ರಿಯಿಂದಲೇ ಶೇ.15 ರಷ್ಟು ಏರಿಕೆ ಮಾಡಿ ಜನಸಾಮಾನ್ಯರಿಗೆ ಶಾಕ್ ನೀಡಿತ್ತು. ಅದರಲ್ಲೂ ಪುರುಷರ ಪ್ರಯಾಣಿಕರ ಮೇಲೆ ಇದು ನೇರ ಪರಿಣಾಮ ಬೀರಿತ್ತು.
ಕೆಎಸ್‌ಆರ್‌ಟಿಸಿ ಸೇರಿ ಸರಕಾರಿ ಸ್ವಾಮ್ಯದ ಬಿಎಂಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಹಾಗೂ ಕೆಕೆಆರ್ಟಿಸಿಯ 4 ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿದ್ದು ಇದರ ಪರಿಣಾಮ ಟಿಕೆಟ್ ಮೂಲ ಪ್ರಯಾಣ ದರದಲ್ಲಿ 7 ರೂ.ಗಳಿಂದ 115 ರೂ. ವರೆಗೂ ಹೆಚ್ಚಳವಾಗಿದೆ.

ಬಸ್ ಟಿಕೆಟ್ ದರ ಹೆಚ್ಚಳ ಜಾರಿಗೆ ಬಂದು ಒಂದು ದಿನದ ನಂತರ ಇದೀಗ ಸಿದ್ದರಾಮಯ್ಯ ಸರ್ಕಾರ ಹಾಲಿನ ದರವನ್ನು ಹೆಚ್ಚಿಸಲು ಪ್ಲ್ಯಾನ್ ಹಾಕಿಕೊಂಡಿದೆ. ಕರ್ನಾಟಕ ದೇಶದಲ್ಲಿಯೇ ಅತೀ ಹೆಚ್ಚು ಹಾಲು ಉತ್ಪಾದಿಸುವ ಎರಡನೇ ರಾಜ್ಯವಾಗಿದೆ. ಕರ್ನಾಟಕ ಹಾಲು ಒಕ್ಕೂಟ ( ಕೆಎಂಎಫ್) ಅಡಿಯಲ್ಲಿ 16 ಹಾಲು ಒಕ್ಕೂಟಗಳು ಮತ್ತು ರಾಜ್ಯದಲ್ಲಿ ಸುಮಾರು 40 ಲಕ್ಷ ಹೈನುಗಾರರಿದ್ದು, ಪ್ರತಿದಿನ ಸರಾಸರಿ ಒಂದು ಕೋಟಿ ಲೀಟರ್ ಹಾಲನ್ನು ಸಂಗ್ರಹಿಸಲಾಗುತ್ತಿದೆ.
ನಂದಿನಿ ಹಾಲಿನ ದರ ಏರಿಕೆಯ ಬಗ್ಗೆ ಈ ಹಿಂದೆ ಸಿದ್ದರಾಮಯ್ಯ ಅವರು ಸುಳಿವು ನೀಡಿದ್ದರು. ಅಲ್ಲದೇ ಕೆಎಂಎಫ್‌ನ ಎಲ್ಲ 16 ಜಿಲ್ಲಾ ಹಾಲು ಒಕ್ಕೂಟಗಳಿಂದಲೂ ಹಾಗೂ ಹೈನುಗಾರರಿಂದಲೂ ಹಾಲಿನ ದರ ಹೆಚ್ಚಳ ಮಾಡುವುದಕ್ಕೆ ಬೇಡಿಕೆ ಇದೆ ಎನ್ನಲಾಗಿದೆ.
ಪಶುಸಂಗೋಪನಾ ಸಚಿವ ಕೆ ವೆಂಕಟೇಶ್ ಅವರು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, "ಹಾಲಿನ ದರವನ್ನು ಹೆಚ್ಚಿಸುವಂತೆ ಹೈನುಗಾರರು ಮತ್ತು ಇತರ ಪಾಲುದಾರರು ಒತ್ತಾಯಿಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
ಜಾನುವಾರುಗಳಿಗೆ ನೀಡುತ್ತಿರುವ ಮೇವು ಸಹಿತ ಇತರ ಆಹಾರ ಪದಾರ್ಥಗಳ ಬೆಲೆ ಏರಿಕೆ ಆಗಿದೆ. ಹೀಗಾಗಿ ರೈತರು ಹಾಲಿನ ದರವನ್ನು ಹೆಚ್ಚಿಸಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಹೈನುಗಾರರು ಲೀಟರ್‌ಗೆ 8 ರಿಂದ 10 ರೂಪಾಯಿಗಳಷ್ಟು ಬೆಲೆ ಹೆಚ್ಚಳ ಮಾಡಬೇಕು ಎಂದು ಬಯಸುತ್ತಿದ್ದಾರೆ. ಈ ಬಗ್ಗೆ ನಾವಿನ್ನೂ ಚರ್ಚೆ ಮಾಡುತ್ತಿದ್ದೇವೆ. ಚರ್ಚೆ ಬಳಿಕ ಅಂತಿಮ ತೀರ್ಮಾನ ಮಾಡುತ್ತೇವೆ. ಹೈನುಗಾರರು ಹಾಲಿನ ಮೇಲೆ ಅವಲಂಬಿತರಾಗಿದ್ದಾರೆ. ದಿನೇ ದಿನೇ ಹಾಲಿನ ಉತ್ಪಾದನೆಯಲ್ಲಿಯೂ ಹೆಚ್ಚಳ ಆಗುತ್ತಿದೆ. ನಾವು ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು. ಹೀಗಾಗಿ 5 ರೂ, 3 ರೂ, 10 ರೂ. ಮಾಡುತ್ತೇವೋ ಅದು ಇನ್ನೂ ತೀರ್ಮಾನ ಆಗಿಲ್ಲ. ಎಲ್ಲವೂ ಒಳಿತು ಕೆಡುಕುಗಳ ಬಗ್ಗೆ ವಿಮರ್ಶೆ ಮಾಡಿಯೇ ಸಿಎಂ ಜತೆ ಸಮಾಲೋಚಿಸಿ ಹಾಲಿನ ದರವನ್ನು ಏರಿಕೆ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ.
ಒಟ್ಟಾರೆ ಹಾಲಿನ ದರ ಏರಿಕೆ ಪ್ರಸ್ತಾಪ ಇರೋದು ಸತ್ಯ ಎಂದು ಸಚಿವರು ಒಪ್ಪಿಕೊಂಡಿದ್ದು, ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ಕೊಟ್ಟರೆ ಶೀಘ್ರವೇ ಹಾಲಿನ ದರ ಮತ್ತಷ್ಟು ಜಾಸ್ತಿ ಆಗುವ ಸಾಧ್ಯತೆ ಇದೆ. ಅಲ್ಲದೇ ರಾಜ್ಯದ ಬಜೆಟ್‌ಗೆ ಮುಂಚಿತವಾಗಿ, ಸರ್ಕಾರವು ತನ್ನ ಆದಾಯದ ಬಗ್ಗೆ ಸ್ಪಷ್ಟತೆಯನ್ನು ಹೊಂದಿರಬೇಕಾದ ಕಾರಣ ಶೀಘ್ರ ದರ ಏರಿಕೆ ನಿರ್ಧಾರವನ್ನು ಕೈಗೊಂಡರು ಅಚ್ಚರಿ ಇಲ್ಲ.
ನಂದಿನಿ ದೋಸೆ ಹಿಟ್ಟು ಸೂಪರ್ ಹಿಟ್
ಇನ್ನೊಂದೆಡೆ ಕೆಎಂಎಫ್ ನ ನಂದಿನಿ ಬ್ರ್ಯಾಂಡ್ ಮತ್ತೊಂದು ಮೈಲಿಗಲ್ಲು ಸಿಕ್ಕಿದ್ದು ಇತ್ತೀಚೆಗಷ್ಟೇ ಬೆಂಗಳೂರು ನ್ನಗರದಲ್ಲಿ ಪ್ರಾಯೋಗಿಕವಾಗಿ ಕೆಎಂಎಫ್ ಪರಿಚಯ ಮಾಡಿದ್ದ ಇಡ್ಲಿ ಹಾಗೂ ದೋಸೆ ಹಿಟ್ಟಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. , ಈ ಯಶಸ್ವಿ ಬೆನ್ನಲ್ಲೇ ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಈ ಹಿಟ್ಟನ್ನು ವಿತರಿಸಲು ಕೆಎಂಎಫ್ ನಿರ್ಧಾರ ಮಾಡಿದೆ.
ಕೆಎಂಎಫ್‌ನ ನಂದಿನಿ ಬ್ರ್ಯಾಂಡ್ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಆರಂಭ ಮಾಡಿರುವ ದೋಸೆ ಹಿಟ್ಟು, ಇಡ್ಲಿ ಹಿಟ್ಟು ಕೇವಲ ಮೂರು ದಿನಗಳಲ್ಲೇ 2250 ಮೆಟ್ರಿಕ್ ಟನ್‌ಗಳಷ್ಟು ಹಿಟ್ಟು ಮಾರಾಟ ಕಂಡು ಸೂಪರ್ ಹಿಟ್ ಎಂದೆಣಿಸಿಕೊಂಡಿತ್ತು. ಈ ಭಾರೀ ಯಶಸ್ಸಿನ ಹಿನ್ನೆಲೆ ಮುಂದಿನ ಒಂದು ವಾರದೊಳಗೆ ಇತರ ಜಿಲ್ಲೆಗಳಲ್ಲೂ ನಂದಿನಿ ಹಿಟ್ಟಿನ ಮಾರಾಟ ಆರಂಭ ಮಾಡಲು ಕೆಎಂಎಫ್ ಮುಂದಾಗಿದೆ.


Click it and Unblock the Notifications